ಚಿತ್ರದುರ್ಗ: ರೇಣುಕಸ್ವಾಮಿ ಹತ್ಯೆ ಅತ್ಯಂತ ಅಮಾನವೀಯ ಕೃತ್ಯ. ನಾಗರೀಕ ಸಮಾಜದ ಯಾರೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಚಿತ್ರದುರ್ಗದ ವಿ.ಆರ್.ಎಸ್. ಬಡಾವಣೆಯಲ್ಲಿರುವ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಮಾತನಾಡಿದರು.
ಈ ಕೊಲೆಯನ್ನು ಪ್ರತಿಯೊಬ್ಬರೂ ಅತ್ಯುಗ್ರವಾಗಿ ಖಂಡಿಸಬೇಕು. ಈ ಬರ್ಬರ ಹತ್ಯೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ರೇಣುಕಾಸ್ವಾಮಿ ಅವರ ತಂದೆ- ತಾಯಿ, ಪತ್ನಿಯನ್ನು ನೋಡಿದರೆ ದುಃಖ ಆಗುತ್ತೆ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಪತ್ನಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು.
ಈ ಕೊಲೆಯ ಹಿಂದೆ ಯಾರಿದ್ದಾರೆ ಎಲ್ಲವೂ ಜಗಜ್ಜಾಹೀರಾಗಿದೆ. ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು. ತಪ್ಪಿತಸ್ಥರು, ಕೊಲೆಗಡುಕರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ರಾಜಕೀಯ ಬೆರೆಸುವುದಿಲ್ಲ. ಒತ್ತಡಕ್ಕೆ ಮಣಿಯದೆ ತನಿಖೆ ಆಗಬೇಕು. ಪರಿಹಾರ ಕಲ್ಪಿಸಲು ಮುಖ್ಯಮಂತ್ರಿಗಳು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಇದೇ ವೇಳೆ ಬಿಜೆಪಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ. ನೆರವು ನೀಡಲಾಯಿತು.
ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ಎಸ್.ಲಿಂಗಮೂರ್ತಿ, ಎ.ಮುರುಳಿ, ಕೆ.ಟಿ.ಕುಮಾರಸ್ವಾಮಿ, ಜಿ.ಎಸ್.ಅನಿತ್ ಇತರರಿದ್ದರು.