ಹುಬ್ಬಳ್ಳಿ: ಪಶುಆಹಾರ ತಯಾರಿಕೆ ನಿಟ್ಟಿನಲ್ಲಿ ಕೆಎಂಎಫ್ನವರು ರೈತರಿಂದಲೇ ಮೆಕ್ಕಜೋಳ ಖರೀದಿಸುತ್ತಿದ್ದಾರೆ. ಅದೇ ರೀತಿ ಖಾಸಗಿ ಕಾರ್ಖಾನೆಗಳು ಸಹ ರೈತರಿಂದಲೇ ಮೆಕ್ಕೆಜೋಳ ಖರೀದಿಸುವುದನ್ನು ಕಡ್ಡಾಯಗೊಳಿಸುವುದು ಅವಶ್ಯ ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯ ಪಟ್ಟರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳ ಬೆಳೆದ ರೈತರು ಉತ್ತಮ ದರ ದೊರೆಯುವ ನಿಟ್ಟಿನಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂಬ ಬೇಡಿಕೆಯೂ ಇದೆ. ಹೆಸರು ಖರೀದಿ ಕೇಂದ್ರ ಆರಂಭಿಸುವುದು ಅವಶ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಗಮನಕ್ಕೂ ತರುವುದಾಗಿ ತಿಳಿಸಿದರು. ಬಿಜೆಪಿ ರೈತಮೋರ್ಚಾ ಘಟಕ ರೈತರುಹಾಗೂ ರಾಜ್ಯ-ಕೇಂದ್ರದಲ್ಲಿನ ಬಿಜೆಪಿ ಸರಕಾರದ ರಾಯಭಾರಿಯಾಗಿ ಕಾರ್ಯ ನಿರ್ವ ಹಿಸಲಿದೆ. ಎರಡು ಕಡೆಗೂ ನಮ್ಮದೇ ಸರಕಾರ ಇರುವುದರಿಂದ ಹೋರಾಟದ ಬದಲು,ಸರಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತಾಗಿ ರೈತರಿಗೆ ಮಾಹಿತಿನೀಡುವ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಸರಕಾರದ ಗಮನಕ್ಕೆ ತರುವ ಕೆಲಸ ಮಾಡಲಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನಯೋಜನೆ ಅಡಿಯಲ್ಲಿ 2019-20ನೇ ಸಾಲಿಗೆ ಸುಮಾರು 50.10ಲಕ್ಷ ರೈತರಿಗೆ 2796.68 ಕೋಟಿ ರೂ., 2020-21ನೇ ಸಾಲಿಗೆ 1,000ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿಧಾರವಾಡ ಜಿಲ್ಲೆಗೆ 2019-20ರಲ್ಲಿ 95.85,2020-21ನೇ ಸಾಲಿಗೆ 20.69 ಕೋಟಿ ರೂ.ಬಿಡುಗಡೆಯಾಗಿದೆ. ರಾಜ್ಯ ಸರಕಾರದಿಂದ869 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಬೆಳೆ ವಿಮೆ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ2019-20ನೇ ಸಾಲಿಗೆ 1020 ಕೋಟಿ ರೂ.,ಬಿಡುಗಡೆಯಾಗಿದ್ದು, 2020-21ನೇ ಸಾಲಿಗೆ 900 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು. ಯೂರಿಯಾ ರಸಗೊಬ್ಬರದ ಕೊರತೆ ಇಲ್ಲ. ರಾಜ್ಯದ ಬೇಡಿಕೆಗಿಂತ ಶೇ.10 ಹೆಚ್ಚಿನ ಪ್ರಮಾಣದ ಯೂರಿಯಾ ಗೊಬ್ಬರವನ್ನು ಕೇಂದ್ರ ಸರಕಾರ ನೀಡಿದೆ. ಕೆಲತಾಂತ್ರಿಕ ಕಾರಣ ಹಾಗೂ ಸಾಗಣೆ ಕೊರತೆ, ಬಿತ್ತನೆ ಪ್ರದೇಶ ಹೆಚ್ಚಳದಿಂದ ಕೆಲ ಕಡೆ ರಸಗೊಬ್ಬರ ಕೊರತೆ ಕಂಡು ಬಂದಿರಬಹುದು ಎಂದರು.
ರಾಜ್ಯದಲ್ಲಿ ಸುಮಾರು 620 ಉಳ್ಳಾಗಡ್ಡಿ ಸಂಗ್ರಹ ಕೇಂದ್ರಗಳ ಸ್ಥಾಪನೆಗೆ 52.66 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ. ರೈತರ ವಿವಿಧ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಎಲ್ಲ ಕಡೆಗೂ ಸಂವಾದ ನಡೆಸಲಾಗುತ್ತಿದೆ. ಸಮಸ್ಯೆಗಳನ್ನರಿತು ಅಕ್ಟೋಬರ್‌ನಲ್ಲಿ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಬಿಜೆಪಿ ರೈತಮೋರ್ಚಾದ ವಿವಿಧ ಪದಾಧಿಕಾರಿಗಳು ಇದ್ದರು.