Advertisement

ಕಚೇರಿಯಲ್ಲಿ 30 ನಿಮಿಷ ನಿದ್ರೆ ಮಾಡಲು ಇದೆ ಅವಕಾಶ!

10:54 AM May 06, 2022 | Team Udayavani |

ಬೆಂಗಳೂರು: ಸುಸ್ತಾಗಿರಲಿ, ಅನಾರೋಗ್ಯವಿರಲಿ ಕೆಲಸ ಮಾಡಲೇಬೇಕು! ಇದು ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸುವ ನೌಕರರ ಪರಿಸ್ಥಿತಿ. ಆದರೆ, ಬೆಂಗಳೂರಿನ “ವೇಕ್‌ ಫಿಟ್‌ ಸೊಲ್ಯೂಷನ್ಸ್‌’ ಎಂಬ ಸ್ಟಾರ್ಟ್‌ ಅಪ್‌ ಕಂಪನಿಯೊಂದು, ಕಚೇರಿಯಲ್ಲಿ ನಿದ್ರೆ ಬಂದರೆ ಧಾರಾಳವಾಗಿ ನಿದ್ರಿಸುವಂಥ ಅವಕಾಶವೊಂದನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ.

Advertisement

ಇದಕ್ಕಾಗಿ ಸುಮಾರು 30 ನಿಮಿಷ ಅವಕಾಶ ಕೊಟ್ಟಿದೆ. ಅಷ್ಟೇ ಅಲ್ಲ, ಕಚೇರಿ ಸಮಯದಲ್ಲಿ ಕಿರು ನಿದ್ರೆ ಮಾಡುವುದನ್ನು “ತಪ್ಪು’ ಎಂದು ಭಾವಿಸಬೇಕಿಲ್ಲ. ಅದು ನಿಮ್ಮ “ಹಕ್ಕು’ ಎಂದು ಭಾವಿಸಿ ಎಂದು ಹೇಳಿದೆ!. ಈ ನಿದ್ರಾ ಅವಧಿಯನ್ನು ಕೆಲಸದ ಅವಧಿ ಎಂದೇ ಪರಿಗಣಿಸಲಾಗುತ್ತದಾದ್ದರಿಂದ ಈ ನಿದ್ರಾವಧಿಗೆ ವೇತನವೂ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ಈ ವಿಚಾರವನ್ನು ಸಂಸ್ಥೆಯ ಸಹ-ಸಂಸ್ಥಾಪಕರಾದ ಚೈತನ್ಯ ರಾಮಲಿಂಗೇಶ್ವರ ಗೌಡ ಅವರು ತಮ್ಮ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಅಸಲಿಗೆ, ಈ ಸ್ಲೀಪ್‌ ಸೌಲಭ್ಯವನ್ನು ಕಳೆದ ಆರು ವರ್ಷಗಳ ಹಿಂದೆಯೇ ಜಾರಿಗೊಳಿಸಲಾಗಿತ್ತು. ಈ ವರ್ಷದಿಂದ ನಿದ್ರಾ ಅವಧಿಗೂ ಪಾವತಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ನಿದ್ರೆಗಿವೆ ಹಲವು ಸೌಕರ್ಯ!

ವೇಕ್‌ಫಿಟ್‌ ಸೊಲ್ಯೂಷನ್ಸ್‌ ಕಂಪನಿಯ ಉದ್ಯೋಗಿಗಳು, ಮಧ್ಯಾಹ್ನ 2 ಗಂಟೆಯಿಂದ 2:30 ಗಂಟೆಯವರೆಗೆ ನಿದ್ರಿಸಲು ಅವಕಾಶವಿರುತ್ತದೆ. ಈ ಸಂದರ್ಭದಲ್ಲಿ ಅವರ ನಿದ್ರೆಗೆ ಯಾರೂ ಭಂಗ ತಾರದಿರಲಿ ಎಂಬ ಉದ್ದೇಶದಿಂದ ಕಚೇರಿಯಲ್ಲಿ ಯಾರೂ ಸಿಬ್ಬಂದಿಯನ್ನು ಈ ಅವಧಿಯಲ್ಲಿ ಮಾತನಾಡಿಸಬಾರದು, ಯಾರೂ ಭೇಟಿಯಾಗಬಾರದು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಅಷ್ಟೇ ಅಲ್ಲ, ಮಲಗಲು ಯೋಗ್ಯವಾದ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕೋಸಿ ನ್ಯಾಪ್‌ ಪಾಡ್ಸ್‌ ಅಥವಾ ಕ್ವಯೆಟ್‌ ರೂಮ್ಸ್‌ ಪರಿಕಲ್ಪನೆಯ ಮಲಗುವ ಕ್ಯಾಬಿನ್‌ಗಳನ್ನು ಕಚೇರಿಗಳಲ್ಲೇ ಅಳವಡಿಸಲಾಗಿದೆ.

Advertisement

ಇದನ್ನೂ ಓದಿ:ಟ್ವಿಟರ್ ಗೆ ತಾತ್ಕಾಲಿಕ ಸಿಇಒ ಆಗಲಿದ್ದಾರೆ ಎಲಾನ್ ಮಸ್ಕ್  

ನಿರ್ಧಾರದ ಹಿಂದಿದೆ ಸಂಶೋಧನೆ

ಕಂಪನಿಯ ಈ ನಿರ್ಧಾರಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಸಂಶೋಧನಾ ವರದಿಯೇ ಕಾರಣ ಎನ್ನಲಾಗಿದೆ. ಆ ಸಂಶೋಧನೆಯ ಪ್ರಕಾರ, ಉದ್ಯೋಗಿಯು ತನ್ನ ಉದ್ಯೋಗದ ನಡುವೆ ಕೇವಲ 26 ನಿಮಿಷ ಮಲಗಿದರೂ ಸಾಕು, ಅವರಲ್ಲಿನ ಕಾರ್ಯಕ್ಷಮತೆ ಶೇ. 33ರಷ್ಟು ವೃದ್ಧಿಯಾಗುತ್ತದಂತೆ. ಮತ್ತೊಂದೆಡೆ, ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧನೆಯಲ್ಲೂ ಇದು ದೃಢಪಟ್ಟಿದ್ದು, ಅಲ್ಲಿನ ಸಂಶೋಧಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಲಸದ ನಡುವೆ ಹೀಗೆ ಅಲ್ಪ ಕಾಲದವರೆಗೆ ಮಲಗುವುದರಿಂದ ಕೆಲಸದ ಒತ್ತಡದಿಂದ ಮುಕ್ತರಾಗಬಹುದು ಎಂದು ಹೇಳಿದ್ದಾರೆ. ಇದನ್ನು ಮನಗಂಡಿರುವ ವೇಕ್‌ಫಿಟ್‌ ಸೊಲ್ಯೂಷನ್ಸ್‌ ಸಂಸ್ಥೆಯು, ಇಂದಿನ ವೇಗದ ಜೀವನದಲ್ಲಿ ಮನಸ್ಸಿನ ಮೇಲಾಗುವ ಒತ್ತಡ, ಖನ್ನತೆಗಳಿಂದ ವ್ಯಕ್ತಿಗಳನ್ನು ದೂರವಿಡಲು ಉದ್ಯೋಗದ ನಡುವೆ ಅರ್ಧಗಂಟೆ ನಿದ್ರಿಸಲು ಅವಕಾಶ ಕೊಡುವುದೇ ಉತ್ತಮ ಎಂಬ ತೀರ್ಮಾನಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next