ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿರುವುದು ರಾಜ್ಯದ ನಾಗರಿಕ ಪ್ರಜ್ಞೆಯೇ ತಲೆತಗ್ಗಿಸುವಂತೆ ಮಾಡಿದ ಘಟನೆ.
1968ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಹೊಸ ಸುಧಾರಣೆಗೆ ಅಂಕಿತ ಹಾಕಿದ್ದು ಕರ್ನಾಟಕ. ಆಗ ಉಡುಪಿಯಲ್ಲಿ ಇಂತಹ ಮಾದರಿ ಕ್ರಮವನ್ನು ಕೈಗೊಳ್ಳಲಾಗಿತ್ತು. ಅಂಥ ಹಿರಿಮೆ ಹೊಂದಿರುವ ರಾಜ್ಯದಲ್ಲಿ ಮಾಲೂರಿನಂತಹ ಘಟನೆ ನಡೆದಿರುವುದು ಅಕ್ಷಮ್ಯ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸರಕಾರ ತೆರೆದಿರುವ ಮೂಲ ಉದ್ದೇಶವೇ ಬಡ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ, ಸೌಲಭ್ಯ, ಪೌಷ್ಟಿಕ ಆಹಾರ, ಉತ್ತಮ ವಾತಾವರಣ ಕಲ್ಪಿಸಿ ಅವರನ್ನು ಉತ್ತಮ ಪ್ರಜೆಗಳಾಗಿ ರೂಪುಗೊಳಿಸುವುದು. ಈ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ, ಬಟ್ಟೆಬರೆ, ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇಂತಹ ವಸತಿ ಶಾಲೆಯೊಂದರಲ್ಲಿ ಸಂಬಂಧಪಟ್ಟವರು ಮಕ್ಕಳನ್ನು ಇಂಥ ಕೃತ್ಯಕ್ಕೆ ಬಳಸಿ ರುವುದು ಹೇಯ ಮತ್ತು ನಾಗರಿಕರಲ್ಲಿ ವ್ಯಾಕುಲತೆಯನ್ನು ಉಂಟು ಮಾಡುವಂಥದ್ದು.
ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಬಹಳ ಕಾಲವಾಗಿದೆ. ಶೌಚ ಗುಂಡಿಗೆ ಇಳಿಯುವುದು, ಅಲ್ಲಿಂದ ಮಲವನ್ನು ಬುಟ್ಟಿಗಳಲ್ಲಿ ತುಂಬಿಸಿ ತಲೆಯ ಮೇಲೆ ಹೊತ್ತು ಊರ ಹೊರಗೆ ವಿಲೇವಾರಿ ಮಾಡುವುದು ಮಲ ಹೊರುವ ವೃತ್ತಿಯ ಸ್ಥೂಲ ಚಿತ್ರಣ. ಇದು ಮಾನವ ಘನತೆಗೆ ಕುಂದು ತರುವ ವೃತ್ತಿ ಎಂಬುದೇ ಪ್ರಮುಖ ಆಯಾಮ. ಇದರೊಂದಿಗೆ ಈ ಕೆಲಸದಲ್ಲಿ ಎದುರಾಗಬಹುದಾದ ಅಪಾಯಗಳ ಕುರಿತಾದದ್ದು. ಶೌಚಗುಂಡಿಯಲ್ಲಿ ವಿಷಾನಿಲಗಳು ಇರುವ ಸಾಧ್ಯತೆ ಹೆಚ್ಚು, ಇದರ ದುಷ್ಪರಿಣಾಮವು ಸಂಬಂಧಪಟ್ಟ ಕಾರ್ಮಿಕರ ಆರೋಗ್ಯದ ಮೇಲೆ ಬೀರಬಹುದು.
