ಮೈಸೂರು: ಸಂಸತ್ ಭವನ ನಮ್ಮೆಲ್ಲರ ದೇಗುಲವಾಗಿದ್ದು, ಅಂತಹ ದೇಗುಲಕ್ಕೆ ನುಗ್ಗಿದ್ದು ತಪ್ಪು. ನನ್ನ ಮಗ ಮಾಡಿರುವುದು ದೊಡ್ಡ ತಪ್ಪು. ಆತ ಮಾಡಿರುವ ತಪ್ಪಿಗೆ ಗಲ್ಲುಶಿಕ್ಷೆ ಬೇಕಾದರೂ ವಿಧಿಸಲಿ- ಇದು ಸಂಸತ್ ಭವನದಲ್ಲಿ ಕೋಲಾಹಲ ಎಬ್ಬಿಸಿದ ಮೈಸೂರಿನ ಮನೋರಂಜನ್ ತಂದೆ ದೇವರಾಜ್ ನೋವಿನ ನುಡಿ.
ಸಂಸದ ಪ್ರತಾಪ್ ಸಿಂಹ ಹಾಗೂ ನಮಗೂ ಒಡನಾಟವಿದೆ. ನಾವು ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಪ್ರತಾಪ್ ಸಿಂಹ ಕೂಡ ಹಾಸನ ಜಿಲ್ಲೆಯವರು. ಕಳೆದ ಹದಿನೈದು ವರ್ಷಗಳಿಂದ ನಾವು ಮೈಸೂರಿನಲ್ಲಿ ನೆಲೆಸಿದ್ದೇವೆ. ನನ್ನ ಮಗ ಮನೋರಂಜನ್ ತುಂಬಾ ಒಳ್ಳೆಯವನಾಗಿದ್ದ. ಆದರೆ ಏಕೆ ಈ ರೀತಿ ಮಾಡಿದ್ದಾನೆಂದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮನೋರಂಜನ್ ಬೆಂಗಳೂರನಲ್ಲಿಯೇ ಬಿಇ ಓದಿದ್ದ. ದಿಲ್ಲಿ, ಬೆಂಗಳೂರು ಅಂತ ಓಡಾಡುತ್ತಿದ್ದ. ಆದರೆ, ಆತ ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ. ನಾನು ರೈತ, ಆತ ತುಂಬಾ ಚೆನ್ನಾಗಿ ಓದುತ್ತಿದ್ದ. 2014ರಲ್ಲೇ ಬಿಇ ಮುಗಿಸಿದ್ದ ಆತ, ಜಮೀನಿಗೆ ಬಂದು ಆಳುಗಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ. ಮಗ ಎಲ್ಲಿಗೆ ಹೋಗುತ್ತಾನೆ, ಯಾಕೆ ಹೋಗುತ್ತಾನೆ ಅಂತ ಹೇಳುತ್ತಿರಲಿಲ್ಲ. ನನ್ನ ಮಗ ಈ ರೀತಿ ಮಾಡಿದ್ದರೆ ಅದು ಅಕ್ಷಮ್ಯ. ಆತ ಯಾಕೆ ಹೀಗೆ ಮಾಡಿದ ಅಂತ ಗೊತ್ತಿಲ್ಲ. ಈ ಪ್ರಕರಣದಲ್ಲಿರುವ ಇತರರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಆದರೆ, ಮಗ ಮಾತ್ರ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಅಷ್ಟುಬಿಟ್ಟು ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ಪೊಲೀಸರಿಂದ ಶೋಧ: ಪಾಸ್ ಮೂಲಕ ಸಂಸತ್ ಭವನ ಪ್ರವೇಶಿಸಿದ್ದ ಮೂಲತಃ ಮೈಸೂರಿನ ಮನೋರಂಜನ್ ಅವರ ವಿಜಯನಗರದ ನಿವಾಸಕ್ಕೆ ಬುಧವಾರ ಮಧ್ಯಾಹ್ನ ಪೊಲೀಸರು ತೆರಳಿ ಮನೋರಂಜನ್ ಕುರಿತು ಮಾಹಿತಿ ಸಂಗ್ರಹಿಸಿದರು.
ವಿಜಯಗರ ಉಪವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಠಾಣೆ ಇನ್ಸ್‌ಪೆಕ್ಟರ್ ಸುರೇಶ್ ಅವರು ಮನೋರಂಜನ್ ಪೋಷಕರ ಬಳಿ ಮಾಹಿತಿ ಪಡೆದುಕೊಂಡು, ಆತನ ಕೊಠಡಿ, ಆತ ಓದುತ್ತಿದ್ದ ಪುಸ್ತಕಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಜತೆಗೆ ಆತ ಓದಿದ ಶಾಲೆ, ಆತನ ಸ್ನೇಹಿತರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದರು ಎನ್ನಲಾಗಿದೆ. ಮನೋರಂಜನ್ ತನ್ನ ಕೊಠಡಿಯಲ್ಲಿ ಇರಿಸಿಕೊಂಡಿದ್ದ ಕಾದಂಬರಿ, ಹೋರಾಟ, ಅಪರಾಧ ಸಂಬಂಧ ಹತ್ತಾರು ಪುಸ್ತಕ ಪರಿಶೀಲಿಸಿದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ತೆರಳಿದರು.