ನಗರದ ಈಡನ್ ಕ್ಲಬ್ ಸಮೀಪ ರಾಜ ಕಾಲುವೆ ಹರಿಯುತ್ತಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಳೆದ ವರ್ಷ ರಾಜಕಾಲುವೆಯ ಒಂದು ಭಾಗ ಕುಸಿದು ಅಪಾಯದ ಸೂಚನೆ ನೀಡುತ್ತಿತ್ತು. ಈಗ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅರ್ಧದಲ್ಲಿದ್ದು, ಮಳೆ ಸುರಿದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಭಾಗದ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಪಾಚಿ ತುಂಬಿದೆ. ಒಂದು ಭಾಗದಲ್ಲಿ ತಡೆಗೋಡೆ ನಿರ್ಮಾಣ ನಡೆಯುತ್ತಿದ್ದು, ಸಿಮೆಂಟ್, ಮಣ್ಣನ್ನು ಕಾಲುವೆಯಲ್ಲೇ ರಾಶಿ ಹಾಕಲಾಗಿದೆ. ರಾಜಕಾಲುವೆ ಕೆಲವು ಕಡೆಗಳಲ್ಲಿ ತುಂಬಾ ಕಿರಿದಾಗಿದ್ದು, ನೀರು ಸರಾಗವಾಗಿ ಹರಿಯಲು ಕಷ್ಟ ಎಂಬಂತಿದೆ.
ಬೋಳೂರಿನ ಸುಲ್ತಾನ್ ಬತ್ತೇರಿ ಬಳಿ ರಾಜಕಾಲುವೆಯಿದೆ. ಮೇಲ್ಮಟ್ಟದವರೆಗೆ ಗಲೀಜು ನೀರು ಹರಿಯುತ್ತಿದ್ದು, ನದಿ ಸೇರುತ್ತಿದೆ. ಉರ್ವ ಮಾರುಕಟ್ಟೆ ಸುತ್ತಲಿನ ಮಳೆ ನೀರು ಸಣ್ಣ ಕಾಲುವೆಯ ಮೂಲಕ ಇದೇ ರಾಜಕಾಲುವೆ ಸೇರುತ್ತದೆ. ಬಹುತೇಕ ಕಡೆ ಕಾಲುವೆ ತೀರಾ ಕಿರಿದಾಗಿದೆ. ಹೀಗಾಗಿ ಮಳೆ ಸುರಿದರೆ ತಗ್ಗು ಪ್ರದೇಶಗಳು ನೆರೆಯಿಂದ ಆವೃತವಾಗುತ್ತವೆ.
ಪಂಪ್‌ವೆಲ್‌ನಲ್ಲಿ ಬಸ್ ಟರ್ಮಿನಲ್ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗದಲ್ಲಿ ರಾಜಕಾಲುವೆಯಿದ್ದು, ಕೆಲವು ಕಡೆ ತಡೆಗೋಡೆ ಕೆಲಸ ನಡೆದಿದೆ. ಕಾಲುವೆಗೆ ಕೊಳಚೆ ನೀರು ಸೇರುವುದಕ್ಕೆ ತಡೆ ಹಾಕಬೇಕಿದೆ. ಗಿಡ-ಬಳ್ಳಿ, ಪೊದೆ ಸ್ವಚ್ಛಗೊಳಿಸುವ ಕೆಲಸವೂ ಆಗಬೇಕು. ಕದ್ರಿ ದೇವಸ್ಥಾನದ ಹಿಂಭಾಗದಲ್ಲಿಯೂ ರಾಜಕಾಲುವೆಯಿದ್ದು, ಕಲ್ಲು, ಮಣ್ಣಿನಿಂದ ಕೂಡಿದೆ. ಇಲ್ಲಿ ಹೂಳೆತ್ತಬೇಕು. ಕಕ್ಕೆಬೆಟ್ಟು, ಕಾರ್ಮಿಕ ಕಾಲನಿಯಲ್ಲಿ ರಾಜಕಾಲುವೆ ಹೂಳೆತ್ತುವ ಕಾಮಗಾರಿ ನಡೆದಿದೆ. ಬೆಂಗ್ರೆ ಸುತ್ತಲಿನ ಪ್ರದೇಶಗಳಲ್ಲಿ ರಾಜಕಾಲುವೆ ಸ್ವಚ್ಛತೆಗೆ ಮತ್ತಷ್ಟು ಗಮನ ನೀಡಬೇಕಿದೆ.
ಚರಂಡಿ ಸುಧಾರಣೆ ಅಗತ್ಯ
ರಾಜಕಾಲುವೆಯ ಜತೆಗೆ ಚರಂಡಿ ವ್ಯವಸ್ಥೆಯನ್ನೂ ಸುಧಾರಿಸುವ ಅಗತ್ಯವಿದೆ. ಈ ಎಲ್ಲ ವಾರ್ಡ್‌ಗಳಲ್ಲಿ ಚರಂಡಿ ಮತ್ತಷ್ಟು ಸುಧಾರಣೆಗೊಳ್ಳಬೇಕಾಗಿದ್ದು, ಸ್ವಚ್ಛತೆ ಕಾಮಗಾರಿ ಆರಂಭಗೊಂಡಿಲ್ಲ. ಕೆಲವು ಚರಂಡಿಗಳಲ್ಲಿ ಮಣ್ಣು, ದೊಡ್ಡ ಗಿಡಗಳು, ಪೊದೆ ತುಂಬಿದೆ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಗಮನ ನೀಡದಿದ್ದರೆ ಮಳೆ ನೀರು ಸರಾಗವಾಗಿ ಹರಿಯಲು ಅಸಾಧ್ಯ.