ಬಹುಮುಖ್ಯವಾಗಿ ನಾಗರಿಕವಾಗಿ ಸಹ್ಯವಲ್ಲದನ್ನು ನಿಷೇಧಿಸಲೇಬೇಕಲ್ಲವೇ? ಅದು ನಾಗರಿಕ ಸಮಾಜದ ಕರ್ತವ್ಯವೂ ಹೌದು, ಜವಾಬ್ದಾರಿಯೂ ಹೌದು. ಇಷ್ಟಾದರೂ ಈ ವೃತ್ತಿ ಅಲ್ಲಲ್ಲಿ ಚಾಲ್ತಿಯಲ್ಲಿ ಇದೆ ಎಂಬುದು ತಲೆತಗ್ಗಿಸುವಂತಹ ವಿಷಯವಷ್ಟೇ ಅಲ್ಲ, ನಮ್ಮ ಆಡಳಿತ ವ್ಯವಸ್ಥೆಯ ಲೋಪಕ್ಕೆ ನಿದರ್ಶನವೂ ಸಹ. ಈ ವೃತ್ತಿಯಿಂದಾಗಿ ಅಪಾಯ, ಪ್ರಾಣ ಹಾನಿ ಸಂಭವಿಸಿದಾಗಲಷ್ಟೇ ಇದು ಧುತ್ತನೆ ಸುದ್ದಿಯಾಗಿ ಬಿಡುತ್ತದೆ. ಮಲ ಹೊರುವುದು ಮಾತ್ರ ಅಲ್ಲ, ನಗರ -ಪಟ್ಟಣ ಪ್ರದೇಶಗಳ ಒಳಚರಂಡಿಗೆ ಮನುಷ್ಯರನ್ನು ಇಳಿಸಿ ಶುಚಿಗೊಳಿಸುವುದೂ ಇಷ್ಟೇ ಹೇಯವಾದ ಕೃತ್ಯ.
ಶೌಚಗುಂಡಿ, ಒಳಚರಂಡಿ ಮುಂತಾದಲ್ಲಿ ಕಸ ಕಟ್ಟಿಕೊಂಡಿದ್ದರೆ, ಶುಚಿಗೊಳಿಸಬೇಕಿದ್ದರೆ ಯಂತ್ರಗಳು ಲಭ್ಯವಿವೆ. ಈ ಕಾರ್ಯದಲ್ಲಿ ಮಕ್ಕಳ ಸಹಿತ ಮನುಷ್ಯರನ್ನು ಬಳಸುವ ಈ ಹೇಯ ನಡವಳಿಕೆಗೆ ಇನ್ನಾದರೂ ಸರಕಾರ, ಆಡಳಿತ ವ್ಯವಸ್ಥೆ ಕಡಿವಾಣ ಹಾಕಲು ಕಠಿನ ಕ್ರಮಗಳನ್ನು ಕೈಗೊಳ್ಳಬೇಕು.
ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಈ ಘಟನೆಗೆ ಕಾರಣರಾದವರ ಮೇಲೆ ಶಿಸ್ತುಕ್ರಮ ತೆಗೆದುಕೊಂಡಿರುವುದು ಸಮಾಧಾನದ ವಿಷಯ. ಆದರೆ ಯಾರೂ ಎಲ್ಲಿಯೂ ಇಂತಹ ಕೃತ್ಯಗಳನ್ನು ನಡೆಸದಂತಹ ಜಾಗೃತಿ ಸೃಷ್ಟಿಸಬೇಕಾದುದೇ ಸರಿಯಾದ ಹೆಜ್ಜೆ. ಈ ನೆಲೆಯಲ್ಲಿ ಸರಕಾರ ಹಾಗೂ ಆಡಳಿತ ವ್ಯವಸ್ಥೆ ಯೋಚಿಸಿ ಕ್ರಿಯಾಶೀಲವಾಗಬೇಕು. ಇದು ಕೇವಲ ಕಾನೂನಿನಿಂದ ಮಾತ್ರ ಆಗುವಂಥದ್ದಲ್ಲ; ಮನುಷ್ಯ ಸಹಜ ಸಹಾನುಭೂತಿ ಮತ್ತು ಅರಿವೂ ಸಹ ಅವಶ್ಯ. ಇಂಥದೊಂದು ಜಾಗೃತಿ ಮೂಡಿಸುವುದು ನಾಗರಿಕರ ಸಾಮೂಹಿಕ ಹೊಣೆಯೂ ಹೌದು.