ನೂರಾರು ಕನಸುಗಳನ್ನು ಹೊತ್ತು ಬೆಂಗಳೂರು ಕಡೆ ಹೊರಟಿದ್ದೆ. ಬಸ್ ಗೆ ಏರುವ ಮುನ್ನ ಹಿಂದಿರುಗಿ ಮನೆಯವರನ್ನೆಲ್ಲ ನೋಡಿದೆ. ಅಮ್ಮನ ಕಣ್ಣಲ್ಲಿ ಆತಂಕ, ಅಪ್ಪನ ಮೊಗ ದಲ್ಲಿ ಅಭಿ ಮಾನವ, ಅಕ್ಕ, ತಮ್ಮನ ಮನಸ್ಸಲ್ಲಿ ಸಂತೋಷ… ಎಲ್ಲವೂ ಜತೆಯಾಗಿತ್ತು. ನನ್ನ ಮನಸ್ಸು ಹೊಸ ಊರನ್ನು ಕಾಣುವ ತವ ಕದ ಜತೆಗೆ ಹುಟ್ಟಿ ಬೆಳೆದ ಮನೆ, ಪರಿಸರದಿಂದ ದೂರವಾಗುವ ನೋವಿತ್ತು.
ಬದುಕಿನ ಎಷ್ಟೋ ನಿರ್ಧಾರಗಳು ಏಕಕಾಲಕ್ಕೆ ನೂರಾರು ವಿಷಯಗಳನ್ನು ತಂದಿಡು ತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬುದರ ಅರಿವೇ ಆಗುವುದಿಲ್ಲ. ನಮಗೆ ಸರಿ ಕಂಡದ್ದು ಮತ್ತೊಬ್ಬರಿಗೆ ತಪ್ಪಾಗಿರಬಹುದು. ಮತ್ತೊಬ್ಬರಿಗೆ ಸರಿಯಾಗಿದ್ದು ನಮಗೆ ತಪ್ಪು ಎಂದೆನಿಸಬಹುದು. ಆದರೆ ಇಲ್ಲಿ ನಿರ್ಧಾರಗಳ ತೂಗುಯ್ನಾಲೆಯ ಬಳ್ಳಿ ನಮ್ಮ ಕೈಯಲ್ಲೇ ಇದ್ದರೂ ಸರಿಯಾಗಿ ಒಂದು ಕಡೆ ತಂದು ನಿಲ್ಲಿಸಲಾಗದ ತಳಮಳ ಹೃದಯಂತರಾಳದಲ್ಲಿ.
ಮನಸ್ಸಿನ ಮಾತಿಗೆ ಹೃದಯ ಮೌನವಾಗುತ್ತದೆ. ಹೃದಯದ ನೋವಿಗೆ ಮನಸ್ಸು ಚೀರುತ್ತದೆ. ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಈ ಜೋಡಿಗಳನ್ನು ಜತೆ ಸೇರಿಸುವುದು ತುಸು ಕಷ್ಟವೇ ಸರಿ. ಯಾರೋ ಹೇಳಿದರು ಅಲ್ಲಿ ನೂರಾರು ಅವಕಾಶಗಳಿದೆ. ಮತ್ತೊಬ್ಬರು ಹೇಳುತ್ತಾರೆ ಕಷ್ಟಗಳ ಸರಮಾಲೆಯೇ ಕಾದಿದೆ. ಕಷ್ಟಗಳಿಗೆ ಹೆದರಿ ಅವಕಾಶವನ್ನು ಕೈ ಚೆಲ್ಲಿದರೆ ಭವಿಷ್ಯ ಭದ್ರಗೊಳಿಸುವ ಆತಂಕ.
ಎಲ್ಲರ ಬದುಕಿನಲ್ಲೂ ಇಂತಹ ಪ್ರಶ್ನೆಗಳು, ಸವಾಲುಗಳು ಸಾಕಷ್ಟು ಬಂದಿರಬಹುದು. ಹೆಚ್ಚಿನ ಸಂದರ್ಭದಲ್ಲಿ ಹೃದಯದ ಮಾತನ್ನೇ ಕೇಳುತ್ತೇವೆಯಾದರೂ ಮನದಲ್ಲಿ ತುಂಬಿರುವ ದುಗುಡ, ಆತಂಕಕ್ಕೆ ಹೆದರಿ ಮೌನವಾಗುತ್ತೇವೆ. ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕು ಎಂದು ಕಾಯುತ್ತೇವೆ. ಹೀಗಾದರೆ ಕೆಲವೊಂದು ಬಾರಿ ಅವಕಾಶಗಳು ಕೈಚೆಲ್ಲುವುದು ಇದೆ. ಹೀಗಾಗಿ ಸಮಯಕ್ಕೆ ತಕ್ಕ ನಿರ್ಧಾರಕ್ಕೆ ಮನಸ್ಸು, ಹೃದಯವನ್ನು ಜತೆಗೂಡಿಸುವ ಶಕ್ತಿಯನ್ನು ನಮ್ಮೊಳಗೆ ತುಂಬಿಕೊಳ್ಳಬೇಕು. ಅದಕ್ಕಾಗಿ ಪರಿ ಪೂರ್ಣ ಜ್ಞಾನದ ಅರಿವು, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದಾರಿ ತಿಳಿದಿರಬೇಕು.