Advertisement

ಮಕ್ಕಳ ಮನಸ್ಸು ಆರೋಗ್ಯವಾಗಿರಲಿ

02:20 PM Aug 28, 2021 | Team Udayavani |

ಮಕ್ಕಳ ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸುವುದು ಹಾಗೂ ಅವರ ತಪ್ಪುಗಳಿಗೆ ಅತಿಯಾಗಿ ಶಿಕ್ಷಿಸುವುದು ಪೋಷಕರು ಮಾಡುವ ಬಹುದೊಡ್ಡ ತಪ್ಪಾಗಿರುತ್ತದೆ. ಪೋಷಕರ ಅಜಾಗರೂಕ ತೆಯ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ಪೋಷಕರ ವರ್ತನೆಯ ತೊಂದರೆಗಳು ಮಕ್ಕಳ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆಕಾರಣವಾಗುವ ಸಾಧ್ಯತೆ ಇರುತ್ತದೆ. ಮಗುವಿನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸಲು ಪೋಷಕರು ಮಾಡುವ ಕೆಲವೊಂದು ತಪ್ಪುಗಳನ್ನುಕೂಡಲೇ ನಿಲ್ಲಿಸಬೇಕಾಗುತ್ತದೆ.

Advertisement

ಸೂಕ್ತವಲ್ಲದ ಹೆಸರಿನಿಂದ ಕರೆಯುವುದು
ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಸೂಕ್ತವಲ್ಲದ ಹೆಸರಿನಿಂದ ಕರೆಯುತ್ತಾರೆ. ಉದಾ- ದಡ್ಡ, ದಡ್ಡಿ (ಅನರ್ಹ). ಇದು ಸಾಮಾನ್ಯ ಎಂದೇ ಪೋಷಕರು ಭಾವಿಸಬಹುದು. ಆದರೆ ಮಗುವಿನ ಮನದಲ್ಲಿ ಅದು ಅವರ ಸಾಮರ್ಥ್ಯಕ್ಕೆ ತೋರುವ ಅಗೌರವ ಆಗಿರುತ್ತದೆ. ಇದರಿಂದ ಅದು ಪ್ರತಿಯೊಂದು ಕಾರ್ಯದಲ್ಲೂ ಹಿನ್ನಡೆ ಸಾಧಿಸಬಹುದು. ಅವರಲ್ಲಿ ಆತಂಕದ ವಾತಾವರಣ ಸೃಷ್ಟಿಸಬಹುದು. ಪ್ರತಿಯೊಂದುಕಾರ್ಯಕ್ಕೂ ಅವರು ಇನ್ನೊಬ್ಬರ ಅವಲಂಬನೆ ಮಾಡಲು ತೊಡಗುತ್ತಾರೆ.

ವಿಪರೀತ ಪದಗಳ ಬಳಕೆ
ಮಕ್ಕಳುಕೆಲವೊಂದು ವಿಷಯಗಳಿಗ ನಿಧಾನಿಸುತ್ತಾರೆ. ಆದರೆ ಅವರಿಗೆ ನೀನು ಯಾವಾಗಲೂ ಹೀಗೆ, ಎಂದಿಗೂ ಹೀಗೆ ಮಾಡುತ್ತೀ ಎಂದು ವಿಪರೀತವಾಗಿ ಹೇಳುತ್ತಿದ್ದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಇದರಿಂದ ಅವರು ತಮ್ಮ ಸಾಮರ್ಥ್ಯದ ಬಗ್ಗೆ ಸ್ಥಿರ ಮನಸ್ಥಿತಿ ಬೆಳೆಸಲು ಕಾರಣವಾಗುವುದು. ಇದರಿಂದ ಖನ್ನತೆ, ಅಸಮಾಧಾನ ಉಂಟಾಗಬಹುದು.

ಹೋಲಿಕೆ ಮಾಡುವುದು
ಪ್ರತಿಯೊಂದು ಮಗುವಿಗೆ ತನ್ನದೇ ಆದ ಸಾಮರ್ಥ್ಯವಿರುವುದು. ಹೀಗಾಗಿ ಬೇರೆ ಮಕ್ಕಳೊಂದಿಗೆ ಅವರನ್ನು ಹೋಲಿಸುವುದು ಸರಿಯಲ್ಲ. ಅವರಲ್ಲಿರುವ ಕೌಶಲಕ್ಕೆ ಪ್ರೋತ್ಸಾಹ ಕೊಡಬೇಕು. ಒಂದು ವೇಳೆ ಇತರ ಮಕ್ಕಳೊಂದಿಗೆ ಅವರನ್ನು ನಿರಂತರ ಹೋಲಿಕೆ ಮಾಡಿದರೆ ಅವರ ಆತ್ಮವಿಶ್ವಾಸ ತನ್ನಿಂತಾನೇ ಕುಗ್ಗುತ್ತದೆ.

