Advertisement

ನೇತ್ರದಾನ ಜನಾಂದೋಲವಾಗಲಿ

10:49 AM Nov 10, 2021 | Team Udayavani |

ಬೆಂಗಳೂರು: ನೇತ್ರದಾನದ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದ ಅರಿವು ಮೂಡಿಸಿ ಜನಾಂದೋಲನವಾಗುವಂತೆ ಮಾಡಬೇಕಾದ ಅಗತ್ಯವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು. ಮಿಂಟೋ ಕಣ್ಣಿನ ಆಸ್ಪತ್ರೆಯ 125 ವರ್ಷಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿ, ನೇತ್ರದಾನದ ಬಗ್ಗೆ ಜನರಿಗೆ ಅರಿವಿನ ಕೊರತೆಯಿದ್ದು ಕಣ್ಣುದಾನಕ್ಕೆ ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.

Advertisement

ಈ ಹಿಂದೆ ನೇತ್ರದಾನದಿಂದ ಇಬ್ಬರಿಗೆ ದೃಷ್ಟಿ ನೀಡಲಾಗುತ್ತಿತ್ತು. ಆದರೆ ಈಗ ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಒಬ್ಬರು ಕಣ್ಣುಗಳನ್ನು ಐದರಿಂದ ಆರು ಮಂದಿಗೆ ನೀಡಬಹುದಾಗಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರು ನೇತ್ರದಾನ ಮಾಡಿದ ಹಿನ್ನೆಲೆಯಲ್ಲಿ ನಾಲ್ಕು ಮಂದಿಗೆ ದೃಷ್ಟಿ ನೀಡಿದ್ದಾರೆ. ಆ ಮೂಲಕ ಅವರು ಸ್ಮರಣೀಯರಾಗಿದ್ದಾರೆ ಎಂದರು. ದೇಶದಲ್ಲಿ ಮೂರರಿಂದ ನಾಲ್ಕು ಕೋಟಿ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ನೇತ್ರದಾನಿಗಳ ಸಂಖ್ಯೆ ಅಧಿಕವಾಗಬೇಕಾಗಿದೆ. ಮರಣ ಹೊಂದಿದ ನಂತರವೂ ನಾಲ್ಕು ಜನರು ಜಗತ್ತು ನೋಡುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಂದ ಪ್ರತಿಜ್ಞೆ: ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅಂಗಾಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ನಾನೂ ಕೂಡ ಕಳೆದ ವರ್ಷ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿದ್ದೇನೆ. ಇದನ್ನು ಆಂದೋಲನದಂತೆ ನಡೆಸಿ ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಅರಿವಿನ ಬೀಜ ಬಿತ್ತಬೇಕಾಗಿದೆ ಎಂದು ಸಚಿವ ಸುಧಾಕರ್‌ ಹೇಳಿದರು. ಅನೇಕ ವೈದ್ಯರ, ದಾದಿಯರ ಪರಿಶ್ರಮದ ಫ‌ಲದಿಂದಾಗಿ ವಿಂಟೋ ಆಸ್ಪತ್ರೆ 125 ವರ್ಷ ಪೂರೈಸಿರುವುದು ಖುಷಿ ಪಡುವ ಸಂಗತಿಯಾಗಿದೆ. ಈ ಸಂಭ್ರಮವನ್ನು ದೊಡ್ಡ ರೀತಿಯಲ್ಲಿ ಆಚರಿಸಬೇಕಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಮುಂದಿನ ದಿನ ಗಳಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಕೇಂದ್ರ ಸಚಿವರನ್ನು ಆಹ್ವಾನಿಸಿ ದೊಡ್ಡ ಮಟ್ಟದ ಸಮಾರಂಭ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಆಸ್ಪತ್ರೆ ಪೋಷಿಸಿದ ಕೀರ್ತಿ ಒಡೆಯರ್‌ಗೆ ಸಲ್ಲುತ್ತದೆ: 1896ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಈ ಕಣ್ಣಾಸ್ಪತ್ರೆ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಪ್ಲೇಗ್‌ ನಿಂದ ಕೋವಿಡ್‌ ಸಂಕ್ರಾಮಿಕ ರೋಗದ ವರೆಗೂ ಜನರಿಗೆ ಸೇವೆ ನೀಡಿದೆ. ಈ ಸಂಸ್ಥೆಯನ್ನು ಬೆಳೆಸಿದ ಕೀರ್ತಿ ಮೈಸೂರಿನ ಶ್ರೀಕೃಷ್ಣರಾಜ ಒಡೆಯರ್‌ ಅವರಿಗೆ ಸಲ್ಲುತ್ತದೆ. ಕನ್ನಡಿಗರು ಅವರನ್ನು ಈ ವಿಚಾರದಲ್ಲಿ ನೆನೆಯಬೇಕು ಎಂದರು. ಪ್ರತಿ ವರ್ಷ ಈ ಆಸ್ಪತ್ರೆಯಲ್ಲಿ 10 ಸಾವಿರ ಜನರು ಚಿಕಿತ್ಸೆ ಪಡೆಯುತ್ತಾರೆ. ವಿಂಟೋ ಮತ್ತು ವಿಕ್ಟೋರಿಯಾ ಅಂದರೆ ಕೋವಿಡ್‌ ಕೇಂದ್ರ ಎಂಬ ಭಾವನೆ ಜನರಲ್ಲಿ ಮನಸಿನಲ್ಲಿದೆ. ಆ ಮನಸಿನಿಂದ ಹೊರಬಂದು ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:- ಸರಕಾರಿ ಗೌರವದೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ಅಂತ್ಯಕ್ರಿಯೆ

