Advertisement

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

12:18 AM Oct 16, 2021 | Team Udayavani |

ಹಿಂದೂ ದೇವಾಲಯಗಳ ಆಡಳಿತ ಭಕ್ತರ ಕೈಗೆ ಬರಬೇಕು ಎಂದು ಹೇಳುವ ಮೂಲಕ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಆಂದೋಲನಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತಷ್ಟು ಶಕ್ತಿ ತುಂಬಿದ್ದಾರೆ.

Advertisement

ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೀಗೊಂದು ಚರ್ಚೆ ತೀವ್ರಗೊಂಡಿತ್ತು. ತಮಿಳುನಾಡಿನ ಎಲ್ಲ ದೇಗುಲಗಳ ಆಡಳಿತ ಭಕ್ತರ ಕೈಗೇ ಹೋಗಬೇಕು, ಇದು ಸರಕಾರದ ಬಳಿಯೇ ಇರಬಾರದು ಎಂಬುದು ಆಗಿನ ಒತ್ತಡವಾಗಿತ್ತು. ಸದ್ಗುರು ಜಗ್ಗಿ ವಾಸುದೇವ್‌ ಅವರು ಈ ಬಗ್ಗೆ ತಮಿಳುನಾಡಿನಲ್ಲಿ ಒಂದು ಆಂದೋಲನವನ್ನೇ ಶುರು ಮಾಡಿದ್ದರು. ಜತೆಗೆ ಬಿಜೆಪಿ ಕೂಡ ಆಗಿನ ಚುನಾವಣೆ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ, ಭಕ್ತರ ಕೈಗೇ ದೇಗುಲಗಳ ಆಡಳಿತ ಇರಲಿ ಎಂದು ಒತ್ತಾಯಿಸಿ, ಸದ್ಗುರು ಆರಂಭಿಸಿದ್ದ ಆಂದೋಲನಕ್ಕೆ ಕೈಜೋಡಿಸಿತ್ತು.

ಕರ್ನಾಟಕದಲ್ಲೂ ಈ ಬಗ್ಗೆ ಆಗಾಗ್ಗೆ ಚರ್ಚೆಗಳು ಕೇಳಿಬರುತ್ತಲೇ ಇವೆ. ಇಲ್ಲಿ ಮುಖ್ಯವಾಗಿ ದೇಗುಲಗಳ ಆಡಳಿತ ಯಾರ ಬಳಿ ಇರಬೇಕು ಎಂಬುದಕ್ಕಿಂತ, ಹಿಂದೂ ದೇಗುಲಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಹಿಂದೂ ದೇಗುಲಗಳ ಅಭಿವೃದ್ಧಿಗೇ ಬಳಕೆ ಮಾಡಬೇಕು. ಬೇರೆ ಧರ್ಮದ ದೇಗುಲಗಳ ಅಭಿವೃದ್ಧಿ ಅಥವಾ ಮತ್ಯಾವುದೇ ಕಾರಣಗಳಿಗಾಗಿ ಬಳಕೆ ಮಾಡಬಾರದು ಎಂದು ಭಕ್ತರ ಕಡೆಯಿಂದಲೇ ಆಗ್ರಹವೂ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲೂ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಕಡೆಯಿಂದ ಇತರೆ ಧರ್ಮದ ಧಾರ್ಮಿಕ ನಾಯಕರಿಗೆ ವೇತನ ಬಿಡುಗಡೆಗೆ ಆದೇಶ ಹೊರಡಿಸಲಾಗಿತ್ತು. ಆಗ ಮುಜರಾಯಿ ಇಲಾಖೆಯೇ ಈ ಆದೇಶ ತಿದ್ದುಪಡಿ ಮಾಡಿ, ಹಿಂದೂ ದೇಗುಲಗಳಿಂದ ಸಂಗ್ರಹವಾದ ಹಣವನ್ನು ಬೇರೆ ಧರ್ಮದ ಕಾರ್ಯಕ್ಕಾಗಿ ವಿನಿಯೋಗಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಇದನ್ನೂ ಓದಿ:ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

