Advertisement

ಮುಗುಳುನಗೆ ಉತ್ತರವಾಗಲಿ

10:25 PM Sep 22, 2019 | Sriram |

ಬಸ್ಸಿನಲ್ಲಿ ದೂರದೂರಿಗೆ ಪಯಣಿಸುತ್ತಿದ್ದೆ. ಮೊಬೈಲ್‌ನಲ್ಲಿ ಹಾಕಿದ್ದ “ಹಾಡು ಹಳೆಯದಾದರೇನು ಭಾವ ನವನವೀನ’ ಹಾಡು ಮೆಲುವಾಗಿ ಕೇಳಿಸುತ್ತಿತ್ತು. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿ ಫೋನಿನಲ್ಲಿ ಅಳುತ್ತಾ ಸಾಯುವ ಮಾತನಾಡುತ್ತಿದ್ದಳು. ಅವಳ ಧ್ವನಿ ಅಲ್ಪ ಸ್ವಲ್ಪ ಕೇಳಿಸುತ್ತಿತ್ತು. ಅವಳಿದ್ದ ಪರಿಸ್ಥಿತಿಯಲ್ಲಿ ಅವಳಿಗದು ದೊಡ್ಡ ಬಂಡೆ ಕಲ್ಲಿನಂತಹ ಸಮಸ್ಯೆ, ಅದನ್ನು ಸರಿಸಲೂ ಸಾಧ್ಯವಿಲ್ಲ ಎಂಬರ್ಥದಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದಳು.

Advertisement

ಇಂದು ಸರಳವಾದ ಬದುಕನ್ನು ಕಗ್ಗಂಟು ಮಾಡಿಕೊಳ್ಳುವವರೇ ಹೆಚ್ಚು. ಸಮಸ್ಯೆ ಸಣ್ಣದಾಗಿರುತ್ತದೆ. ಆದರೆ ನಾವೇ ಅದನ್ನು ದೊಡ್ಡ ಸಮಸ್ಯೆ ಎಂದು ಬಿಂಬಿಸಿ ಕುಸಿಯುತ್ತಾ ಹೋಗುತ್ತೇವೆ. ಅದರಿಂದ ಇಂದು ದಿನದಿಂದ ದಿನಕ್ಕೆ ಆತ್ಮಹತ್ಯೆ, ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತಿವೆ. ನಮ್ಮ ಪಕ್ಕದ ಮನೆಯ ಅಜ್ಜಿ ಇಂದಿನ ಯುವಜನತೆಯ ಕುರಿತು ಮಾತನಾಡಿಸಿದಾಗಲೆಲ್ಲ ನಮ್ಮ ಕಾಲದಲ್ಲಿ ಎಲ್ಲ ಹೀಗಿರಲಿಲ್ಲ ಎನ್ನುತ್ತಿದ್ದರು. ಕೆಲವೊಮ್ಮೆ ಹೌದು ಎನಿಸುತ್ತದೆ. ನಾವು ಮುಂದುವರಿದಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದೇವೆ. ಆದರೆ ಇನ್ನೊಂದು ಕಡೆಯಿಂದ ದಿನದಿಂದ ದಿನಕ್ಕೆ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುತ್ತಿದ್ದೇವೆ.

ಪ್ರತಿಯೊಬ್ಬರಿಗೂ ತನ್ನದೇ ಆದ ಕಷ್ಟಗಳಿರುತ್ತವೆ. ಅದನ್ನು ತೆಗೆದುಕೊಳ್ಳುವ ರೀತಿ ಅದಕ್ಕೆ ಸ್ಪಂದಿಸುವ ರೀತಿ ಭಿನ್ನವಾಗಿರುತ್ತದೆ ಎಂದು ಯೋಚಿಸದ ನಾವು ನಮಗೆ ಕಷ್ಟಗಳೂ ಬಂದಾಗಲೆಲ್ಲ ಅದು ತನಗೆ ಮಾತ್ರ ಬರುತ್ತದೆ ಅಂದುಕೊಳ್ಳುತ್ತೇವೆ. ತನ್ನ ಪಕ್ಕದಲ್ಲಿರುವವರು ಖುಷಿಯಾಗಿದ್ದಾರೆ. ನಾನು ಅವ‌ರಾಗಬೇಕಿತ್ತು ಎಂದೆಲ್ಲಾ ಯೋಚಿಸುತ್ತೇವೆ. ಎಷ್ಟೇ ಸಮಸ್ಯೆಗಳು ಬಂದರೂ ಆತ್ಮವಿಶ್ವಾಸದಿಂದ ಇರಬೇಕು. ಕಷ್ಟಗಳ ಕುರಿತು ಆಡಿಕೊಳ್ಳುವವರ ಮುಂದೆ ಮುಗಳು ನಗುತ್ತಾ ಬದುಕಬೇಕು. ಕಷ್ಟವನ್ನು ಮುಗುಳು ನಗುತ್ತಾ ಎದುರಿಸಲು ಕಲಿತರೆ ಆತ್ಮಹತ್ಯೆಯಂತಹ ಹೇಡಿತನದ ಯೋಚನೆಗಳೂ ಮನಸ್ಸಿನತ್ತ ಸುಳಿಯುವುದಿಲ್ಲ. ಯುವಜನತೆಗೆ ಇಂದು ಬೇಕಾಗಿರುವುದು ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಕಲೆ.

ಮಗು ಅಂಬೆಗಾಲಿಡುತ್ತಾ, ಎಡವುತ್ತಾ ಬಿದ್ದರೂ ಮತ್ತೆ ಎದ್ದು ನಡೆಯಲು ಕಲಿಯುತ್ತದೆ. ಬಿದ್ದು ಎಷ್ಟೇ ಏಟು ಮಾಡಿಕೊಂಡರೂ ಮತ್ತೆ ಎದ್ದು ಮುಗುಳು ನಗೆಯೊಂದಿಗೆ ನಡೆಯಲು ಆರಂಭಿಸುತ್ತದೆ. ಆದರೆ ನಾವು ಇಂದು ಪ್ರತಿಯೊಂದರಲ್ಲೂ ಗೆಲ್ಲಬೇಕು, ಅದರಲ್ಲೂ ಮೊದಲ ಪ್ರಯತ್ನದಲ್ಲೇ ಗೆಲ್ಲಬೇಕು ಎನ್ನುವ ಮನೋಭಾವ ಬೆಳೆಸುತ್ತಾ ಹೋಗುತ್ತಿದ್ದೇವೆ. ಗೆಲುವಿನ ಹಿಂದೆ ಓಡುವ ನಮಗೆ ಸೋಲು ಎಂದರೆ ಸಹಿಸಲಾಗದ್ದು. ಸೋಲು ಗೆಲುವಿನ ಮೊದಲ ಮೆಟ್ಟಿಲು ಎನ್ನುವುದನ್ನು ಮರೆತಿದ್ದೇವೆ.

-ರಂಜಿನಿ ಮಿತ್ತಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next