ಜಮಖಂಡಿ: ಮನುಷ್ಯನು ಉತ್ತಮ ಸೇವೆಗಳೊಂದಿಗೆ ನೋಡುವ ದೃಷ್ಟಿಕೋನ ಒಳ್ಳೆಯದಾಗಿದ್ದರೆ ಮಾತ್ರ ದೇವರು ಅವರ ಸೇವೆ ಮೆಚ್ಚುಕೊಳ್ಳುತ್ತಾನೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ಧ ಶ್ರೀ ಹೇಳಿದರು.
ನಗರದ ಓಲೇಮಠದ ಆವರಣದಲ್ಲಿ ಡಾ| ಚನ್ನಬಸವ ಶ್ರೀಗಳ ಶೂನ್ಯಪೀಠಾರೋಹಣದ ರಜತ ಮಹೋತ್ಸವ ಮತ್ತು 60ನೇ ವರ್ಧಂತಿ ಮಹೋತ್ಸವ, ಮೂರ್ತಿಗಳ ಪ್ರತಿಷ್ಠಾಪನೆ, ಮೂರು ಗ್ರಂಥಗಳ ಬಿಡುಗಡೆ ಹಾಗೂ ಗಣ್ಯರ ಸತ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ
ಮಾತನಾಡಿದರು. ಜ್ಞಾನಕ್ಕಾಗಿ ಜೀವ ಹಂಬಲಿಸುತ್ತದೆ. ಜ್ಞಾನ ಪಡೆದುಕೊಳ್ಳಲು ದೊಡ್ಡವರ ಮಾತುಗಳನ್ನು ಆಲಿಸಬೇಕು. ದಾರ್ಶನಿಕರ ಮಾತಿನಲ್ಲಿ ಹೇಗೆ ಬದುಕಬೇಕೆಂದು ಮಹತ್ವ ಅಡಗಿರುತ್ತದೆ. ಬದುಕುವುದು ಒಂದು ಕಲೆಯಾಗಿದೆ. ನಾವುಗಳು ಮಾಡುವ ಸೇವೆ, ಜೀವನ
ನೋಡಿ ದೇವರು ಮೆಚ್ಚಿದಾಗ ಮಾತ್ರ ನಮ್ಮ ಜೀವನ ಸಾರ್ಥಕತೆಯಾಗಲಿದೆ ಎಂದರು.
ವಿಜಯಪುರ ವನ ಶ್ರೀ ಮಠದ ಜಯಬಸವರಾಜ ಶ್ರೀ ಮಾತನಾಡಿ, ಆಚಾರ ವಿಚಾರಗಳ ಕುರಿತು ಉಪದೇಶ ಮಾಡುವ ಜನ ಬಹಳಷ್ಟಿದ್ದಾರೆ. ಶರಣರ ತತ್ವಗಳನ್ನು ತಿಳಿದುಕೊಂಡು ಅವರು ದಾರಿಯಲ್ಲಿ ನಡೆದಾಗ ಮಾತ್ರ ಜೀವನ ಪಾವನವಾಗಲಿದೆ. ಪರಂಪರೆ ಮೂಲಗಳನ್ನು ಎತ್ತಿ ಹಿಡಿದಾಗ ಮಾತ್ರ ಮುಂದೆ ಬರಲು ಸಾಧ್ಯ. ಶರಣರ ವಚನ, ಸಾಹಿತ್ಯಗಳನ್ನು ಅರ್ಥೈಸಿಕೊಂಡಾಗ ಮಾತ್ರ ಆಚಾರ, ವಿಚಾರ ತಿಳಿದುಕೊಳ್ಳಲು ಸಾಧ್ಯ ಎಂದರು.
ಕನ್ನಡ ಸಂಘದ ಅಧ್ಯಕ್ಷ, ಉಧ್ಯಮಿ ಜಗದೀಶ ಗುಡಗುಂಟಿ ಉದ್ಘಾಟಿಸಿ ಮಾತನಾಡಿದರು. ಜಂಬಗಿ ಅಡಸಿದ್ದೇಶ್ವರ ಶಿವಾಚಾರ್ಯರು, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀ ಆಶೀರ್ವಚನ ನೀಡಿದರು. ಓಲೇಮಠದ ಡಾ| ಚನ್ನಬಸವ ಶ್ರೀ, ಎಂ.ಸಿ. ಗೋಂದಿ, ಆರ್.ಎಸ್. ಅಕ್ಕಿ, ಕೆ.ಕೆ. ತುಪ್ಪದ, ಪಿ.ಎನ್. ಪಾಟೀಲ, ಮಲ್ಲಿಕಾರ್ಜುನ ಹೊಳಗಿ, ಮಹಾದೇವ ಕಂಕಾಳೆ, ಶಿವಲಿಂಗಯ್ಯ ಹಿರೇಮಠ, ನಾಗಪ್ಪ ಮುಕ್ಕನವರ ಇದ್ದರು. ನ್ಯಾಯವಾದಿ ರವಿ ಯಡಹಳ್ಳಿ ಸ್ವಾಗತಿಸಿದರು. ಉಪನ್ಯಾಸಕ ಡಾ|ಎನ್ .ವಿ.ಅಸ್ಕಿ ನಿರೂಪಿಸಿ, ವಂದಿಸಿದರು.