ಈಗ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಮೋಹನ್‌ ಭಾಗವತ್‌ ಅವರು ಹಿಂದೂ ದೇಗುಲಗಳ ಆಡಳಿತ ಭಕ್ತರ ಕೈಗೇ ಹೋಗಬೇಕು ಮತ್ತು ಹಿಂದೂ ದೇಗುಲಗಳಿಂದ ಸಂಗ್ರಹವಾದ ಕಾಣಿಕೆಯನ್ನು ಹಿಂದೂ ದೇಗುಲಗಳ ಅಭಿವೃದ್ಧಿಗೇ ಬಳಕೆ ಮಾಡಬೇಕು ಎಂದಿದ್ದಾರೆ.

Advertisement

ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸರಕಾರಗಳ ಅಡಿಯಲ್ಲಿ ಬಹಳಷ್ಟು ದೇಗುಲಗಳಿವೆ. ಅಷ್ಟೇ ಅಲ್ಲ, ಕೆಲವು ದೇಗುಲಗಳನ್ನು ಭಕ್ತರೇ ಅಲ್ಲದ ಟ್ರಸ್ಟ್‌ಗಳು ನೋಡಿಕೊಳ್ಳುತ್ತಿವೆ. ಹಿಂದೂ ದೇಗುಲಗಳು ಮತ್ತು ದೇಗುಲಗಳ ಆಸ್ತಿಪಾಸ್ತಿಗಳನ್ನು ಭಕ್ತರ ವಶಕ್ಕೇ ಒಪ್ಪಿಸಬೇಕು. ಇದರಿಂದ ಬಂದ ವರಮಾನವನ್ನು ದೇಗುಲಗಳಿಗೇ ಬಳಸಬೇಕು ಎಂಬುದು ಭಾಗವತ್‌ ಅವರ ಅಭಿಪ್ರಾಯ ಜತೆಗೆ ದೇಗುಲ ನೋಡಿಕೊಳ್ಳುತ್ತಿರುವ ಕೆಲವು ಟ್ರಸ್ಟ್‌ಗಳಲ್ಲಿ ದೇವರನ್ನೇ ನಂಬದ ಜಾತ್ಯತೀತವಾದಿಗಳೂ ಇದ್ದಾರೆ. ಇವರು ಹೇಗೆ ಆಡಳಿತ ನಡೆಸಲು ಸಾಧ್ಯ ಎಂಬುದು ಆರ್‌ಎಸ್‌ಎಸ್‌ ಮುಖ್ಯಸ್ಥರ ಪ್ರಶ್ನೆ.

ಈ ಅಭಿಪ್ರಾಯ ಒಪ್ಪುವಂಥದ್ದೇ ಆಗಿದೆ. ದೇಗುಲಗಳನ್ನು ಸರಕಾರಗಳೇಕೇ ನಡೆಸಬೇಕು ಎಂಬುದು ಇಲ್ಲಿನ ಮೂಲ ಪ್ರಶ್ನೆ. ದೇಗುಲಗಳನ್ನು ದೇವರನ್ನು ನಂಬುವ ಭಕ್ತರೇ ನಡೆಸಿಕೊಂಡು ಹೋಗಬೇಕು. ಅಲ್ಲಿಂದ ಬಂದ ಹಣವನ್ನು ದೇಗುಲಗಳಿಗಾಗಿಯೇ ಬಳಕೆ ಮಾಡಬೇಕು. ಇದು ಆಸ್ತಿಕರಿಗೂ ಸಮಾ ಧಾನಕರ ವಿಷಯವಾಗಲಿದೆ. ಇಂಥದ್ದೊಂದು ದಿಕ್ಕಿನಲ್ಲಿ ರಾಜ್ಯ ಸರಕಾರ‌ ಹೆಜ್ಜೆ ಇಡಬೇಕು. ಜತೆಜತೆಗೆ ಈ ಟ್ರಸ್ಟ್‌ಗಳ ವ್ಯವಹಾರ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆಯೊಂದನ್ನು ರೂಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next