ತಿ.ನರಸೀಪುರ: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಡಾ.ಸರೋಜಿನಿ ಪರಿಷ್ಕೃತ ವರದಿ ಜಾರಿಗಾಗಿ ಹಮ್ಮಿಕೊಳ್ಳುವ ಚಳವಳಿಯ ನೇತೃತ್ವವನ್ನು ನಟ ಡಾ.ಶಿವರಾಜ್ ಕುಮಾರ್ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಕದಂಬ ಸೇನೆ ಕನ್ನಡ ಸಂಘಟನೆಯ ಸದಸ್ಯರು ಪಟ್ಟಣದಲ್ಲಿ ಪತ್ರಚಳವಳಿ ನಡೆಸಿದರು.
ಕದಂಬ ಸೇನೆಯ ಕನ್ನಡ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಅಂಚೆ ಕಚೇರಿಗೆ ತೆರಳಿ ನಟ ಶಿವರಾಜ್ ಕುಮಾರ್ ಸೇರಿದಂತೆ ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ಯಶ್, ಗಣೇಶ್ ಹಾಗೂ ಹಿರಿಯ ನಟರಾದ ರವಿಚಂದ್ರನ್, ಉಪೇಂದ್ರ ಅವರ ವಿಳಾಸಕ್ಕೆ ಪತ್ರ ಹಾಕುವ ಮೂಲಕ ಚಳವಳಿಗೆ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಒತ್ತಾ ಯಿಸಿದರು.
ಸಂಘಟನೆ ರಾಜಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಡಾ.ರಾಜಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ಪ್ರಖ್ಯಾತ ನಟ-ನಟಿಯರು ಬೀದಿಗಿಳಿದು ಹೋರಾಟ ನಡೆಸಿದ ಫಲವಾಗಿ ಕರುನಾಡಲ್ಲಿ ಕನ್ನಡಿಗ ನೆಮ್ಮದಿಯಿಂದ ಬದುಕಬಹುದಾಗಿತ್ತು. ಆದರೆ ಈಗ ಇಲ್ಲಿನ ಉದ್ಯೋಗವನ್ನು ಪರಭಾಸಿಗರು ಕಬಳಿಸುತ್ತಿದ್ದು ನಾವು ಅಲ್ಪ ಸಂಖ್ಯಾತರಾಗುತ್ತಿದ್ದೇವೆ ಎಂದು ಆರೋಪಿಸಿದರು.
ಉದ್ಯೋಗ ಮಾತ್ರ ಅಲ್ಲದೇ ವ್ಯಾಪಾರ ಹಾಗೂ ಉದ್ಯಮ ರಂಗದ ಅವಕಾಶಗಳಿಂದಲೂ ಕನ್ನಡಿಗರು ವಂಚಿತರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಪರಭಾಷೆಯ ಚಲನಚಿತ್ರಗಳು ಕರುನಾಡಿನ ಚಿತ್ರಮಂದಿರದಲ್ಲಿ ನೆಲೆಯೂರಿ ಕನ್ನಡ ಚಿತ್ರಗಳಿಗೂ ಅವಕಾಶ ವಂಚಿತವಾಗುತ್ತಿವೆ. ಹೀಗಾಗಿ ಕನ್ನಡಿಗರಾದ ನಾವು ಮತ್ತೂಂದು ಗೋಕಾಕ್ ಮಾದರಿಯ ಚಳವಳಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದ್ದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡಿಗರ ಉದ್ಯೋಗ ಮೀಸಲಾತಿ ಡಾ.ಸರೋಜಿನಿ ಪರಿಷ್ಕೃತ ವರದಿ ಜಾರಿಯ ವಿಷಯದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತಾಯ್ತಿಸಿದರು.
ಶಿವರಾಜ್ ಕುಮಾರ್ ಅವರು ಗೋಕಾಕ್ ಮಾದರಿಯ ಚಳವಳಿಯ ನೇತೃತ್ವ ವಹಿಸಬೇಕು ಹಾಗೂ ಎಲ್ಲ ಚಿತ್ರನಟರು ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದರು. ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಮಹದೇವನಾಯಕ, ಹ.ಸ.ಪ್ರವೀಣ್, ಪುನೀತ್, ಮಹೇಶ್, ಮೋಹನ್, ರಕ್ಷಿತ್, ಶಿವರಾಜು, ಮಂಜು, ಕೃಷ್ಣ, ಹರಿಪ್ರಸಾದ್ ಇತರರು ಇದ್ದರು.