Advertisement

ಸಂಗೀತ ಕಲಾವಿದರು ಶಾಸ್ತ್ರಜ್ಞಾನ ಹೊಂದಿರಲಿ; ಎಂ.ವೆಂಕಟೇಶ ಕುಮಾರ

06:12 PM Dec 20, 2022 | Team Udayavani |

ಧಾರವಾಡ: ಸಂಗೀತ ಕಲಾವಿದರು, ಶಿಕ್ಷಕರು ಪ್ರಯೋಗ ದೊಂದಿಗೆ ಸ್ವಲ್ಪವಾದರೂ ಶಾಸ್ತ್ರಜ್ಞಾನ ಹೊಂದಿರಬೇಕು. ಅದರ ಸೂಕ್ಷ್ಮ ವಿಚಾರಗಳೆಲ್ಲ ಸಂಸ್ಕೃತ ಗ್ರಂಥಗಳಲ್ಲಿವೆ. ಯುವ ಗಾಯಕ-ವಾದಕರು ವಿವಿಧ ಗ್ರಂಥಗಳನ್ನು ಹೊರ ತರುತ್ತಿರುವುದು ಸಂತೋಷದ ವಿಷಯ ಎಂದು ಪದ್ಮಶ್ರೀ ಎಂ.ವೆಂಕಟೇಶಕುಮಾರ ಹೇಳಿದರು.

Advertisement

ನಗರದ ಸೃಜನಾ ರಂಗಮಂದಿರದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಮತ್ತು ರೋಹಿಣಿ ನಾಗೇಂದ್ರ ಬರೆದ “ಗಾನರಾಗ ರಸಾಯನ’ ಪುಸ್ತಕ ಬಿಡುಗಡೆಗೊಳಿಸಿ, ಅವರು ಮಾತನಾಡಿದರು. ಎಷ್ಟೋ ಸಲ ಶ್ರೋತೃಗಳ ಚಪ್ಪಾಳೆಗಳಿಂದ ಕಲಾವಿದ ಬೀಗುತ್ತ ಓದುವಿಕೆಯಿಂದ ವಿಮುಖನಾಗುತ್ತಾನೆ.

ಆದರೆ ಶಾಸ್ತ್ರಜ್ಞಾನದ ಕೊರತೆಯಿಂದ ಯಾವಾಗಲಾದರೂ ಬೇಸರವಾಗುವ ಸಂದರ್ಭ ಬರುತ್ತದೆ ಎಂದ ಅವರು, ರೋಹಿಣಿಯವರು ಎಲ್ಲರಿಗೂ ಅನುಕೂಲವಾಗುವಂತೆ ಅತ್ಯಂತ ಕ್ಲಿಷ್ಟಕರ ವಿಷಯದ ಗ್ರಂಥ ರಚಿಸಿರುವುದು ಶ್ಲಾಘನೀಯ ಎಂದರು.

ಸಂಗೀತ ಸಂಪನ್ಮೂಲ ವ್ಯಕ್ತಿ ಪಂ|ಕೃಷ್ಣರಾವ ಇನಾಮದಾರ ಮಾತನಾಡಿ, ಮಹಾ ಸಾಧಕರನ್ನು ನೀಡಿದ ಧಾರವಾಡದಂತಹ ಕರ್ಮಭೂಮಿಯಲ್ಲಿ ಯುವ ಗಾಯಕರ ಕರ್ತವ್ಯ ಬಹಳಷ್ಟಿದೆ. ಹಿರಿಯರ ಅನುಭವಗಳನ್ನು ಪಡೆದು ಪ್ರಾಚೀನ ಗ್ರಂಥಗಳ ಅಧ್ಯಯನಶೀಲರಾಗಬೇಕು ಎಂದರು.

ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿ ಪಂ|ಶ್ರೀಪಾದ ಹೆಗಡೆ ಕಂಪ್ಲಿ ಮಾತನಾಡಿ, ಇಂತಹ ಪ್ರಶಸ್ತಿಗಳು ಗುರುತರ ಜವಾಬ್ದಾರಿ ಸೂಚಿಸುತ್ತವೆ. ಆಲಸ್ಯ ದೂರವಿಟ್ಟು ಕ್ರಿಯಾಶೀಲರಾಗಬೇಕೆಂದು ಎಚ್ಚರಿಸುತ್ತವೆ ಎಂದರು. ಸಂಗೀತ ವಿಮರ್ಶಕಿ ರೇಖಾ ಹೆಗಡೆ ಅವರು ಗಾನರಾಗ ರಸಾಯನ ಪುಸ್ತಕ ಪರಿಚಯಿಸಿದರು.

Advertisement

ಶಾಂತಮ್ಮ ಚಂದ್ರಶೇಖರ ಪುರಾಣಿಕಮಠ ಅವರು ಗ್ರಂಥ ಪ್ರಕಾಶನಕ್ಕೆ ಸಹಕರಿಸಿದ ಸಾಧಕರಿಗೆ ಪುಸ್ತಕಗಳನ್ನು ನೀಡಿದರು. ಡಾ|ಕೆ.ಗಣಪತಿ ಭಟ್ಟ ಪರಿಚಯಿಸಿದರು. ರೋಹಿಣಿ ಸ್ವಾಗತಿಸಿದರು. ಅಮೃತಾ ಪುರಾಣಿಕ ನಿರೂಪಿಸಿದರು. ಗುರುಕೃಪಾ ಸಂಗೀತ ವಿದ್ಯಾಲಯದ ಅಧ್ಯಕ್ಷ ಕುಮಾರ ಪುರಾಣಿಕಮಠ ವಂದಿಸಿದರು. ಪ್ರಕಾಶ ಬಾಳಿಕಾಯಿ ಮತ್ತು ರವೀಂದ್ರ ಕವಠೇಕರ ಕಲಾಕಾರರನ್ನು ಗೌರವಿಸಿದರು.

ಕರಾಮಚಂದ್ರ ಭಟ್ಟರ ಸಾಮಗಾನ ಮತ್ತು ಪ್ರಶಿಕ್ಷಿತ ಮಹಿಳೆಯರ ಸ್ತೋತ್ರಗಾನ ಗಮನ ಸೆಳೆಯಿತು. ನಂತರ ಜರುಗಿದ ಸಂಗೀತ ಸಿಂಚನದಲ್ಲಿ ಕೋಲ್ಕತ್ತಾದ ಪಂ|ಸಂದೀಪ ಚಟರ್ಜಿಯವರಿಂದ ಸಂತೂರ ವಾದನ, ಶ್ರೀಪಾದ ಹೆಗಡೆಯವರ ಗಾಯನ, ರೋಹಿಣಿಯವರಿಂದ ವಾಯೋಲಿನ್‌ ವಾದನ ಕಾರ್ಯಕ್ರಮಕ್ಕೆ ಮೆರಗು ತಂದಿತು. “ಸ್ವರ್ಣ ಜ್ಯುವೇಲರ್ಸ್‌ ಪ್ರೈ.ಲಿ, ಮುಖ್ಯ ಪ್ರಾಯೋಜಕರು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ಜೀವವಿಮಾ ನಿಗಮ ಸಹ ಪ್ರಾಯೋಜಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next