ಬೆಂಗಳೂರು: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್‌ನಿಂದ ಯಾರ್ಯಾರು ಎಷ್ಟೆಷ್ಟು ಹಣ ತೆಗೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಯಾವ ರಾಜಕಾರಣಿ, ಅಧಿಕಾರಿಗಳು, ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂಬ ಸತ್ಯ ಗೊತ್ತಾಗಲಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರೆಹಮಾನ್‌ಖಾನ್, ಉಬೇದುಲ್ಲಾ ಷರೀಫ್, ಶರವಣ ಅವರು ನನ್ನ ಕಂಪನಿ ಕ್ಲೋಸ್ ಮಾಡೋಕೆ ಟ್ರೈ ಮಾಡಿದ್ದರು ಎಂದಷ್ಟೇ ಮನ್ಸೂರ್ ಹೇಳಿದ್ದಾರೆ. ಹಗರಣದಲ್ಲಿ ಆವರೆಲ್ಲಾ ಭಾಗಿಯಾಗಿದ್ದಾರೆ ಎಂದು ಹೇಳಿಲ್ಲ. ಎಸ್‌ಐಟಿ ತನಿಖೆ ಮಾಡುತ್ತಿದ್ದು ಸತ್ಯ ಗೊತ್ತಾಗುತ್ತದೆ ಎಂದು ತಿಳಿಸಿದರು.
ಮನ್ಸೂರ್, ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಕೆಲವರ ಹೆಸರು ಹೇಳಿದ್ದಾನೆ. ಎಸ್‌ಐಟಿ ತನಿಖೆಯಲ್ಲಿ ಯಾರು ಆತನ ಬಳಿ ದುಡ್ಡು ತಿಂದಿದ್ದಾರೆ ಅದು ಗೊತ್ತಾಗಬೇಕು. ನನ್ನ ಬಳಿ 1350 ಕೋಟಿ ರೂ. ಹಣ ಇದೆ ಎಂದು ಆತ ಹೇಳಿದ್ದಾನೆ. ನನಗೆ ಬಂದ ಮಾಹಿತಿ ಪ್ರಕಾರ ಜನರಿಗೆ ಆತ 2 ಸಾವಿರ ಕೋಟಿ ರೂ. ನೀಡಬೇಕಾಗಿದೆ. ಆತ ಬಂದು ಪೊಲೀಸರ ರಕ್ಷಣೆಯಲ್ಲೇ ಎಲ್ಲವೂ ತಿಳಿಸಿ ಜನರಿಗೆ ದುಡ್ಡು ಕೊಡಲಿ ಎಂದರು.
ಐಎಂಎ ಪ್ರಕರಣದಲ್ಲಿ ಜನರಿಗೆ ದುಡ್ಡು ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮನ್ಸೂರ್‌ಖಾನ್ ಬಂದರೆ ಜನರಿಗೆ ದುಡ್ಡು ವಾಪಸ್ ಕೊಡಿಸುವ ವಿಚಾರದಲ್ಲಿ ಮಾತ್ರ ಆತನಿಗೆ ನೆರವಾಗುತ್ತೇನೆಂದು ಹೇಳಿದರು. ನಾನು ಕಳೆದ ಬಾರಿಯೇ ಮನ್ಸೂರ್‌ಗೆ ಮನವಿ ಮಾಡಿದ್ದೆ. ಯಾರ್ಯಾರಿಗೆ ದುಡ್ಡು ಕೊಡಲಾಗಿದೆ. ಜನರಿಗೆ ಎಷ್ಟು ದುಡ್ಡು ಕೊಡಬೇಕು. ಆಸ್ತಿ ಎಷ್ಟಿದೆ ಎಂಬುದರ ಪಟ್ಟಿ ನೀಡಿ ಎಂದು ಕೇಳಿದ್ದೆ. ನಮ್ಮೆಲ್ಲರ ಜವಾಬ್ದಾರಿ ಜನರ ದುಡ್ಡು ವಾಪಸ್ ಕೊಡಿಸುವುದು ಎಂದು ತಿಳಿಸಿದರು.
ಪ್ರಕರಣದ ಎಸ್‌ಐಟಿ ತನಿಖೆಗೆ ನಾನೇ ಒತ್ತಾಯಿಸಿದ್ದೆ. ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ಎಸ್‌ಐಟಿ ತನಿಖೆಯಲ್ಲಿ ನಮ್ಮದೇನೂ ಪಾತ್ರವಿಲ್ಲ. ಆ ಬಗ್ಗೆ ಗೃಹ ಸಚಿವರು, ಮುಖ್ಯಮಂತ್ರಿಯವರು ವರದಿ ಪಡೆಯುತ್ತಾರೆ. ಒಂದು ವೇಳೆ ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗಲಿಲ್ಲವಾದರೆ ನಾನೇ ಸಿಬಿಐ ತನಿಖೆ ಮಾಡಬೇಕು ಎಂದು ಶಿಫಾರಸು ಮಾಡುತ್ತೇನೆ ಎಂದು ಹೇಳಿದರು.