Advertisement

ಮಾಧ್ಯಮಗಳು ಸತ್ಯಶೋಧನೆ ಮಾಡಲಿ

07:41 AM Jul 02, 2019 | Suhan S |

ದಾವಣಗೆರೆ: ಮಾಧ್ಯಮ ಕ್ಷೇತ್ರದ ಮೂಲಕ ಪ್ರಚಾರಕ್ಕಿಂತಲೂ ಅಪಪ್ರಚಾರವೇ ಹೆಚ್ಚಾಗಿ ನಡೆಯುವುದು ದುರ್ದೈವ ಎಂದು ಹಾರನಹಳ್ಳಿ ಕೋಡಿಹಳ್ಳಿ ಮಠದ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

Advertisement

ಸೋಮವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸುವರ್ಣಸೌಧದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಪತ್ರಿಕಾ ದಿನಾಚರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಪಪ್ರಚಾರ ಈಗ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಇದೆ. ಇದ್ದ ವಿಚಾರವನ್ನು ತಿರುಚಿ ಹೇಳುವುದು, ಅಪಪ್ರಚಾರ ಮಾಡುವುದು ಸಮಾಜಕ್ಕೆ ಆಘಾತಕಾರಿ. ಹಾಗಾಗಿ ಮಾಧ್ಯಮ ಕ್ಷೇತ್ರದಲ್ಲಿ ಇರುವರು ಇರುವಂತ ವಿಚಾರವನ್ನು ಪ್ರಚಾರ ಮಾಡಬೇಕು. ಸದಾ ಸತ್ಯಶೋಧನೆ ಮಾಡಬೇಕು ಎಂದು ತಿಳಿಸಿದರು.

ಜಗತ್ತು ಹುಟ್ಟಿದಾಗಿನಿಂದಲೂ ಸಮಾಚಾರ, ವಿಚಾರ ಮತ್ತು ಪ್ರಚಾರ ಇದೆ. ನಡೆಯುವ ಕಾರ್ಯಕ್ರಮ ಸಮಾಚಾರ, ಅಲ್ಲಿನ ವಿಷಯಗಳು ವಿಚಾರ, ಅಲ್ಲಿ ನಡೆದಿದ್ದನ್ನು ಸಮಾಜಕ್ಕೆ ತಿಳಿಸುವುದು ಪ್ರಚಾರ. ಇಂದಿಗೂ ಜಗತ್ತಿನಾದ್ಯಂತ ಪತ್ರಿಕಾ ಕ್ಷೇತ್ರ ಸೇವೆ ಸಲ್ಲಿಸುತ್ತಿರವುದು ಶ್ಲಾಘನೀಯ. ಅದರಲ್ಲಿ ಸತ್ಯಶೋಧನೆ ಇರಬೇಕು ಎಂದು ತಿಳಿಸಿದರು.

ಸಮಾಜದ ಅಂಕುಡೊಂಕು ತಿದ್ದುವಂತಹ ಕೆಲಸ ಮಾಡುವಂತಹ ಪತ್ರಕರ್ತರು ಉಪಾಧ್ಯಾಯರು ಇದ್ದಂತೆ. ಪಂಡಿತರಿಂದ ಪಾಮರರವರೆಗೆ ತಿದ್ದುವ ಕೆಲಸ ಮಾಡುವಂತಹವರು ಹೆಚ್ಚು ಜವಾಬ್ದಾರಿಯಿಂದ ವೃತ್ತಿಯನ್ನು ನಿರ್ವಹಿಸಿದರೆ ಸಮಾಜ ಸದಾ ಸ್ಮರಿಸುತ್ತದೆ. ಸಮಾಜಕ್ಕೆ ಒಳಿತು ಮಾಡುವ ಶ್ರೇಷ್ಠ ಚಿಂತನೆ ಅತೀ ಮುಖ್ಯ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಸಂವಿಧಾನ ಅಧಿಕಾರ ನೀಡದೇ ಇದ್ದರೂ ಸಂವಿಧಾನದ ನಾಲ್ಕನೇ ಅಂಗ ಎಂದೇ ಗುರುತಿಸಲ್ಪಡುವ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಪ್ರಬುದ್ಧ ಮತ್ತು ಉತ್ತಮ ಅವಕಾಶ ಹೊಂದಿದವರು ಸಮಾಜವನ್ನು ಸದಾ ಎಚ್ಚರಿಸುವ ಜೊತೆಗೆ ಸೆಳೆಯುವ ಕೆಲಸ ಮಾಡಬೇಕು. ಸಮಾಜ ಚಿಂತನೆ ಮಾಡುವಂತೆ ಮಾಡಬೇಕು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಒಂದೇ ಎಂಬ ಆಶಯದೊಂದಿಗೆ ಮುನ್ನಡೆಯಬೇಕು ಎಂದು ಆಶಿಸಿದರು.

