ಜೇವರ್ಗಿ: ಸಂಘಟನೆಯಿಂದ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ, ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕುರುಬ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರದ ಸೌಲಭ್ಯಗಳನ್ನು ಸಮಾಜದ ಪ್ರತಿ ಮನೆಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಯುವ ಘಟಕದ ನೂತನ ರಾಜ್ಯಾಧ್ಯಕ್ಷ ಭಗವಂತ್ರಾಯಗೌಡ ಪಾಟೀಲ ಅಂಕಲಗಿ ಹೇಳಿದರು.
ಪಟ್ಟಣದ ಶ್ರೀ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಕುರುಬ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ಭಾಗದವರಿಗೆ ಕುರುಬ ಸಮಾಜದ ರಾಜ್ಯ ಘಟಕದಲ್ಲಿ ಪ್ರಾತಿನಿಧ್ಯ ದೊರಕಿರುವುದು ಸಂತಸದ ವಿಷಯ ಎಂದು ಹೇಳಿದರು.
ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಸಮಾಜದ ಪ್ರಗತಿಗೆ ಹಗಲಿರಳು ಶ್ರಮಿಸಲಾಗುವುದು. ರಾಜಕೀಯವಾಗಿ, ಆರ್ಥಿಕವಾಗಿ ಈ ಸಮಾಜ ಬಲಪಡಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು. ಹಿಂದುಳಿದ ಸಮಾಜವನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕುರುಬ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಕುರುಬ ಸಮಾಜದ ತಾಲೂಕು ಘಟಕದ ಅಧ್ಯಕ್ಷ ನಾಗಣ್ಣ ಗಡ್ಡದ್, ನೆಲೋಗಿ ಗ್ರಾಪಂ ಅಧ್ಯಕ್ಷ ಬೈಲಪ್ಪ ನೇದಲಗಿ, ಮುಖಂಡರಾದ ಸಮಾಧಾನ ಪೂಜಾರಿ, ನಿಂಗಣ್ಣ ಭಂಡಾರಿ, ರಾಮಣ್ಣ ಪೂಜಾರಿ, ಈರಣ್ಣ ನರಿಬೋಳ, ಶರಣಗೌಡ ಸರಡಗಿ, ರಾಜು ರದ್ಧೇವಾಡಗಿ, ಸಂತೋಷ ಮಲ್ಲಾಬಾದ, ಸಿದ್ರಾಮ ಗಡ್ಡದ್, ಚಂದ್ರಶೇಖರ ನೇರಡಗಿ, ರಾಜು ಮುತ್ತಕೋಡ, ಮಾಳು ಹಿಪ್ಪರಗಿ, ಶಿವಶರಣಪ್ಪ ಮಂದೇವಾಲ, ಕರೆಪ್ಪ ಪೂಜಾರಿ ಕಣಮೇಶ್ವರ, ನಿಂಗಣ್ಣ ರದ್ಧೇವಾಡಗಿ, ರಾಜು ವರವಿ, ಪ್ರಕಾಶ ಪೂಜಾರಿ, ಶಂಕರಲಿಂಗ ಕರಕಿಹಳ್ಳಿ, ಶರಣು ಹಂಗರಗಿ, ಮಲ್ಲಿಕಾರ್ಜುನ ಗಂವ್ಹಾರ, ಬೀರು ಕುನ್ನೂರ, ಶಿವು ಇಟಗಾ, ಶರಣು ಚನ್ನೂರ, ದೇವು ಹೆಗ್ಗಿನಾಳ, ಮಾಳು ಮುತ್ತಕೋಡ ಮತ್ತಿತರರು ಇದ್ದರು.