Advertisement

ಲಸಿಕೆ ಪಡೆಯುವಲ್ಲಿ ಜನಪ್ರತಿನಿಧಿಗಳೇ ಮಾದರಿಯಾಗಲಿ

03:36 AM Feb 25, 2021 | Team Udayavani |

ಕೊರೊನಾ ನಿಯಮಾವಳಿ ಪಾಲಿಸದ ಹೊರತು, ಈ ಸೋಂಕು ಹೋಗುವುದಿಲ್ಲ ಎಂಬ ಕೇಂದ್ರ ಸರಕಾರದ ಎಚ್ಚರಿಕೆ ನಡುವೆಯೇ ಎರಡನೇ ಹಂತದ ಲಸಿಕಾ ಪ್ರಕ್ರಿಯೆಗೆ ದೇಶ ಸಿದ್ಧವಾಗುತ್ತಿದೆ. ಮಾರ್ಚ್‌ 1ರಿಂದಲೇ 60 ವರ್ಷ ಮೇಲ್ಪಟ್ಟ ಹಾಗೂ ಇತರ ರೋಗಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ.

Advertisement

ಜನವರಿ 16ರಿಂದ ಕೊರೊನಾ ಲಸಿಕೆ ನೀಡಲು ಶುರು ಮಾಡಲಾಗಿತ್ತು. ಆದರೆ ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ, ಅನಂತರದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಆದರೆ ಈ ವರೆಗೆ ನಡೆದ ಲಸಿಕೆ ನೀಡಿಕೆ ಪ್ರಕ್ರಿಯೆ ಗಮನಿಸಿದರೆ ಆರೋಗ್ಯ ಕಾರ್ಯಕರ್ತರಲ್ಲಿಯೇ ನಿರಾಸಕ್ತಿಯೋ, ಅಪನಂಬಿಕೆಯೋ ಕಾಣಿಸಿಕೊಂಡ ಹಾಗಿದೆ. ಸರಕಾರ ನಿರೀಕ್ಷಿಸಿದ್ದ ಮಟ್ಟಿಗೆ ಲಸಿಕೆ ನೀಡುವಲ್ಲಿ ಯಶಸ್ಸು ಸಿಕ್ಕಿಲ್ಲ. ಲಸಿಕೆ ಪಡೆಯುವಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರೇ ಹಿಂದೆ ಬಿದ್ದಿರುವುದನ್ನು ಇಲ್ಲಿ ಗಮನಿಸಬಹುದು.

ಸರಕಾರದ ಅಂಕಿ -ಅಂಶಗಳ ಪ್ರಕಾರ, ಇದುವರೆಗೆ 1.20 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 64 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು, ಉಳಿದವರು ಮುಂಚೂಣಿ ಕಾರ್ಯಕರ್ತರಾಗಿದ್ದಾರೆ. ಅಂದರೆ ನೋಂದಣಿಯಾದವರಲ್ಲಿ ಶೇ.62ರಷ್ಟು ಆರೋಗ್ಯ ಕಾರ್ಯಕರ್ತರು ಹಾಗೂ ಶೇ.42ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ.

ಆರೋಗ್ಯ ಕಾರ್ಯಕರ್ತರಲ್ಲಿ ಶೇ. 90ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಬಹುದೆನ್ನುವ ನಿರೀಕ್ಷೆ ಇತ್ತು. ಇದು ಸಾಧ್ಯವಾಗದೆ ಇರುವುದಕ್ಕೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಒಂದು ಹಂತದಲ್ಲಿ ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಕೈ ಮುಗಿದು ಕೇಳಿ ಕೊಂಡಿದ್ದರು. ಈಗಾಗಲೇ ಮುಂಚೂಣಿ ವೈದ್ಯರು ಲಸಿಕೆ ಪಡೆದು ಕೊಂಡು ಜನರಲ್ಲಿ ಮನವಿ ಮಾಡಿದ್ದಾರೆ. ಲಸಿಕೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಲು ತಂತ್ರಜ್ಞಾನದ ಸಮಸ್ಯೆ ಜತೆಗೆ ಲಸಿಕೆ ಬಗ್ಗೆ ಉದಾಸೀನ ಅಥವಾ ಅಪ ನಂಬಿಕೆ ಕಾರಣವಿರಲೂಬಹುದು ಎನ್ನಲಾಗು ತ್ತಿದೆ. ಒಂದು ವೇಳೆ ಅಪನಂಬಿಕೆ ಇದ್ದಲ್ಲಿ ಅದನ್ನು ನೀಗಿಸುವುದು ಸರಕಾರ ಮತ್ತು ನಾಯಕರ ಕರ್ತವ್ಯ. ಈಗ ಲಸಿಕೆ ಸಾರ್ವಜನಿಕರಿಗೆ ಮುಕ್ತವಾಗುವ ಹಂತದಲ್ಲಿ ಪ್ರಮು ಖ ನಾಯಕರು ಮೊದಲು ತಾವು ಲಸಿಕೆ ಪಡೆದು ಜನರಲ್ಲಿ ವಿಶ್ವಾಸ ಮೂಡಿಸಲಿ.

ವಿದೇಶಗಳಲ್ಲಿ ಆಯಾ ರಾಷ್ಟ್ರದ ಪ್ರಮುಖ ಜನ ಪ್ರತಿನಿಧಿಗಳು ಮೊದಲು ಲಸಿಕೆ ಪಡೆದು ಜನರಲ್ಲಿ ಲಸಿಕೆ ಬಗ್ಗೆ ವಿಶ್ವಾಸ ಮೂಡಿಸಿದ್ದಾರೆ. ಹಾಗೆಯೇ, ಮುಂದಿನ ಹಂತಗಳಲ್ಲಾದರೂ ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳ ಮುಖ್ಯಸ್ಥರು, ಸಚಿವರು, ಸಂಸದರು, ಶಾಸಕರಾದರೂ ಮೊದಲು ಲಸಿಕೆ ಪಡೆಯುವಂಥ‌ ವ್ಯವಸ್ಥೆಯಾಗಲಿ. ಈ ಬಗ್ಗೆ ಕೇಂದ್ರ ಸರಕಾರ ತನ್ನ ಮಾರ್ಗ ಸೂಚಿಯನ್ನು ಬದಲಿಸಿಕೊಳ್ಳುವುದು ಒಳಿತು. ಕೊರೊನಾ ನಿರ್ಮೂಲನೆಗೆ ಎಲ್ಲರೂ ಜತೆಗೂಡಿ ಹೋರಾಟ ಮಾಡಿದಾಗ ಮಾತ್ರ ನಿರೀಕ್ಷಿತ ಫ‌ಲ ಸಿಗಲು ಸಾಧ್ಯ. ಈಗಾಗಲೇ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ತೊಡಗಿಸಿ ಕೊಳ್ಳಬೇಕಿದೆ. ನಾಡಿನ ವಿವಿಧ ಸಂಘ ಸಂಸ್ಥೆಗಳು ಲಸಿಕೆ ಅಭಿಯಾನವನ್ನು ಎಲ್ಲರಿಗೂ ಯಶಸ್ವಿಯಾಗಿ ತಲುಪಿಸಿಲು ಕೈಜೋಡಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next