ಮುಂಗಾರಿನ ಆರಂಭದ ದಿನಗಳಲ್ಲಿ ಕೈಕೊಟ್ಟಿದ್ದ ಮಳೆರಾಯ ಇತ್ತೀಚೆಗೆ ಭಾರೀ ಪ್ರಮಾಣದಲ್ಲೇ ಸುರಿಯುತ್ತಿದ್ದು, ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬಿಡದೇ ಸುರಿಯುತ್ತಿದ್ದಾನೆ. ಅಷ್ಟೇ ಅಲ್ಲ, ಅತ್ತ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಸಹಿತ ಉತ್ತರ ಕರ್ನಾಟಕದ ಕೆಲವು ನದಿಗಳು ತುಂಬಿ ಹರಿಯುತ್ತಿದ್ದು ರಸ್ತೆ, ಸೇತುವೆಗಳು ಮುಳುಗಿವೆ. ಸದ್ಯ ರಾಜ್ಯವೀಗ ಅನಾವೃಷ್ಟಿಯಿಂದ ಅತಿವೃಷ್ಟಿಯತ್ತ ಸಾಗುತ್ತಿದ್ದು, ಮಳೆಗೆ ಸಿಲುಕಿದವರ ರಕ್ಷಣೆಗೆ ರಾಜ್ಯ ಸರಕಾರ ತತ್‌ಕ್ಷಣವೇ ಧಾವಿಸಬೇಕಾಗಿದೆ.
ಇತ್ತೀಚೆಗಷ್ಟೇ ಮುಗಿದ ವಿಧಾನಸಭೆ ಅಧಿವೇಶನ ವೇಳೆಯಲ್ಲಿ ರಾಜ್ಯದಲ್ಲಿನ ಮಳೆ ಕೊರತೆ ಬಗ್ಗೆ ಪ್ರಸ್ತಾವವಾಗಿತ್ತು. ಹಲವಾರು ತಾಲೂಕುಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು, ಇಂಥ ಕಡೆಗಳಲ್ಲಿ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆಯಾಗಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇರುವ ಸಮಸ್ಯೆ ಬಗ್ಗೆ ಸದನದಲ್ಲಿ ಪ್ರಸ್ತಾವಿಸಲಾಗಿ, ಸ್ವತಃ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರೇ ಕೇಂದ್ರದ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಈಗ ಮಧ್ಯ ಕರ್ನಾಟಕದ ಕೆಲವು ಭಾಗ ಹೊರತುಪಡಿಸಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಸುರಿಯುತ್ತಿದೆ. ಅಂದರೆ ಅರ್ಧ ಕರ್ನಾಟಕ ಇನ್ನೂ ಮಳೆ ಕೊರತೆ ಅನುಭವಿಸುತ್ತಿದೆ. ಹವಾಮಾನ ಇಲಾಖೆ ಪ್ರಕಾರವೇ ಮಧ್ಯ ಕರ್ನಾಟಕದಿಂದ ಕೆಳಗೆ ಇನ್ನೂ ಸರಿಯಾದ ಪ್ರಮಾಣದ ಮಳೆಯಾಗಿಲ್ಲ. ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಕರ್ನಾಟಕದ ಪ್ರವಾಹದ ಜತೆಗೆ, ರಾಜ್ಯ ಸರಕಾರ ಮಳೆಯಾಗದ ಜಿಲ್ಲೆಗಳಲ್ಲಿನ ಸ್ಥಿತಿ ಬಗ್ಗೆಯೂ ಆಲೋಚನೆ ನಡೆಸಬೇಕಾದ ಅನಿವಾರ್ಯತೆ ಇದೆ.
ಒಂದು ಕಡೆ ಪ್ರವಾಹ, ಮತ್ತೊಂದು ಕಡೆ ಬರದಂಥ ಸ್ಥಿತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿಯೂ ಇಂಥದ್ದೇ ಸ್ಥಿತಿ ತಲೆದೋರಿದೆ. ತೆಲಂಗಾಣದಲ್ಲೂ ಕೆಲವೆಡೆ ಪ್ರವಾಹ ತಲೆದೋರಿದ್ದರೆ. ಅರ್ಧ ತೆಲಂಗಾಣ ಮಳೆಯಿಲ್ಲದೇ ತತ್ತರಿಸುತ್ತಿದೆ. ಪೂರ್ವ ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಲದ ಕೆಲವು ಪ್ರದೇಶಗಳು, ಮಿಜೋರಾಂ ಸಹಿತ ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಕಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ದಿಲ್ಲಿ, ರಾಜಸ್ಥಾನ, ಗುಜರಾತ್, ಪಶ್ಚಿಮ ಮಧ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಅಂದರೆ ನಿಗದಿಗಿಂತ ಹೆಚ್ಚು ಮಳೆಯಾಗಿದೆ.
ಹಾಗೆಯೇ ಜಗತ್ತಿನಾದ್ಯಂತ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಹವಾಮಾನ ತಜ್ಞರ ಪ್ರಕಾರ, ಇಂಥ ಸನ್ನಿವೇಶಕ್ಕೆ ತಾಪಮಾನ ಬದಲಾವಣೆಯೇ ಕಾರಣವಾಗಿದ್ದು, ಒಂದು ಕಡೆ ಬಿಸಿ ಮತ್ತೂಂದು ಕಡೆ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಹೆಚ್ಚು ತಾಪಮಾನದಿಂದಾಗಿ ಸಮುದ್ರದ ನೀರು ಹೆಚ್ಚು ಆವಿಯಾಗಿ ಬೇರೆ ಕಡೆಗಳಲ್ಲಿ ಪ್ರವಾಹ ಕಾಣಿಸುತ್ತಿದೆ. ಈ ಬಗ್ಗೆ ಸರಕಾರಗಳು ಯೋಚನೆ ಮಾಡಬೇಕಾಗಿದೆ ಎಂದಿದ್ದಾರೆ.
ಈ ಮಧ್ಯೆ ಹೆಚ್ಚು ಮಳೆಯಾಗಿರುವ ಕಡೆಗಳಲ್ಲಿ ರಕ್ಷಣ ಕಾರ್ಯಾಚರಣೆ, ಮಳೆ ಕೊರತೆಯಾಗಿರುವ ಪ್ರದೇಶಗಳಲ್ಲಿ ಪರಿಹಾರ ನೀಡುವ ಕೆಲಸವನ್ನು ಆಯಾ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಮಾಡಬೇಕಾಗಿದೆ. ಈಗ ಭಾರೀ ಪ್ರಮಾಣದ ಪ್ರವಾಹ ಎದುರಿಸುತ್ತಿರುವ ರಾಜ್ಯಗಳ ಸಹಾಯಕ್ಕೂ ಕೇಂದ್ರ ಸರಕಾರ ನಿಲ್ಲಬೇಕಾಗಿದೆ.