Advertisement

ರಾಜ್ಯ ಸರ್ಕಾರ ಕೃಷಿ ಕಾಯ್ದೆ ರದ್ದುಪಡಿಸಲಿ

02:47 PM Mar 14, 2022 | Team Udayavani |

ಹೊಸಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಯೋಜನೆಗಳನ್ನು ಜಾರಿಗೆ ತರುತ್ತಿವೆ. ರಾಜ್ಯ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ|ನಂಜುಂಡಸ್ವಾಮಿ ಸ್ಥಾಪಿತ)ಯ ರಾಜ್ಯಾಧ್ಯಕ್ಷ ಜಿಜಿಹಳ್ಳಿ ಬಿ. ನಾರಾಯಣಸ್ವಾಮಿ ಒತ್ತಾಯಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನ ಬೆಳೆಯುವ ರೈತರ ಸಮಸ್ಯೆಗೆ ಸರ್ಕಾರಗಳು ಕಿವಿಗೊಡಬೇಕು. ಕಾವೇರಿ, ಮಹದಾಯಿ, ತುಂಗಭದ್ರಾ, ಮೇಕೆದಾಟು ಸೇರಿದಂತೆ ವಿವಿಧ ಕಡೆಯಲ್ಲಿ ರೈತಪರ ಯೋಜನೆಗಳನ್ನು ಕೈಗೆತ್ತಿಕೊಂಡು ಸಾಕಾರಗೊಳಿಸಬೇಕು ಎಂದು ಹೇಳಿದರು. ಹೊಸಪೇಟೆಯ ಚಿತ್ತವಾಡ್ಗಿಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಬಂದ್‌ ಆಗಿದೆ. ಹಾಗಾಗಿ ಈ ಭಾಗದಲ್ಲಿ ಹೊಸದಾಗಿ ಕಾರ್ಖಾನೆ ಸ್ಥಾಪಿಸಬೇಕು. ಬಚಾವತ್‌ ಆಯೋಗದ ಪ್ರಕಾರ ವಿಜಯನಗರದ ಕಾಲುವೆಗಳನ್ನು ನೆಚ್ಚಿರುವ ಹೊಸಪೇಟೆ ಭಾಗದ ರೈತರ ಜಮೀನುಗಳಿಗೆ ಪ್ರತಿ ವರ್ಷ 7.5 ಟಿಎಂಸಿ ನೀರು ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ರೈತರು ವರ್ಷವೀಡಿ ಹೋರಾಟ ನಡೆಸಿದರೂ ಕ್ಯಾರೇ ಎನ್ನದವರು ಗೆಲುವು ಸಾಧಿಸುತ್ತಾರೆ ಎಂದರೆ ಮುಂದಿನ ದಿನಗಳಲ್ಲಿ ರೈತರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು. ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲೂ ರೈತ ಸಂಘಟನೆ ಮಾಡಲಾಗುವುದು. ರೈತರು ಎದುರಿಸುತ್ತಿರುವ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷರ ನೇಮಕ: ರೈತ ಹೋರಾಟಗಾರ ಸಿ.ಎ. ಗಾಳೆಪ್ಪ ಅವರನ್ನು ರೈತ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ಆದೇಶಪತ್ರ ಹಸ್ತಾಂತರಿಸಿದರು. ರೈತ ಸಂಘಟನೆಯನ್ನು ವಿಜಯನಗರದಲ್ಲಿ ಬಲಪಡಿಸಲು ಸಲಹೆ ನೀಡಿದರು. ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ, ಹಗರಿಬೊಮ್ಮನಹಳ್ಳಿ ತಾಲೂಕಾಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಹಿರೇಸೊಬಟಿ ನಾಗರಾಜ, ಕೆಚ್ಚಿಬಂಡಿ ಹನುಮಂತ, ಮರಿಯಮ್ಮನಹಳ್ಳಿ ಹೋಬಳಿ ಅಧ್ಯಕ್ಷ ಜಿ. ಸೋಮ, ಉಪಾಧ್ಯಕ್ಷ ವೆಂಕಟೇಶ, ಕಾರ್ಯದರ್ಶಿ ಕೆಂಚಪ್ಪ, ಮುಖಂಡರಾದ ಸರಳಾಕಾವ್ಯ, ರಾಜು ಗುಜ್ಜಲ, ಹೊನ್ನೂರ ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next