Advertisement

ಮಹಾತ್ಮರು ಕಂಡ ಸಮಾನತೆ ಭಾವಕ್ಕೆ ಧಕ್ಕೆ ಬಾರದಿರಲಿ

01:02 PM Oct 08, 2018 | |

ವಿಜಯಪುರ: ಬುದ್ಧ, ಬಸವಣ್ಣ ಹಾಗೂ ಡಾ| ಅಂಬೇಡ್ಕರ್‌ ಕಂಡ ಸಮಾನತೆಯ ಪರಿಕಲ್ಪನೆ, ಭಾವನೆಗೆ ಧಕ್ಕೆ ಬರದಂತೆ ಜಾಗೃತಿ ವಹಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದವರ ಒಗ್ಗಟ್ಟಿಗಾಗಿ ಆಯೋಜಿಸಲಾಗಿದ್ದ ಚಿಂತನಗೋಷ್ಠಿಗೆ ಚಾಲನೆ ನೀಡಿ ಅವರು
ಮಾತನಾಡಿದರು.

ಭಾರತವನ್ನು ವಿಶ್ವದಲ್ಲಿಯೇ ಶ್ರೇಷ್ಠ ಹಾಗೂ ಮಾದರಿ ರಾಷ್ಟ್ರವಾಗಿ ಗುರುತಿಸುವಲ್ಲಿ ಬುದ್ಧ, ಬಸವ, ಡಾ| ಅಂಬೇಡ್ಕರ್‌ ಪಾತ್ರ ಪ್ರಮುಖವಾಗಿದೆ. ಈ ಮಹಾತ್ಮರು ಕಂಡಿದ್ದ ಕನಸು ಸಾಕಾರಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಸಮಾನತೆಗೆ ಧಕ್ಕೆ ಬಾರದಂತೆ ಜಾಗೃತಾವಸ್ಥೆಯಲ್ಲಿ ಇರಬೇಕು ಎಂದು ಕಿವಿಮಾತು ಹೇಳಿದರು. 

ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ್ಯದ ಹಕ್ಕು ನೀಡಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ ಶ್ರೇಷ್ಠ ನಾಯಕರಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಸಹ ಒಬ್ಬರು. ಮಹಿಳಾ ಸ್ವಾತಂತ್ರ್ಯವನ್ನು ಬಲವಾಗಿ ಪ್ರತಿಪಾದಿಸಿದ ಶ್ರೇಷ್ಠ ಚೇತನ ಡಾ| ಅಂಬೇಡ್ಕರ್‌ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎಂದು ಕರೆ ನೀಡಿದರು.

ಅಹಿಂದ ಮುಖಂಡ ಎಸ್‌.ಎಂ. ಪಾಟೀಲ ಗಣಿಹಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗುತ್ತಿದೆ. ಮ್ಯಾನ್ಮಾರ್‌ನಲ್ಲಿ ಆ ದೇಶದ ಮಿಲಟರಿ ಪಡೆಗಳೇ ಮುಂದೆ ನಿಂತು ರೋಹಿಂಗ್ಯಾಗಳನ್ನು ಹೊರದಬ್ಬಿವೆ. ರೋಹಿಂಗ್ಯಾಗಳಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ಸವಾಲಾಗಿದೆ. ಆದರೆ ಧರ್ಮಗುರು ದಲಾಯಿಲಾಮಾ ಅವರ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣದಲ್ಲಿ ರೋಹಿಂಗ್ಯಾಗಳನ್ನು ಸಿಲುಕಿಸುವ ವ್ಯವಸ್ಥಿತ
ಪ್ರಯತ್ನ ನಡೆದಿದೆ. ಆ ಮೂಲಕ ದಲಿತರಲ್ಲಿ ಹಾಗೂ ಮುಸ್ಲಿಂರಲ್ಲಿ ಒಡಕು ಮೂಡಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಪಾರ್ಲಿಮೆಂಟ್‌ ನ ಅಣತಿ ದೂರದಲ್ಲಿಯೇ ಪವಿತ್ರ ಭಾರತೀಯ ಸಂವಿಧಾನ ಸುಟ್ಟ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿಷಾದಿಸಿದರು.

Advertisement

ಸಿಂದಗಿಯ ಚಿಂತಕಿ ಅನಿತಾ ಡಿಸೋಜಾ ಮಾತನಾಡಿ, ಫ್ರಿಡ್ಜ್ನಲ್ಲಿ ಮಾಂಸವಿರಿಸಿದ್ದಾರೆ ಎಂದು ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಈ ರೀತಿ ಘಟನೆಗಳನ್ನು ಕೈಗೊಳ್ಳುತ್ತಿರುವ ಮನಸ್ಥಿತಿಗಳನ್ನು ಮನುವಾದಿ ಎನ್ನಬೇಕೋ, ಮನೋವ್ಯಾದಿಗಳು ಎನ್ನಬೇಕೋ ತಿಳಿಯದಾಗಿದೆ. ದೇಶದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಭಾರತೀಯ ಸಂವಿಧಾನ ದಹಿಸಿದ ಆರೋಪಿಗಳನ್ನು ಇಲ್ಲಿವರೆಗೂ ಬಂಧಿಸದಿರುವುದು ವಿಪರ್ಯಾಸ ಎಂದರು.

ಡಾ| ಸುಜಾತಾ ಚಲವಾದಿ ಉಪನ್ಯಾಸ ನೀಡಿದರು. ದಲಿತ ಮುಖಂಡರಾದ ರಮೇಶ ಆಸಂಗಿ, ವಿನಾಯಕ ಗುಣಸಾಗರ, ಅಶೋಕ ಚಲವಾದಿ, ಸಿದ್ದು ರಾಯಣ್ಣವರ, ವೈ.ಸಿ. ಮಯೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next