Advertisement

ಅಕ್ಕಪಕ್ಕದ ರಾಜ್ಯಗಳಿಗೆ ಹೃದಯ ವೈಶಾಲ್ಯತೆ ಇರಲಿ: ಹೆಚ್.ಡಿ.ಕುಮಾರಸ್ವಾಮಿ

03:46 PM Nov 09, 2021 | Team Udayavani |

ಬೆಂಗಳೂರು: ನೀರಾವರಿ ವಿಷಯಗಳಲ್ಲಿ ಅಕ್ಕಪಕ್ಕದ ರಾಜ್ಯಗಳು ಕರ್ನಾಟಕದ ಬಗ್ಗೆ ಹೃದಯ ವೈಶಾಲ್ಯತೆ ಮೆರೆಯಬೇಕು ಹಾಗೂ ನೀರಾವರಿ ಬಿಕ್ಕಟ್ಟುಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಸಲಹೆ ನೀಡಿದರು.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿರುವ ಎರಡನೇ ದಿನದ ಜನತಾ ಸಂಗಮ ಕಾರ್ಯಾಗಾರಕ್ಕೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿ,ನಾಡಿನ ನದಿ ನೀರು ಬಳಕೆ ಹಾಗೂ ಜನರಿಗೆ ಜಲ ಭದ್ರತೆ ನೀಡುವ ಉದ್ದೇಶದಿಂದ ದೀರ್ಘಕಾಲೀನ ಅನುಕೂಲತೆಯ ‘ಜನತಾ ಜಲಧಾರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.

ಕಾವೇರಿ, ಮೇಕೆದಾಟು ವಿಷಯದಲ್ಲಿ ತಮಿಳುನಾಡು ತಗಾದೆ ತೆಗೆಯುತ್ತದೆ. ಕೃಷ್ಣಾ ವಿಷಯದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳು ವಿವಾದ ಹುಟ್ಟು ಹಾಕುತ್ತಿದೆ. ಆದರೆ, ಆ ರಾಜ್ಯಗಳ ಅಸಂಖ್ಯಾತ ಜನರು ಕೆಂಪೇಗೌಡರು ಕಟ್ಟಿದ ಈ ಬೆಂಗಳೂರು ಮಹಾನಗರದಲ್ಲಿ ವಾಸ ಮಾಡುತ್ತಿದ್ದಾರೆ. ಅವರೆಲ್ಲರೂ ಕಾವೇರಿ ನೀರು ಕುಡಿಯುತ್ತಾ ಬದುಕುತ್ತಿದ್ದಾರೆ. ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇದನ್ನು ಆಯಾ ರಾಜ್ಯಗಳ ಸರಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೆಂಪೇಗೌಡರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆರೆಯ ಆಂಧ್ರ ಪ್ರದೇಶದ ಹಲವಾರು ಜಿಲ್ಲೆಗಳಿಗೆ ಅನುಕೂಲವಾಗಿದೆ. ನಮಗಿಂತ ಅವರಿಗೆ ಹೆಚ್ಚು ಉಪಯೋಗ ಆಗುತ್ತಿದೆ. ಅದೇ ರೀತಿ ಎಲೆಕ್ಟ್ರಾನಿಕ್ಸ್ ಸಿಟಿ ನಿರ್ಮಾಣದಿಂದ ತಮಿಳುನಾಡಿನ ಹೊಸೂರು ಸೇರಿ ಹಲವಾರು ಜಿಲ್ಲೆಗಳ ಜಾರಿಗೆ ಜೀವನಕ್ಕೆ ದಾರಿಯಾಗಿದೆ. ಇದನ್ನು ನಮ್ಮ ಜತೆ ಜಲ ತಗಾದೆ ತೆಗೆಯುವ ರಾಜ್ಯಗಳ ಸರಕಾರಗಳು ಅರ್ಥ ಮಾಡಿಕೊಳ್ಳಬೇಕು. ಆ ರಾಜ್ಯಗಳ ಜನಪ್ರತಿನಿಧಿಗಳು ಕೂಡ ಅರ್ಥ ಮಾಡಿಕೊಳ್ಳಬೇಕು ಎಂದು ಹೆಚ್ ಡಿಕೆ ಅವರು ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡಿಗರಿಗಷ್ಟೆ ಅಲ್ಲ ಎಲ್ಲರಿಗೂ ಜೀವ ಜೀವನ ನೀಡಿದೆ. ಎಲ್ಲರಿಗೂ ನಾವು ಗೌರವ, ರಕ್ಷಣೆ ನೀಡಿದ್ದೇವೆ. ಮುಖ್ಯವಾಗಿ ಜಲ ರಕ್ಷಣೆ ಕೊಟ್ಟಿದ್ದೇವೆ. ಆದರೆ ನಾವು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಆ ರಾಜ್ಯಗಳು ಅನಗತ್ಯ ಕಿರಿಕಿರಿ ಮಾಡುವುದನ್ನು ನಿಲ್ಲಿಸಬೇಕು. ನೀರಾವರಿ ವಿವಾದಗಳನ್ನು ನ್ಯಾಯಾಲಯಕ್ಕೆ ಒಯ್ಯುವುದು ಸರಿಯಲ್ಲ. ಸಂಬಂಧಪಟ್ಟ ರಾಜ್ಯಗಳು ಪರಸ್ಪರ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Advertisement

ನಾವು ಒಕ್ಕೂಟದ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು. ಇದು ನಮ್ಮ ಜವಾಬ್ದಾರಿ ಕೂಡ ಹೌದು. ಆದರೆ ನೆಲ, ಜಲದ ಬಗ್ಗೆ ಆಗುವ ದ್ರೋಹವನ್ನು ತಡೆಯಬೇಕು. ಕೇಂದ್ರ ಸರಕಾರಗಳು, ರಾಷ್ಟ್ರೀಯ ಪಕ್ಷಗಳು ನಮ್ಮ ರಕ್ಷಣೆಗೆ ಅವರು ಬಂದಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.

