ಪಿರಿಯಾಪಟ್ಟಣ: ಗ್ರಾಮ ಪಂಚಾಯ್ತಿಗಳಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 14ನೇ ಹಣಕಾಸು ಯೋಜನೆಯಡಿ ಹೆಚ್ಚಿನ ಅನುದಾನ ಬಿಡುಗಡೆಗೊಂಡ ನಂತರ ಗ್ರಾಪಂಗಳ ಸ್ವರೂಪವೇ ಬದಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ತಾಲೂಕಿನ ಚೌತಿ, ಪುನಾಡಹಳ್ಳಿ, ಭುವನಹಳ್ಳಿಯಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ನೂತನ ಗ್ರಾಪಂ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ಸದಸ್ಯರು ಹೆಚ್ಚಿನ ಕಾಳಜಿ ವಹಿಸಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಅದನ್ನು ಬಿಟ್ಟು ವಿನಾಃ ಕಾರಣ ಆರೋಪದಲ್ಲಿ ತೊಡಗಿದರೆ ಹಳ್ಳಿಗಳ ಪ್ರಗತಿ ಕುಂಠಿತಗೊಂಡು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ. ಜಿಪಂ, ತಾಪಂ ಸದಸ್ಯರ ಅನುದಾನ ಅತ್ಯಂತ ಕಡಿಮೆ ಇದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅನುದಾನ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಾವು ಸಂಸದರಾಗಿ ಆಯ್ಕೆಯಾದ ಬಳಿಕ ಪಿರಿಯಾಪಟ್ಟಣ ತಾಲೂಕಿನಲ್ಲಿ 20 ನೂತನ ರಾಜೀವ್ ಗಾಂಧಿ ಸೇವಾ ಕೇಂದ್ರ, ಹುಣಸೂರಿನಲ್ಲಿ 26 ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ ಎಂದರು. ಶಾಸಕ ಕೆ.ಮಹದೇವ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿರುವ ರಸ್ತೆಗಳ ನಿರ್ಮಾಣಕ್ಕೆ ಸದಸ್ಯರು ಹೆಚ್ಚು ಒತ್ತು ನೀಡಿದರೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಳ ಆಯ್ಕೆ ಜವಾಬ್ದಾರಿಯನ್ನು ಸದಸ್ಯರಿಗೆ ವಹಿಸಿದರೆ ಸೂಕ್ತ ಎಂದರು.ಪಿರಿಯಾಪಟ್ಟಣ-ಸಿದ್ದಾಪುರ ರಸ್ತೆ ಅಗಲೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಸಂಸದರೊಂದಿಗೆ ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುಮೋದನೆ ಪಡೆದುಕೊಳ್ಳಲು ಯತ್ನಿಸುವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪಾ, ಸದಸ್ಯ ಶ್ರೀನಿವಾಸ್, ಜಿಪಂ ಸದಸ್ಯ ಕೆ.ಸಿ. ಜಯಕುಮಾರ್, ತಾಪಂ ಇಒ ಡಿ.ಸಿ. ಶ್ರುತಿ, ಚೌತಿ ಗ್ರಾಪಂ ಅಧ್ಯಕ್ಷ ರವಿ, ಉಪಾಧ್ಯಕ್ಷೆ ನೂರ್ಜಹಾನ್, ಮಾಜಿ ಅಧ್ಯಕ್ಷೆ ಲಲಿತಾ, ಸದಸ್ಯರಾದ ಗೋವಿಂದೇಗೌಡ, ಕೃಷ್ಣೇಗೌಡ, ರಾಮಚಂದ್ರ, ಸುಬ್ರಹ್ಮಣ್ಯ, ಶಂಕರ್, ಸುಜಾತಾ, ಆಶಾ, ಮಾಲಿನಿ ಶ್ರುತಿ, ಪವಿತ್ರ, ಪಿಡಿಒ ಪಿ.ಆರ್. ಮೋಹನ್‌ಕುಮಾರ್, ಕಾರ್ಯದರ್ಶಿ ಸ್ವಾಮಿ ಇತರರಿದ್ದರು.