Advertisement

ರಫ್ತು ಉದ್ಯಮದಲ್ಲಿ ರಾಜ್ಯ ನಂ.1 ಆಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10:32 PM Jul 22, 2023 | Team Udayavani |

ಬೆಂಗಳೂರು: ರಫ್ತು ಉದ್ಯಮಗಳಿಗೆ ಉತ್ತೇಜನ ನೀಡುವ ಹೊಸ ಕೈಗಾರಿಕಾ ನೀತಿ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಕರ್ನಾಟಕವನ್ನು ರಫ್ತು ಉದ್ಯಮದಲ್ಲಿ ನಂ.1 ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕೈಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತ ನಾಡಿದ ಅವರು, ರಾಜ್ಯದಲ್ಲಿ 1980ರಿಂದಲೂ ಪ್ರಗತಿಪರ ಕೈಗಾರಿಕಾ ನೀತಿ ಇದೆ. ಹಿಂದೆ ಆರ್‌.ವಿ. ದೇಶಪಾಂಡೆ ಅವರು ದೀರ್ಘ‌ಕಾಲ ಕೈಗಾರಿಕಾ ಸಚಿವರಾಗಿದ್ದರು. ಈಗ ಎಂ.ಬಿ. ಪಾಟೀಲ್‌ ಸಚಿವ ರಾಗಿದ್ದಾರೆ. ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಬಗ್ಗೆ ಸಾಕಷ್ಟು ಉತ್ತಮ ಆಶಯಗಳನ್ನು ಹೊಂದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ರಫ್ತು ಉದ್ಯಮಕ್ಕೆ ನೆರವಾಗುವ ರೀತಿಯಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ರಫ್ತು ಉದ್ದಿಮೆದಾರರೊಂದಿಗೆ ಚರ್ಚಿಸಿಯೇ ಈ ನೀತಿಯನ್ನು ತರುತ್ತೇವೆ ಎಂದರು.

ರಾಜ್ಯದಲ್ಲಿ ಕೈಗಾರಿಕೆಗೆ ಹೆಚ್ಚು ಪ್ರೋತ್ಸಾಹ ದಾಯಕ ವಾತಾವರಣವಿದೆ. ಕೈಗಾರಿಕೆಗಳು ಬೆಳೆದರೆ ನಿರುದ್ಯೋಗ ನೀಗುತ್ತದೆ. ದೇಶದ ಆರ್ಥಿಕತೆ ಬೆಳೆಯುತ್ತದೆ. ಇದಕ್ಕೆ ಕಾನೂನು ಸುವ್ಯವಸ್ಥೆಯೂ ಮುಖ್ಯವಾಗುತ್ತದೆ. ಅದನ್ನು ಕಾಪಾಡಿಕೊಂಡು ಹೋಗಲೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಡಿಸೆಂಬರ್‌ನಿಂದ ಯುವನಿಧಿ, ಕೌಶಲ್ಯ ಅಭಿವೃದ್ಧಿ: ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೌಶಲ್ಯ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೆವು. ಅಧಿಕಾರದ ಕೊನೆಯ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಇಲಾಖೆಯನ್ನೂ ಸ್ಥಾಪಿಸಿದ್ದೆವು. ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಶಕ್ತಿ ಕೊಡುವ ಕೆಲಸ ಮಾಡಲಿಲ್ಲ. ನಾವೀಗ ಕೈಗಾರಿಕಾ ಮಾರುಕಟ್ಟೆಯ ಬೇಡಿಕೆ ನೀಗಿಸುವ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತೇವೆ. ಅದೇ ರೀತಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪದವೀಧರರಿಗೆ 1500ರೂ. ಯುವನಿಧಿಯನ್ನು ಡಿಸೆಂಬರ್‌ನಿಂದ ನೀಡುತ್ತೇವೆ ಎಂದು ಸಿಎಂ ಮಾಹಿತಿ ನೀಡಿದರು.

