Advertisement

ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆಯಾಗಲಿ

10:50 AM Jun 26, 2023 | Team Udayavani |

ಉಡುಪಿ: ಜಲ ಜೀವನ್‌ ಮಿಷನ್‌ ಹಾಗೂ ವಾರಾಹಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಸೇರಿದಂತೆ ಸ್ಥಳೀಯಾಡಳಿತಗಳು ಮಳೆಗಾಲಕ್ಕೆ ಸೂಕ್ತ ರೀತಿಯಲ್ಲಿ ಸಜ್ಜಾಗದ ಹಿನ್ನೆಲೆಯಲ್ಲಿ ನಗರ ಪ್ರದೇಶ ಸಹಿತವಾಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಳೆ ನೀರು ಹರಿಯುವ ತೋಡುಗಳು ಕಣ್ಮರೆಯಾಗಿವೆ. ಇದರ ಪರಿಣಾಮ ಮಳೆ ನೀರು ಗಂಟೆಗಟ್ಟಲೆ ರಸ್ತೆಯಲ್ಲೆ ನಿಲ್ಲುತ್ತಿವೆ ಮತ್ತು ಕೆಲವು ಕಡೆಗಳಲ್ಲಿ ರಸ್ತೆಯೇ ತೋಡಿನಂತಾಗಿವೆ.

Advertisement

ಕಳೆದ ಒಂದೆರೆಡು ದಿನದಿಂದ ಜಿಲ್ಲಾದ್ಯಂತ ಮುಂಗಾರು ಬಿರುಸುಗೊಂಡಿದೆ. ನಿರಂತರ ಮಳೆ ಸುರಿಯುತ್ತಿದೆ. ಕೃಷಿ, ತೋಟಗಾರಿಕೆ ಚುಟವಟಿಕೆಗಳು ವೇಗ ಪಡೆದಿದೆ. ಈ ಮಧ್ಯೆ ಮಳೆಯಿಂದ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಷನ್‌(ಜೆಜೆಎಂ) ಕಾಮಗಾರಿ ನಡೆಯುತ್ತಿವೆ. ಬಹುತೇಕ ಗ್ರಾಮಗಳಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಸಾಗುತ್ತಿವೆ. ಮಳೆಯಲ್ಲೂ ಕಾಮಗಾರಿ ನಡೆಯುತ್ತಿದೆ. ಆದರೆ, ಪೈಪ್‌ಲೈನ್‌ ಅಳವಡಿಸಿದ ಅನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಗುಂಡಿ ಮುಚ್ಚದೇ ಇರುವುದು, ರಸ್ತೆ ಮೇಲೆ ಮಣ್ಣಿನ ರಾಶಿ ಬಿದ್ದಿರುವುದು ಸಾಮಾನ್ಯವಾಗಿ ಕಂಡು ಬರುತ್ತಿವೆ. ಅಷ್ಟು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಜೆಜೆಎಂ ಕಾಮಗಾರಿಯಿಂದಲೇ ಮಳೆ ನೀರು ಹರಿಯುವ ತೋಡುಗಳು ಕಣ್ಮರೆಯಾಗಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಸ್ಥಳೀಯಾಡಳಿತಗಳ ಜವಾಬ್ದಾರಿ
ಜಿಲ್ಲಾಡಳಿತ ಹಾಗೂ ಜಿ.ಪಂ. ಮಳೆಗಾಲಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಗ್ರಾಮಮಟ್ಟದಲ್ಲಿ ಮಾಡಬೇಕು. ವಿವಿಧ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವಂತೆ ಗ್ರಾಮಗಳಲ್ಲಿ ಮಳೆ ನೀರು ಹರಿಯುವ ತೋಡಿನ ಸ್ಥಿತಿ ಪರಿಶೀಲಿಸಿ, ಸರಾಗವಾಗಿ ನೀರು ಹರಿಯಲು ಬೇಕಾದ ವ್ಯವಸ್ಥೆ ಮಾಡಿಕೊಡಬೇಕಾದ ಜವಾಬ್ದಾರಿ ಸ್ಥಳೀಯಾಡಳಿತಗಳ ಮೇಲಿದೆ. ಇದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಅನುದಾನ ಕೊರತೆ
ಈ ವರ್ಷ ಮಳೆ ವಿಳಂಬದಿಂದ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಹೆಚ್ಚಾಗಿತ್ತು. ಗ್ರಾ.ಪಂ.ಗಳು ತಮ್ಮಲ್ಲಿದ್ದ ಅನುದಾನ ಟ್ಯಾಂಕರ್‌ಗಳ ನೀರು ಪೂರೈಕೆ, ಜಲಮೂಲಗಳ ವೃದ್ಧಿಗೆ ಬಳಕೆ ಮಾಡಿದ್ದವು. ಹೀಗಾಗಿ ಮಳೆಗಾಲದ ಸಿದ್ಧತೆಗೆ ಅನುದಾನದ ಕೊರತೆ ಎದುರಾಗಿದೆ. ಪ್ರತೀ ವರ್ಷ ಮಳೆಗಾಲಕ್ಕೂ ಮೊದಲು ನಗರ ಪ್ರದೇಶದಲ್ಲಿ ಮಳೆ ನೀರು ಹರಿಯುವ ತೋಡು ಸ್ವಚ್ಛ ಮಾಡುವುದು, ಚರಂಡಿಯಲ್ಲಿ ಒಳಹರಿವಿನಿಂದ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸುವುದು ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ಬಾರಿ ಅನುದಾನದ ಕೊರತೆಯಿಂದ ಬಹುಪಾಲು ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಹರಿಯುವ ತೋಡು ಸ್ವಚ್ಛವಾಗಿಲ್ಲ. ಈ ಮಧ್ಯೆ ಜೆಜೆಎಂ, ವಾರಾಹಿ ಕಾಮಗಾರಿ ನಡೆಯುತ್ತಿರುವುದರಿಂದ ತೋಡುಗಳು ಸಂಪೂರ್ಣ ಮುಚ್ಚಿ ಹೋಗಿವೆ.ಅನೇಕ ಕಡೆ ರಸ್ತೆಯೇ ಮಳೆ ನೀರು ಹರಿಯುವ ತೋಡುಗಳಾಗಿ ಪರಿವರ್ತನೆಗೊಂಡಿವೆ.

Advertisement

ಕಂಟ್ರೋಲ್‌ ರೂಂ , ಗ್ರಾಮ ಮಟ್ಟದ ಕಾರ್ಯಪಡೆ ಸಕ್ರಿಯಗೊಳಿಸಲಾಗುವುದು
ಮಳೆಗಾಲಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿ ದ್ದೇವೆ. ಮಳೆ ನೀರು ಹರಿಯುವ ತೋಡು ಸ್ವಚ್ಛ ಮಾಡಲಾಗುತ್ತಿದೆ. ವಿಪತ್ತು ನಿರ್ವಹಣೆಯ ಜತೆಗೆ ಕಂಟ್ರೋಲ್‌ ರೂಂ ವ್ಯವಸ್ಥೆ ಮಾಡಿದ್ದೇವೆ. ಗ್ರಾಮಮಟ್ಟದಲ್ಲಿ ಇರುವ ಕಾರ್ಯಪಡೆ ಸಕ್ರಿಯಗೊಳಿಸಲು ಸೂಚನೆ ನೀಡಲಾಗುವುದು.
-ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next