ರಾಣಿಬೆನ್ನೂರ: ದೇವಸ್ಥಾನ ಹಾಗೂ ಮಠಗಳು ನೆಮ್ಮದಿ ತಾಣವಾಗಬೇಕು. ದುಡಿದ ಹಣದಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ದಾನ ಮಾಡಿದಲ್ಲಿ ಜೀವನ ಪಾವನವಾಗುವುದು ಎಂದು ಕೂಡಲಸಂಗಮದ ವೀರಶೈವ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ನಿಟಪಳ್ಳಿ ಗ್ರಾಮದಲ್ಲಿ ಐ.ಎಚ್. ಪಾಟೀಲ ಸ್ಮರಣಾರ್ಥ ನಿಮಾರ್ಣಗೊಂಡಿರುವ ದುರ್ಗಾದೇವಿ ದೇವಸ್ಥಾನ ಮತ್ತು ಮೂರ್ತಿ ಪ್ರತಿಷ್ಠಾಪನೆ ಹಾಗೂ ಚಂದ್ರಗುತ್ತೆಮ್ಮ ಪಾದ ಪ್ರತಿಷ್ಠಾಪನೆ ಮತ್ತು ಬಸವೇಶ್ವರ ದೇವರ ನೂತನ ರಥದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
84 ಲಕ್ಷ ಜೀವರಾಶಿಗಳಲ್ಲಿ ಅಂಡಜ, ಪಿಂಡಜ, ಜಲಜ ಜೀವರಾಶಿಗಳಾಗಿ ಜನ್ಮ ತಾಳಿ ಆ ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಮನುಷ್ಯನಿಗೆ ಮಾತ್ರ ಅರಿವಿದ್ದು, ತನ್ನ ಜೀವಿತದ ಅವಧಿಯಲ್ಲಿ ಪುಣ್ಯದ ಕಾರ್ಯಗಳನ್ನು ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಅರ್ಹರಾಗಬೇಕು ಎಂದು ಶ್ರೀಗಳು ನುಡಿದರು.
ರಟ್ಟಿಹಳ್ಳಿಯ ಕಬ್ಬಿನಕಂತಿಮಠದ ಶಿವಾಚಾರ್ಯ ಶ್ರೀಗಳು ಮತ್ತು ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಉಜ್ಜನಗೌಡ್ರ, ಶಾಸಕ ಅರುಣಕುಮಾರ ಪೂಜಾರ, ಉಗ್ರಾಣ ಸಮಿತಿ ಅಧ್ಯಕ್ಷ ಯು.ಬಿ. ಬಣಕಾರ, ವಾಯುವ್ಯ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷಕುಮಾರ ಪಾಟೀಲ, ಮಾಜಿ ಸಚಿವ ಆರ್. ಶಂಕರ, ರುದ್ರಗೌಡ ಪಾಟೀಲ, ಎನ್.ಜಿ. ನಾಗನಗೌಡ್ರ, ಸಂತೋಷಕುಮಾರ ಪಾಟೀಲ, ಬಸವರಾಜ ಸವಣೂರ, ಎಸ್.ಎಸ್. ರಾಮಲಿಂಗಣ್ಣನವರ, ಶಿವಾನಂದ ಸಂಗಾಪುರ, ಮಂಜನಗೌಡ ಪಾಟೀಲ, ಹನುಮಂತಪ್ಪ ಬ್ಯಾಲದಹಳ್ಳಿ, ಸುರೇಶ ಉಕ್ಕಡಗಾತ್ರಿ, ಶೀಲಾ ಉಜ್ಜಪ್ಪನವರ, ಗಿರಿಜವ್ವ ಕಡೇಮನಿ, ದೀಪಾ ಆನ್ವೇರಿ, ಕೇಶವಮೂರ್ತಿ ರಾಠೊಡ ಇದ್ದರು. ಇದೇ ವೇಳೆ ಭೂದಾನಿ ಸಾಧಕರನ್ನು ಸನ್ಮಾನಿಸಲಾಯಿತು.