2ನೇ ದರ್ಜೆ ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸಿದರೆ ಪ್ರೋತ್ಸಾಹ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಜ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್‌ ಸೇರಿ ಹಲವು ವೃತ್ತಿಪರ ಕಾಲೇಜುಗಳಿವೆ. ನಮ್ಮಲ್ಲಿನ ಜ್ಞಾನದ ಶಕ್ತಿ, ಸಂಸ್ಕೃತಿ, ತಂತ್ರಜ್ಞಾನಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುವಂತಿವೆ. ಉದ್ಯೋಗದಾತರು ಶಕ್ತಿಶಾಲಿ ಆದರೆ ಸರ್ಕಾರ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಮಟ್ಟದ ನೆರವು ಸಿಗುತ್ತದೆ. ಐಟಿ ರಫ್ತಿನಲ್ಲಿ ನಾವು ಮುಂದಿದ್ದೇವೆ. ಹೊರದೇಶಗಳಿಗೆ ಇಲ್ಲಿನ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ದೇಶಕ್ಕೆ ಮರುಕೊಡುಗೆ ನೀಡಲು ಅನಿವಾಸಿ ಭಾರತೀಯರೂ ಉತ್ಸುಕರಾಗಿದ್ದಾರೆ.

Advertisement

ನಮ್ಮಲ್ಲಿನ ಜ್ಞಾನಭಂಡಾರ ಮತ್ತು ಕಾನೂನುಗಳು ಇವೆಲ್ಲಕ್ಕೂ ಪೂರಕವಾಗಿವೆ. ಶಿಕ್ಷಣ ಸಂಸ್ಥೆಗಳಿಂದ ಅಪಾರ ಪ್ರಮಾಣದಲ್ಲಿ ಹೊರಬರುತ್ತಿರುವ ಪ್ರತಿಭೆಗಳಿಗೆ ಉದ್ಯೋಗದ ಅವಕಾಶಗಳು ಸಿಗಬೇಕು. ಹೀಗಾಗಿ ಬೆಂಗಳೂರನ್ನು ಹೊರತುಪಡಿಸಿ, 2 ಮತ್ತು 3ನೇ ದರ್ಜೆಯ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರಬೇಕು. ಇದಕ್ಕೆ ನಮ್ಮ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ 12 ವಿಭಾಗಗಳ ಅಡಿಯಲ್ಲಿ ಬಯೋಕಾನ್‌, ಟೊಯೋಟಾ ಕಿರ್ಲೋಸ್ಕರ್‌, ಎಚ್‌ಎಎಲ್‌, ಮೈಸೂರು ಪೈಂಟ್ಸ್‌ ಮತ್ತು ವಾರ್ನಿಶ್‌, ಗೋಕುಲ್‌ದಾಸ್‌ ಎಕ್ಸ್‌ಪೋರ್ಟ್ಸ್, ಎಕ್ಸ್‌ಡಿಯನ್‌ ಸಲ್ಯೂಶನ್ಸ್‌ ಸೇರಿ ಒಟ್ಟು 68 ಉದ್ಯಮಿಗಳಿಗೆ 2017-18, 2018-19, 2019-20ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮನ್‌ ಫೆಸಿಲಿಟೀಸ್‌ ಸೆಂಟರ್‌ ಸ್ಥಾಪನೆ
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಾತನಾಡುತ್ತಾ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಕಾಮನ್‌ ಫೆಸಿಲಿಟೀಸ್‌ ಸೆಂಟರ್‌ಗಳನ್ನು ಸ್ಥಾಪಿಸಿ, ಸೌಲಭ್ಯ ಒದಗಿಸಲು ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಜತೆ ವಿಚಾರ ವಿನಿಮಯ ನಡೆಸಲಾಗಿದೆ. ಇದರಲ್ಲಿ ಆ ಸಂಸ್ಥೆ ಶೇ.70 ಮತ್ತು ರಾಜ್ಯ ಸರ್ಕಾರ ಶೇ.30ರಷ್ಟು ಬಂಡವಾಳ ಹೂಡಲಿವೆ. ಈ ಕುರಿತು ಸಿಎಂ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದರು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕಾರ್ಯವಿಧಾನವನ್ನು ಸಂಪೂರ್ಣ ಪಾರದರ್ಶಕವನ್ನಾಗಿ ಮಾಡಿ, ಉದ್ಯಮಿಗಳು ಸುಗಮವಾಗಿ ತಮ್ಮ ಚಟುವಟಿಕೆ ನಡೆಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕ ವಾಗಿ ಈಗಾಗಲೇ ಭಾರೀ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಿ, ವಿಷನ್‌ ಗ್ರೂಪ್‌ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next