ಆರೋಪ
ಪೋಷಕರು ಮಕ್ಕಳಿಗೆ ಶಿಸ್ತು ಕಲಿಸುವುದು ಒಂದು ಅದ್ಭುತ ಸಂಗತಿಯಾಗಿದೆ. ಆದರೆ ಇದರಲ್ಲಿ ಮಕ್ಕಳ ಮನಸ್ಸನ್ನು ದುರ್ಬಲಗೊಳಿಸುವುದು ಸಾಧ್ಯವಿದೆ. ಸಣ್ಣ ತಪ್ಪುಗಳಿಗೆ ಅವರನ್ನು ದೂಷಿಸುವುದು, ಶಿಕ್ಷಿಸುವುದು, ಎಲ್ಲರ ಮುಂದೆ ಅವಮಾನ ಮಾಡುವುದರಿಂದ ಅವರು ತಮ್ಮನ್ನು ತಾವು ನಿಷ್ಪ್ರಯೋಜಕ, ಶಕ್ತಿಹೀನ ಎಂದು ಭಾವಿಸಬಹುದು. ಪ್ರತಿಯೊಂದು ತಪ್ಪುಗಳಿಗೂ ಶಿಕ್ಷೆ ಕೊಡುವುದು, ಟೀಕೆ ಮಾಡುವುದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.

Advertisement

ರೇಗಾಡುವುದು
ಮಕ್ಕಳ ಮೇಲೆ ಪದೇಪದೇ ಜೋರಾದ ಧ್ವನಿಯಲ್ಲಿ ರೇಗಾಡುವುದು ಅವರಲ್ಲಿ ಭಯಕ್ಕೆ ಕಾರಣವಾಗುವುದು. ಅಗತ್ಯವಿದ್ದಾಗ ಮಾತ್ರ ಅವರ ಮೇಲೆ ರೇಗಾಡಿ. ಆದರೆ ನಿಮ್ಮ ಮುಖ ಭಾವ, ದೇಹ ಭಾಷೆಯನ್ನು ಅರಿಯಲು ಅವರಿಗೆ ಸಮಯಕೊಡಿ. ಯಾವುದೇ ಕಾರಣಕ್ಕೂ ಅವರಲ್ಲಿ ಭಯದ ವಾತಾವರಣ ಸೃಷ್ಟಿಸಬೇಡಿ.

ಮಕ್ಕಳ ವೈಯಕ್ತಿಕ ಜಾಗ
ಮಗುವಿನ ವೈಯಕ್ತಿಕ ಜಾಗವನ್ನು ಗೌರವಿಸುವ ಅಗತ್ಯವನ್ನು ಪೋಷಕರು ಹೆಚ್ಚಾಗಿ ಕಡೆಗಣಿಸುತ್ತಾರೆ. ಮಕ್ಕಳಿಗೂ ಅವರ ಆಲೋಚನೆಗಳನ್ನು ಪ್ರತಿಬಿಂಬಿಸಲು, ಸಂಗ್ರಹಿಸಲು ಸೂಕ್ತ ಸಮಯ ಬೇಕಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ ಮತ್ತು ವಿಫ‌ಲರಾಗುತ್ತದೆ. ಆದರೆ ಅದು ಪೂರ್ಣ ನಿಲುಗಡೆಯಲ್ಲ. ಮಕ್ಕಳು ಎಲ್ಲರಂತೆ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ನಿರ್ಧಾರ ತೆಗೆದುಕೊಳ್ಳಲು ಬಿಡಿ. ಇದರಿಂದ ಹೆಚ್ಚು ಆತ್ಮವಿಶ್ವಾಸ ಮತ್ತು ಜಾಗರೂಕರಾಗುತ್ತಾರೆ. ಮಕ್ಕಳಿಗೆ ವೈಯಕ್ತಿಕ ಸಮಯವನ್ನು ಆನಂದಿಸಲು ಅನುಮತಿಸಿ. ಅವರ ನಿರ್ಧಾರ ಸರಿಯಾಗಿಲ್ಲದಿದ್ದರೆ ಅದನ್ನು ಸ್ಪಷ್ಟ ರೂಪದಲ್ಲಿ ತಿಳಿಸಿ.

ಪ್ರೀತಿ, ಕಾಳಜಿಯ ಅರಿವಿರಲಿ
ಮಕ್ಕಳ ಚಟುವಟಿಕೆಗಳ ಕುರಿತು ಸುಮ್ಮನಿರುವುದು, ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು ಮಗುವಿಗೆ ನಿಯಂತ್ರಣ ಮತ್ತು ಅಸ್ಥಿರ ವಾತಾವರಣ ಸೃಷ್ಟಿಸುತ್ತದೆ. ಪೋಷಕರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ಅವರು ತಿಳಿದಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next