ಕಾಶ್ಮೀರದ ಮೇಲೆ ವಿಧಿಸಲಾಗಿರುವ ಹಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಲಾರಂಭಿಸಿದ್ದು, ಕಾಶ್ಮೀರದಲ್ಲೀಗ ರೈಲ್ವೆ ಸೇವೆಗಳು(ಶ್ರೀನಗರದಲ್ಲಿ), ಖಾಸಗಿ ಸಾರಿಗೆ ವ್ಯವಸ್ಥೆ ಮರುಚಾಲನೆ ಪಡೆದಿವೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಇದೇ ಮಂಗಳವಾರಕ್ಕೆ ಕಣಿವೆ ಪ್ರದೇಶದಲ್ಲಿ ಆರ್ಟಿಕಲ್ 370 ರದ್ದಾಗಿ 100 ದಿನಗಳಾಗಿವೆ. ಕೇಂದ್ರ ಸರ್ಕಾರವು ವಿಧಿ 370 ರದ್ದತಿ ಮತ್ತು ಮತ್ತು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಘೋಷಣೆ ಮಾಡುವುದಕ್ಕೂ ಮುನ್ನಾದಿನವೇ ಕಾಶ್ಮೀರದಲ್ಲಿ ರೈಲ್ವೆ ಸೇವೆಯನ್ನು ನಿಲ್ಲಿಸಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಈ ನಡೆ ಅನಿವಾರ್ಯವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.
ಈಗಲೂ ಕಣಿವೆಯಲ್ಲಿ ಕೆಲವು ನಿರ್ಬಂಧಗಳಿದ್ದು, ಅವುಗಳನ್ನು ಒಂದೊಂದಾಗಿ ತೆರವುಗೊಳಿಸುವುದಾಗಿ ಕೇಂದ್ರ ಸ್ಪಷ್ಟಪಡಿಸಿದೆ. ಅದರಲ್ಲೂ ಕಾಶ್ಮೀರದ ನಾಯಕರನ್ನು ಗೃಹಬಂಧನದಿಂದ ಶೀಘ್ರವೇ ಮುಕ್ತಗೊಳಿಸುವಂತೆ ಒತ್ತಡವೂ ಎದುರಾಗುತ್ತಿದೆ. ಆದರೆ, ಹಠಾತ್ತನೆ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿದರೆ ಆಗುವ ಅನಾಹುತಗಳ ಬಗ್ಗೆ ಕೇಂದ್ರಕ್ಕೆ ಅರಿವಿದೆ. ಪಾಕ್ ಪೋಷಿತ ಪ್ರತ್ಯೇಕತಾವಾದಿಗಳ ದುಬುìದ್ಧಿಯ ಅರಿವಿರುವ ಭಾರತವು ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲೇಬೇಕಿದೆ. ಇನ್ನು ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಳೆದುಕೊಂಡ ನಂತರದಿಂದ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳು ತೀವ್ರ ಹತಾಶವಾಗಿವೆ. ಹೀಗಾಗಿ ಅವರು ಹೊರಬಂದು ಅಶಾಂತಿ ಸೃಷ್ಟಿಸುವ ಕೆಲಸಗಳು ಆಗಬಾರದು. ಈ ಹಿನ್ನೆಲೆಯಲ್ಲಿ ಕಾಶ್ಮೀರದ ಪ್ರಮುಖ ನಾಯಕರ ಮೇಲೆ ಹದ್ದುಗಣ್ಣಿಡಲಾಗಿದೆ.
