ಕನಕಪುರ: ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಕೋವಿಡ್ ವನ್ನು ತಡೆಗಟ್ಟಲು ಸಲಹೆ ಸೂಚನೆ ಮತ್ತು ಸಹಕಾರ ನೀಡದ ವಿರೋಧ ಪಕ್ಷಗಳಿಗೆ ಸರ್ಕಾರವನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶವೇ ಕೊರೊನಾ ಸೋಂಕಿನಿಂದ ತತ್ತರಿಸಿದೆ. ಕೋವಿಡ್ ಎರಡನೇ ಅಲೆ ಮಾರಣಾಂತಿಕ ಸೋಂಕಾಗಿ ರೂಪಾಂತರಗೊಂಡಿದೆ. ಇದು ನಮ್ಮ ರಾಜ್ಯದ ಪರಿಸ್ಥಿತಿ ಮಾತ್ರ ಅಲ್ಲ ಇಡೀ ವಿಶ್ವದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಆರೋಗ್ಯ ಜೀವ ಜೀವನವನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲರಿಗೂ ಇರಬೇಕು. ಅದು ನಮ್ಮ ಜವಾಬ್ದಾರಿ ಆದರೆ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ವಿರೋಧ ಪಕ್ಷಗಳು ಸಮಯ ಸಾಧಕರಂತೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಟೀಕಿಸುತ್ತ ಸಾವಿನ ಮನೆಯಲ್ಲಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕೋವಿಡ್ ದಿಂದ ಕಳೆದ ಒಂದು ವರ್ಷದಿಂದಲೂ ದೇಶದ ಆರ್ಥಿಕತೆ ಮತ್ತು ಸಾರ್ವಜನಿಕರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ರುವುದರಿಂದ ಮೋದಿಯವರು ಮತ್ತು ರಾಜ್ಯದಲ್ಲಿ ಯಡಿಯೂರಪ್ಪನವರು ತುರ್ತು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಒಂದು ವೇಳೆ ಇಂತಹ ಪರಿಸ್ಥಿಯಲ್ಲಿ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಿದ್ದರೆ ಕೊರೊನಾ ದೇಶದಲ್ಲಿ ವ್ಯಾಪಕವಾಗಿ ಹರಡಿ ಪರಿಸ್ಥಿತಿ ಕೈಮೀರಿ ದೇಶದಲ್ಲಿ ಸ್ಮಶಾನಮೌನ ಆವರಿಸುತ್ತಿತ್ತು. ದೇಶ ಮತ್ತು ರಾಜ್ಯದಲ್ಲಿ ಉತ್ತಮ ನಾಯಕತ್ವ ಇದೆ ಹಾಗಾಗಿ ಆರೋಗ್ಯ ತುರ್ತು ಪರಿಸ್ಥಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು. ಬಿಜೆಪಿ ಪಕ್ಷದ ಮುಖಂಡ ದೊಡ್ಡೇಗೌಡ ಉಪಸ್ಥಿತರಿದ್ದರು.