Advertisement

ಜನನಾಯಕರಿಗೆ ತಮ್ಮ ಹಿತಕ್ಕಿಂತ ಜನರ ಹಿತ ಮುಖ್ಯವಾಗಲಿ

11:39 PM Feb 23, 2022 | Team Udayavani |

ಭಾರೀ ನಿರೀಕ್ಷೆ ಮೂಡಿಸಿದ್ದ ರಾಜ್ಯ ವಿಧಾನಸಭೆ ಅಧಿವೇಶನ ಕೇವಲ ಎರಡು ದಿನಗಳ ಅಧಿಕೃತ ಕಲಾಪಗಳಿಗೆ ಸೀಮಿತವಾಗಿ ಆರೋಪ, ಪ್ರತ್ಯಾರೋಪ, ಗದ್ದಲ, ಧರಣಿಯ ಕಾರಣದಿಂದ ಮೂರು ದಿನ ಮುನ್ನವೇ ಮುಂದೂಡಲ್ಪಟ್ಟಿದೆ. ಕೊರೊನಾ ಸೃಷ್ಟಿಸಿದ ಅವಾಂತರದಿಂದ ಜನ ಸಾಮಾನ್ಯರಿನ್ನೂ ಸಂಕಷ್ಟದಿಂದ ಹೊರಬರಲು ಪರದಾಡುತ್ತಿದ್ದರೆ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ ಆದಿಯಾಗಿ ಎಲ್ಲ ಕ್ಷೇತ್ರಗಳೂ ಪುನಶ್ಚೇತನದ ಹಾದಿಯಲ್ಲಿವೆ. ಜನಸಾಮಾನ್ಯರ ಸಮಸ್ಯೆ, ಬೇಡಿಕೆಗಳ ಕುರಿತಂತೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಒಂದಿಷ್ಟು ಸವಿಸ್ತಾರವಾಗಿ ಚರ್ಚೆ ನಡೆದು ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆದೀತು ಎಂಬ ನಿರೀಕ್ಷೆಯನ್ನು ಈ ಅಧಿವೇಶನ ಹುಸಿಯಾಗಿಸಿದೆ. ಆದರೆ ರಾಜಕೀಯ ನಾಯಕರ ಈ ಎಲ್ಲ ಆಟಾಟೋಪಗಳ ಹೊರ  ತಾಗಿಯೂ ಸರಕಾರ ಶಾಸಕರ ವೇತನ ಮತ್ತು ಭತ್ತೆ ಪರಿಷ್ಕರಣೆ ಮಸೂದೆಗೆ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದನ್ನು ಗಮನಿಸಿದಾಗ ಸರಕಾರ ಮತ್ತು ನಮ್ಮ ಜನಪ್ರತಿನಿಧಿಗಳ ಆದ್ಯತೆ ಏನು ಎಂಬುದು ಜನಸಾಮಾನ್ಯನಿಗೂ ಕೂಡ ಸ್ಪಷ್ಟವಾಗಿ ಅರಿವಾಗುತ್ತದೆ.

Advertisement

ವೇತನ, ಭತ್ತೆ ಪರಿಷ್ಕರಣೆ ಮಸೂದೆಯನ್ನು ಮುಖ್ಯಮಂತ್ರಿಗಳ ಪರವಾಗಿ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿನ ಭಾರೀ ಹೆಚ್ಚಳ, ಮನೆ ಬಾಡಿಗೆ ವೆಚ್ಚ ಅಧಿಕಗೊಂಡಿರುವುದು, ನಿರ್ವಹಣ ವೆಚ್ಚಗಳಲ್ಲಿ ವಿಪರೀತ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ಪರಿಗಣಿಸಿ ವೇತನ ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಕಳೆದ ಐದು ದಿನಗಳಿಂದ ಸಚಿವರೋರ್ವರು ಭಾವೋದ್ರೇಕಕ್ಕೊಳಗಾಗಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಮುಂದಿಟ್ಟು ಪ್ರಧಾನ ವಿಪಕ್ಷ ಕಾಂಗ್ರೆಸ್‌ ಸದಸ್ಯರ ಧರಣಿಯ ನಡುವೆಯೇ ಈ ಮಸೂದೆಗೆ ಉಭಯ ಸದನಗಳಲ್ಲಿ ಸರ್ವಾನುಮತದ ಒಪ್ಪಿಗೆ ಪಡೆಯುವಲ್ಲಿ ಸರಕಾರ ಯಶಸ್ವಿಯಾಯಿತು.

ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ವೇಳೆ ಸರಕಾರ ಇಷ್ಟೊಂದು ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿರುವುದು “ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬ ಗಾದೆ ಮಾತಿನಂತಾಗಿದೆ. ಈ ಬಾರಿಯ ಅಧಿವೇಶನದುದ್ದಕ್ಕೂ ಕಾದಾಡುತ್ತಲೇ ಬಂದಿದ್ದ ಎಲ್ಲ ಪಕ್ಷಗಳ ಶಾಸಕರು ಅತ್ಯಂತ ಆಸ್ಥೆಯಿಂದ ಈ ವಿಚಾರದಲ್ಲಿ ಮಾತ್ರ ಮೌನಕ್ಕೆ ಶರಣಾದುದನ್ನು ಕಂಡರೆ ನಮ್ಮ ಜನಪ್ರತಿನಿಧಿಗಳಿಗೆ ಜನಹಿತಕ್ಕಿಂತ ಸ್ವಹಿತವೇ ಮುಖ್ಯವಾಯಿತೇ ಎಂಬ ಅನುಮಾನ ಕಾಡದಿರದು.

ಸರಕಾರದ ವಿವಿಧ ಇಲಾಖೆ, ಸಂಸ್ಥೆಯ ನೌಕರರು ವೇತನ ಪರಿಷ್ಕರ ಣೆಗಾಗಿ ಹೋರಾಟ ನಡೆಸುವ ಸಂದರ್ಭದಲ್ಲಿ ಇಲ್ಲಸಲ್ಲದ ನೆಪಗಳನ್ನು ಒಡ್ಡಿ ಅವರ ಮನವೊಲಿಕೆ ಕಾರ್ಯಕ್ಕೆ ಮುಂದಾಗುವ ಸರಕಾರ ಈ ವಿಚಾರದಲ್ಲಿಯೂ ತುಸು ವಿಳಂಬ ಧೋರಣೆ ಅನುಸರಿಸುತ್ತಿದ್ದರೆ ಆಕಾಶವೇನೂ ಕೆಳಗೆ ಬೀಳುತ್ತಿರಲಿಲ್ಲ. ಇದನ್ನೇ ಅಸ್ತ್ರವನ್ನಾಗಿಟ್ಟು ಕೊಂಡು ಕೆಳ ಹಂತದ ಜನಪ್ರತಿನಿಧಿಗಳೂ ವೇತನ ಪರಿಷ್ಕರಣೆಯ ಬೇಡಿಕೆಯನ್ನು ಮುಂದಿಟ್ಟರೆ ಆಗ ಸರಕಾರದ ನಿಲುವೇನಾಗಿರಲಿದೆ, ಸಾರ್ವಜನಿಕ ಹಣವನ್ನು ಹೀಗೆ ಬೇಕಾಬಿಟ್ಟಿಯಾಗಿ ತಮ್ಮ ಹಿತಕ್ಕಾಗಿ ಬಳಸಿಕೊಂಡಲ್ಲಿ ಜನಹಿತವನ್ನು ಕಾಯುವವರಾದರೂ ಯಾರು? ಸಾರ್ವಜನಿಕರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next