ಈ ನೂರು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಹಲವು ಹಿಂಸಾತ್ಮಕ ಘಟನೆಗಳೂ ನಡೆದಿವೆ. ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ದೇಶದ ಇತರೆ ರಾಜ್ಯಗಳ ನೌಕರರ ಮೇಲೆ ಉಗ್ರರು ದಾಳಿ ಮಾಡಿ ಕೊಂದು ಹಾಕಿರುವ ಘಟನೆಗಳೂ ನಡೆದಿವೆ. ಇನ್ನು ಶ್ರೀನಗರದ ಮಾರುಕಟ್ಟೆಗಳ ಮೇಲೂ ಉಗ್ರರು ದಾಳಿ ನಡೆಸಿ ಸವಾಲೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ಸೋಮವಾರವಷ್ಟೇ ಇಬ್ಬರು ಲಷ್ಕರ್ ಉಗ್ರರನ್ನು ನಮ್ಮ ಭದ್ರತಾಪಡೆಗಳು ಹತ್ಯೆಗೈದಿದ್ದು, ಮತ್ತೆ ಮಂಗಳವಾರ ಗಂದರ್ಬಾಲ್ ಪ್ರದೇಶದಲ್ಲಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಒಟ್ಟಲ್ಲಿ ಕಾಶ್ಮೀರದಲ್ಲಿ ಅಶಾಂತಿ ಕದಡಲು ಪಾಕಿಸ್ತಾನಿ ಪೋಷಿತ ಉಗ್ರ ಶಕ್ತಿಗಳು, ಪ್ರತ್ಯೇಕತಾವಾದಿ ಸಂಘಟನೆಗಳು ವಿಪರೀತ ಒದ್ದಾಡುತ್ತಿವೆ ಎನ್ನುವುದು ಇದರಿಂದ ಸಾಬೀತಾಗುತ್ತಿದೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರವಂತೂ ಪಾಕಿಸ್ತಾನದ ಚಡಪಡಿಕೆ ವಿಪರೀತವಾಗಿದೆ. ಕಾಶ್ಮೀರ ವಿಚಾರದಲ್ಲಿ ಇಲ್ಲಸಲ್ಲದ ಕಥೆ ಕಟ್ಟಿ ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ವಿಷ ಕಾರುತ್ತಿರುವ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್, ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಸಂದರ್ಭದಲ್ಲೂ “ಕಾಶ್ಮೀರ ಈಗ ಪ್ರಾದೇಶಿಕ ಸಮಸ್ಯೆಯಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರವಾಗಿದೆ’ ಎಂದು ಊಹಾತ್ಮಕ ಟೀಕೆ ಮಾಡಿದ್ದಾರೆ.
ಈ ನಡುವೆಯೇ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಆಲ್ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್‌ನ ಸೈಯ್ಯದ್ ಅಲಿ ಗಿಲಾನಿ, ಕಾಶ್ಮೀರದ ಬಗ್ಗೆ ಮಾತನಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ಕೃತಜ್ಞತೆ ಸಲ್ಲಿಸುವ ಪತ್ರ ಬರೆದಿದ್ದಾರೆ! ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ತೆರವು ಮತ್ತು ಆ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿರುವುದರಿಂದ ಕಾಶ್ಮೀರದ ಜನಕ್ಕಿಂತ ಪ್ರತ್ಯೇಕತಾವಾದಿಗಳಿಗೆ, ಉಗ್ರರಿಗೆ ಮತ್ತು ಪಾಕಿಸ್ತಾನಕ್ಕೆ ಹೆಚ್ಚು ಸಂಕಟವಾಗಿದೆ ಎನ್ನುವುದು ಗೋಚರಿಸುತ್ತಿದೆ. ಈಗ ಪಾಕಿಸ್ತಾನಿ ಸೇನೆಯೂ ಗಡಿನಿಯಂತ್ರಣ ರೇಖೆಯ ಬಳಿ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ನಿತ್ಯವೂ ಭಾರತೀಯ ಸೈನಿಕರತ್ತ ಗುಂಡಿನ ದಾಳಿ ನಡೆಸುತ್ತಲೇ ಇದೆ.
ಈ ಎಲ್ಲಾ ಋಣಾತ್ಮಕ ಅಂಶಗಳನ್ನು ಎದುರಿಸುತ್ತಲೇ ಕಾಶ್ಮೀರಿ ಜನರ ಜೀವನವನ್ನು ಸುಗಮಗೊಳಿಸುವ ಜವಾಬ್ದಾರಿಯೂ ಕೇಂದ್ರ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಹಲವು ನಿರ್ಬಂಧಗಳನ್ನು ಅದು ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ. ಎಲ್ಲಕ್ಕಿಂತ ಮುಖ್ಯವಾಗಿ, ಕಳೆದ ಮೂರು ತಿಂಗಳಿಂದ ಕಾಶ್ಮೀರದಲ್ಲಿನ ಶೈಕ್ಷಣಿಕ ಸಂಸ್ಥೆಗಳು ಬಾಗಿಲು ಹಾಕಿದ್ದು(ಸ್ವಯಂಪ್ರೇರಿತವಾಗಿ), ಶಾಲೆ-ಕಾಲೇಜುಗಳು ನಿರ್ವಿಘ್ನವಾಗಿ ನಡೆಯುವಂತೆ ನೋಡಿಕೊಳ್ಳುವ, ವ್ಯಾಪಾರ ವರ್ಗಕ್ಕೆ ಪ್ರತ್ಯೇಕತಾವಾದಿಗಳಿಂದ ಉಪಟಳವಾಗದಂತೆ ರಕ್ಷಿಸುವ ಕೆಲಸವೂ ಹೆಚ್ಚು ವೇಗಪಡೆಯಬೇಕಿದೆ.