Advertisement

ಎಲ್ಲ ರೀತಿಯ ಜನರಿಗೆ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಮಿಂಟೋ ಪ್ರಾದೇಶಿಕ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜತಾ ರಾಥೋಡ್‌ ಮಾತನಾಡಿ, ಎಲ್ಲರಿಗೂ ಗುಣಮಟ್ಟದ ಆರೈಕೆ ನೀಡುವುದು ಆಸ್ಪತ್ರೆಯ ಉದ್ದೇಶವಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ರಾಮ ನಗರ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸ ಲಾಗುವುದು ಎಂದರು. ಶಾಸಕ ಜಮೀರ್‌ ಅಹ್ಮದ್‌ ಸೇರಿದಂತೆ ಮಿಂಟೋ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

 ಮಿಂಟೋ ಕಣ್ಣಿನ ಆಸ್ಪತ್ರೆಗೆ ಈಗ 125ನೇ ವಸಂತದ ಸಂಭ್ರಮ

ಬೆಂಗಳೂರು: ನಾಡಿನ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ನೀಡುವ ಮೂಲಕ ಅಂಧತ್ವ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಚಾಮರಾಜಪೇಟೆಯ ಮಿಂಟೋ ಕಣ್ಣಿನ ಆಸ್ಪತ್ರೆಗೆ ಈಗ 125ನೇ ವಸಂತದ ಸಂಭ್ರಮ. 1896ರಲ್ಲಿ ಸಣ್ಣ ಕ್ಲಿನಿಕ್‌ ಆಗಿ ಪ್ರಾರಂಭವಾಗಿದ್ದ ಕಣ್ಣಿನ ಆಸ್ಪತ್ರೆಗೆ 1903ರಲ್ಲಿ ಮೈಸೂರಿನ ಶ್ರೀಕೃಷ್ಣರಾಜ ಒಡೆಯರ್‌ ಬಹದ್ದೂರ್‌ ಅವರು ಆಡಳಿತಾತ್ಮಕ ಮತ್ತು ರೋಗಿಗಳ ಬ್ಲಾಕ್‌ಗೆ ಅಡಿಪಾಯ ಹಾಕಿದರು.

ನಂತರ 1917ರಲ್ಲಿ 100ಹಾಸಿಗೆಗಳ ಆಸ್ಪತ್ರೆಯೊಂದಿಗೆ ವಿಸ್ತರಿಸಲಾಯಿತು. ಬಳಿಕ 1956ರಲ್ಲಿ ಬೋಧನಾ ಆಸ್ಪತ್ರೆ ಎಂದು ಗುರುತಿಸಲಾಯಿತು. ಕಾಲ ಕಳೆದಂತೆ 200 ಹಾಸಿಗೆಗಳ ಆಸ್ಪತ್ರೆಯಾದ ಮಿಂಟೋ, 1981ರಲ್ಲಿ ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯಾಗಿ ಮೇಲ್ದರ್ಜೆಗೈರಿಸಲಾಯಿತು.1982ರಲ್ಲಿ ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ ಎಂಬ ಹೆಸರು ಪಡೆದುಕೊಂಡಿತು. ಆಗಿನ ವೈಸರಾಯ್‌ ಆಗಿದ್ದ ಮಿಂಟೋ ಜ್ಞಾಪಕಾರ್ಥ ಆಸ್ಪತ್ರೆಗೆ ಅವರ ಹೆಸರಿಡಲಾಯಿತು. ಎಲ್ಲರಿಗೂ ಗುಣಮಟ್ಟದ ಕಣ್ಣಿನ ಆರೈಕೆ ನೀಡುವುದು ಆಸ್ಪತ್ರೆಯ ಗುರಿಯಾಗಿದೆ.

ಪ್ರತಿ ವರ್ಷ ರಾಜ್ಯವಷ್ಟೇ ಅಲ್ಲ ನೆರೆ ರಾಜ್ಯದಿಂದಲೂ ಒಂದು ಲಕ್ಷಕ್ಕೂ ಅಧಿಕ ರೋಗಿಗಳನ್ನು ಪೋಷಿಸಲಾಗುತ್ತಿದೆ.ಪ್ರತಿ ದಿನ 500ರಿಂದ 800 ಒಪಿಡಿ ರೋಗಿಗಳನ್ನು ಆರೈಕೆ ಮಾಡಲಾಗುತ್ತಿದೆ. ಪ್ರತಿ ವರ್ಷ ಸಂಸ್ಥೆಯ ಹತ್ತು ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ನಡೆಯುತ್ತದೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರೋಥೋಡ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next