ಏನಿದು ಜನತಾ ಜಲಧಾರೆ?

ರಾಜ್ಯದಲ್ಲಿ ನದಿ ಉಪನದಿಗಳು ಸೇರಿ 38 ಜೀವ ನದಿಗಳು ಇದ್ದು, ಅವುಗಳ ಜಲ ಸಂಗ್ರಹ ಮಾಡಿ ನೀರಿನ ಬಳಕೆಯ ಬಗ್ಗೆ ನಾಡಿನ ಜನರಿಗೆ ಅರಿವು ಮೂಡಿಸುವ ಹಾಗೂ ರಾಜ್ಯದ ನೀರಾವರಿ ಹಿತಾಸಕ್ತಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ರಾಷ್ಟ್ರೀಯ ಪಕ್ಷಗಳು ರಾಜ್ಯದ ನೀರಾವರಿ ಹಿತರಕ್ಷಣೆ ಮಾಡುವುದಿಲ್ಲ. ಈ ಸತ್ಯ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಕೇಂದ್ರದ ಮುಂದೆ ನಮ್ಮ ಸರ್ಕಾರದಿಂದ ಮನವಿ ಕಳುಹಿಸಲಾಗಿದೆ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ಇವೆಲ್ಲ ಕಾರಣಕ್ಕೆ ಜಲಧಾರೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನತೆಯ ಮುಂದೆ ಈ ಕಾರ್ಯಕ್ರಮ ಇಡುತ್ತೇವೆ. ಈಗಾಗಲೇ ಎಲ್ಲ ರೂಪರೇಷೆಗಳನ್ನು ರೂಪಿಸಿದ್ದೇವೆ ಎಂದು ಅವರು ತಿಳಿಸಿದರು.

ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಬಗ್ಗೆ ಟೀಕೆ ಮಾಡಲ್ಲ. ಅವರ ಸಂಘಟನೆ ದೃಷ್ಟಿಯಿಂದ ಈ ಕಾರ್ಯಕ್ರಮ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ನಮ್ಮ ರಾಜ್ಯದ 38 ನದಿಗಳ ನೀರು ಬಳಕೆ ಮಾಡಬೇಕು. ಹೀಗಾಗಿ ನಾವು ಹೋರಾಟ ಮಾಡುತೇವೆ. ಯಾವುದೇ ಗಿಮಿಕ್ ಮಾಡುತ್ತಿಲ್ಲ ನಾವು. ಸಾಲ ಮನ್ನಾ ಯೋಜನೆ ಬಗ್ಗೆ ಹೇಳಿದಾಗಲೂ ಇವರು ಅಧಿಕಾರಕ್ಕೆ ಬರಲ್ಲ ಹೇಗೆ ಮಾಡ್ತಾರೆ ಎಂದು ಹೇಳಿದ್ದರು ಎಂದು ಹೆಚ್.ಡಿಕೆ ಟಾಂಗ್ ನೀಡಿದರು.

ಕಾಂಗ್ರೆಸ್ ವೇಗ ನಮಗೆ ಬೇಡ. ನಾವು ಬದ್ಧತೆ ಇಟ್ಟುಕೊಂಡು ಹೋಗುವವರು. ನಮ್ಮ ಕಾರ್ಯಕ್ರಮ ರೂಪರೇಷ ವಿಭಿನ್ನವಾಗಿರುತ್ತದೆ. ನೀರಾವರಿ ವಿಚಾರವಾಗಿ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ಮೊದಲಿಗರು ಎಂದು ಅವರು ಹೇಳಿದರು.

ಕೋರ್ ಕಮಿಟಿ ರಚನೆ ಶೀಘ್ರ

ಶೀಘ್ರದಲ್ಲೇ ಜೆಡಿಎಸ್ ಕೋರ್ ಕಮಿಟಿ ರಚನೆ ಮಾಡಲಾಗುವುದು. ಕಮಿಟಿಯಲ್ಲಿ ಯಾರು ಯಾರು ಇರುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೋ ಅಂತವರನ್ನು ನೇಮಕ ಮಾಡುತ್ತೇವೆ. 2023ರ ಗುರಿ ಏನಿದೆ, ಅದನ್ನು ಸಾಧಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಹೆಸರು ಇಟ್ಟರೆ ಸಾಕೇ?

ಮುಂಬಯಿ ಕರ್ನಾಟಕ ಹೆಸರನ್ನು ಈಗ ಕಿತ್ತೂರು ಕರ್ನಾಟಕ ಅಂತ ಹೆಸರು ಬದಲಾಯಿಸಿದ್ದಾರೆ. ಅದನ್ನೇ ಸಿಹಿ ಹಂಚಿ ಸಂಭ್ರಮಿಸುವ ಅಗತ್ಯ ಇಲ್ಲ. ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ್ದಾರೆ. ಆದರೆ, ಅಲ್ಲಿನ ಜನರ ಬದುಕು ಬದಲಾಗಿದೆಯಾ? ಈಗಲೂ ಅಲ್ಲಿನ ಜನ ಕಷ್ಟದಲ್ಲಿ ಬದುಕುತ್ತಿದ್ದಾರೆ. ಇದು ರಾಷ್ಟ್ರೀಯ ಪಕ್ಷಗಳ ನಡವಳಿಕೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮಾಧ್ಯಮ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸರವಣ ಅವರು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next