“ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ, ಆರೋಪಿಗಳಿಗೆ ಕಠಿನ ಶಿಕ್ಷೆಯಾಗುವಂತೆ ಎಲ್ಲ ರಾಜ್ಯಗಳು ನೋಡಿಕೊಳ್ಳಬೇಕು. ಆ ಮೂಲಕ ಮಹಿಳೆಯರ ವಿರುದ್ಧ ಅಪರಾಧ ಎಸಗುವವರಲ್ಲಿ ಭಯವನ್ನು ಮೂಡಿಸ ಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ದಿಲ್ಲಿಯ ಕೆಂಪುಕೋಟೆಯಲ್ಲಿ ಮಾಡಿದ 78ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಇಡೀ ರಾಷ್ಟ್ರಕ್ಕೆ ಕರೆ ನೀಡಿದ್ದಾರೆ. ಕಳೆದ ವಾರ ಪಶ್ಚಿಮ ಬಂಗಾಲದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಅವರು ಈ ಕರೆ ನೀಡಿದ್ದಾರೆ. ಪ್ರಧಾನಿಗಳ ಮಾತುಗಳು ಜನಸಾಮಾನ್ಯರಲ್ಲಿ ಮಡು ಗಟ್ಟಿರುವ ಆಕ್ರೋಶದ ಪ್ರತಿನಿಧಿಯಂತಿದ್ದವು.
2012ರ ನಿರ್ಭಯಾ ಅತ್ಯಾಚಾರದ ಪ್ರಕರಣದ ಬಳಿಕ ಈಗ ಪಶ್ಚಿಮ ಬಂಗಾಲ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದಾಗಿ ಇಡೀ ದೇಶವೇ ಒಂದಾಗಿದೆ. ಸರಕಾರಗಳ ವಿರುದ್ಧ ಆಕ್ರೋಶದ ಅಣೆಕಟ್ಟೆ ಒಡೆದಿದೆ. ಇದಕ್ಕೂ ಕಾರಣವೂ ಇದೆ. ಸಾಕಷ್ಟು ಕಾನೂನುಗಳು, ಜನ ಜಾಗೃತಿಯ ಹೊರತಾಗಿಯೂ ಮಹಿಳೆಯರ ವಿರುದ್ಧದ ಅಪರಾಧಗಳು ನಿಲ್ಲುತ್ತಿಲ್ಲ. ತನಿಖೆಯ ವೇಳೆಯ ಲೋಪಗಳು ಮತ್ತು ರಾಜಕೀಯ ಕಾರಣಕ್ಕೆ ಅನೇಕ ಪ್ರಕರಣಗಳು ತಾರ್ಕಿಕ ಅಂತ್ಯವನ್ನು ಕಾಣುವುದೇ ಇಲ್ಲ. ಇವೆಲ್ಲವೂ ಅದಕ್ಕೆ ಕಾರಣವಾಗಿದೆ.
ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ವಾರ್ಷಿಕ ವರದಿಯು ಮಹಿಳೆಯರ ವಿರುದ್ಧದ ಅಪರಾಧಗಳ ಗಂಭೀರ ಅಂಕಿ ಸಂಖ್ಯೆಗಳನ್ನು ಹೊರ ಹಾಕಿದೆ. 2022ರಲ್ಲಿ ಮಹಿಳೆಯ ವಿರುದ್ಧ ಒಟ್ಟು 4.45 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತೀ ಗಂಟೆಗೆ 51 ಎಫ್ಐಆರ್ ದಾಖಲಾಗಿವೆ! 2021ರಲ್ಲಿ 4.28 ಲಕ್ಷ ಮತ್ತು 2020ರಲ್ಲಿ 3.71 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ವರ್ಷದಿಂದ ವರ್ಷಕ್ಕೆ ಮಹಿಳೆಯ ವಿರುದ್ಧ ಅಪರಾಧಗಳು ಹೆಚ್ಚಾಗುತ್ತಿರುವುದನ್ನು ಈ ಅಂಕಿಸಂಖ್ಯೆಗಳು ಸ್ಪಷ್ಟಪಡಿಸುತ್ತವೆ. ಮಹಿಳೆಯರ ವಿರುದ್ಧದ ಅಪರಾಧಗಳ ಪೈಕಿ ಶೇ.31ರಷ್ಟು ಪ್ರಕರಣಗಳು ಗಂಡ ಹಾಗೂ ಸಂಬಂಧಿಕರಿಂದಲೇ ನಡೆದಿವೆ. ಶೇ.19.2ರಷ್ಟು ಅಪಹರಣಗಳು, ಶೇ.18.7 ಲೈಂಗಿಕ ದೌರ್ಜನ್ಯ ಹಾಗೂ ಶೇ.7.1ರಷ್ಟು ಅತ್ಯಾಚಾರ ಪ್ರಕರಣಗಳಿವೆ.
ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಠಿನ ಕಾನೂನು ರೂಪಿಸಿ ಜಾರಿ ಮಾಡಲಾಗಿದೆ. ಹಾಗಿದ್ದೂ ಅತ್ಯಾಚಾರ ಪ್ರಕರಣಗಳಲ್ಲಿ ಇಳಿಕೆಯೇನೂ ಆಗುತ್ತಿಲ್ಲ. ಅಂದರೆ ಈ ಅಪರಾಧಗಳನ್ನು ತಡೆಯಲು ಕಾನೂನೊಂದೇ ಸಾಕಾಗುವುದಿಲ್ಲ ಎಂಬುದನ್ನು ಇದು ಪುಷ್ಟೀಕರಿಸುತ್ತದೆ. ಹಾಗಿದ್ದರೆ, ಮಹಿಳೆಯರ ವಿರುದ್ಧ ಅಪರಾಧ ಗಳನ್ನು ತಡೆಯುವುದಾದರೂ ಹೇಗೆ ಎಂಬ ಪ್ರಶ್ನೆಗೆ ಪ್ರತಿಯೊಬ್ಬರಲ್ಲೂ ಉತ್ತರವಿದೆ. ವಿಶೇಷವಾಗಿ ನಮ್ಮ ನಮ್ಮ ಮನೆಗಳಿಂದಲೇ ಹೆಣ್ಣನ್ನು ಗೌರವಿಸುವ ಮನೋ ಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಈ ವಿಷಯದಲ್ಲಿ ತಂದೆ-ತಾಯಿ, ಪೋಷಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳಲ್ಲಿ ಲಿಂಗ ಸಮಾನತೆಯ ಬಗ್ಗೆ ಅರಿವು ಮೂಡಿಸಬೇಕು. ಜತೆಗೆ ನೇತಾರರು, ಧಾರ್ಮಿಕ ನಾಯಕರು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುವತ್ತ ಮಾರ್ಗದರ್ಶನವನ್ನು ಪರಿಣಾಮಕಾರಿಯಾಗಿ ಮಾಡಬೇಕಿದೆ. ಹೆಣ್ಣನ್ನು ಅಶ್ಲೀಲವಾಗಿ, ಕಾಮ ಪ್ರಚೋದನೆಯಾಗಿ ಚಿತ್ರಿಕರಿಸುವ ಸಿನೆಮಾಗಳು, ವೆಬ್‌ಸೀರಿಸ್‌ಗಳು ಸೇರಿದಂತೆ ಸಮೂಹ ಮಾಧ್ಯಮಗಳ ಕಂಟೆಂಟ್‌ಗಳನ್ನು ನಿರ್ಬಂಧಿಸುವುದು ಈ ಕ್ಷಣದ ಅಗತ್ಯವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಮೋದಿ ಅವರು ಹೇಳಿದಂತೆ ಮಹಿಳೆಯರ ವಿರುದ್ಧ ಅಪರಾಧ ನಡೆಸುವವರಲ್ಲಿ ಭಯದ ವಾತಾವರಣ ಸೃಷ್ಟಿಯಾಗಬೇಕು. ಅತ್ಯಾಚಾರದಂಥ ಅಪರಾಧಗಳನ್ನು ಎಸಗಿ ಬದುಕುಳಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಸದೃಢ ವ್ಯವಸ್ಥೆಯೊಂದನ್ನು ಸೃಷ್ಟಿಸಬೇಕು. ಅಗತ್ಯ ಬಿದ್ದರೆ ಕಾನೂನು ತಿದ್ದುಪಡಿ ಇಲ್ಲವೇ ಹೊಸ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಹಿಂಜರಿಯಲೇಬಾರದು.