Advertisement

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪತ್ರಕರ್ತರು ಏನು ಬೇಕಾದರೂ ಮಾಡಬಹುದು. ಒಬ್ಬರನ್ನು ಹೊಗಳಬಹುದು. ಇನ್ನೊಬ್ಬರನ್ನು ತೆಗೆಳಬಹುದು. ಎಲ್ಲವೂ ಮಾಧ್ಯಮ ಕ್ಷೇತ್ರದ ಕೈಯಲ್ಲೇ ಇದೆ ಎಂದ ಅವರು, ದಾವಣಗೆರೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮಾತನಾಡಿ, 2010 ರ ನಂತರ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಉದ್ಯಮವಾಗಿ ಬದಲಾಗಿದೆ. ಈಚೆಗೆ ನಾಗರಿಕ ಮಾಧ್ಯಮದ ನಂತರ ಬದಲಾವಣೆ ಜೊತೆಗೆ ಸವಾಲುಗಳು ಸಹ ಇವೆ. ದೃಶ್ಯ ಮಾಧ್ಯಮ ಟಿಆರ್‌ಪಿ, ಮುದ್ರಣ ಮಾಧ್ಯಮದವರು ಪ್ರಸರಣದತ್ತ ಗಮನ ನೀಡಬೇಕಾಗಿದೆ. ಅಂತಹ ಸ್ಪರ್ಧಾತ್ಮಕತೆಯ ನಡುವೆಯೂ ಮಾಧ್ಯಮ ಕ್ಷೇತ್ರ ಸಮಾಜಕ್ಕೆ ಸತ್ಯವನ್ನೇ ತಿಳಿಸಬೇಕು ಎಂದರು.

ಕೈಗಾರಿಕೋದ್ಯಮಿ ಅಥಣಿ ಎಸ್‌. ವೀರಣ್ಣ ಮಾತನಾಡಿ, ಎಸ್‌.ಎಸ್‌. ಜನ ಕಲ್ಯಾಣ ಟ್ರಸ್ಟ್‌ನಿಂದ ಪತ್ರಕರ್ತರು ಮತ್ತು ಛಾಯಾಗ್ರಾಹಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ 1 ಕೋಟಿ ಠೇವಣಿಗೆ ಹೆಚ್ಚು ಬಡ್ಡಿ ದೊರೆಯುತ್ತಿದ್ದ ಕಾರಣಕ್ಕೆ ಬಹಳಷ್ಟು ಜನರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಈಗ ಕಡಿಮೆ ಬಡ್ಡಿ ದೊರೆಯುತ್ತಿರುವುದಕ್ಕೆ ಕೊಡುವ ಸಂಖ್ಯೆಯೂ ಕಡಿಮೆ ಆಗಿದೆ. ಹಾಗಾಗಿ ಶಾಮನೂರು ಶಿವಶಂಕರಪ್ಪ ಅವರು ಠೇವಣಿಯನ್ನ 1 ಕೋಟಿಯಿಂದ 2 ಕೋಟಿಗೆ ಹೆಚ್ಚಿಸುವ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಬಸವರಾಜ ದೊಡ್ಮನಿ, ಕೆ. ಚಂದ್ರಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ್‌ ಬಿಸಲಹಳ್ಳಿ , ಇ.ಎಂ. ಮಂಜುನಾಥ ಏಕಬೋಟೆ, ಚುನಾವಣಾಧಿಕಾರಿ ಜೆ.ಕೆ. ಪಂಚಣ್ಣ ಇತರರು ಇದ್ದರು.

ಹಿರಿಯ ಪತ್ರಕರ್ತರಾದ ಬಿ. ಅನಸೂಯಮ್ಮ, ಬಾ.ಮ. ಬಸವರಾಜಯ್ಯ, ಎಂ.ಎಸ್‌. ಶಿವಶರಣಪ್ಪ, ವಿ. ಬಸವರಾಜಯ್ಯ, ಸಿ.ಟಿ. ಮಜ್ಜಗಿ, ಅವರನ್ನು ಸನ್ಮಾನಿಸಲಾಯಿತು. ಸಿದ್ದಗಂಗಾ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶ್ರೀನಿವಾಸ್‌ ಸ್ವಾಗತಿಸಿದರು. ನಳಿನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next