ನರಗುಂದ: ಜು. 16ಕ್ಕೆ ಮಹದಾಯಿ ಹೋರಾಟ ನಾಲ್ಕು ವರ್ಷಗಳು ಗತಿಸಿದರೂ ಇದುವರೆಗೆ ಮಹದಾಯಿ ಮಲಪ್ರಭೆಯ ಒಡಲು ಸೇರುತ್ತಿಲ್ಲ. ಇನ್ನಾದರೂ ನಾಡಿನ ಎಲ್ಲ ಸಂಸದರು ಸಂಸತ್‌ನಲ್ಲಿ ಮಹದಾಯಿಗೆ ಧ್ವನಿಯಾಗಿ ಈ ಭಾಗದ ರೈತರ ನೆರವಿಗೆ ಧಾವಿಸಲಿ ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ಫಕೀರಪ್ಪ ಜೋಗಣ್ಣವರ ಆಗ್ರಹಿಸಿದರು.
ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನಷ್ಠಾನಕ್ಕೆ ಒತ್ತಾಯಿಸಿ ಸುದೀರ್ಘ 1422ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾಧಿಕರಣ ನಮ್ಮ ಪಾಲಿನ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ 10 ತಿಂಗಳು ಗತಿಸಿದರೂ ಅದರ ಸದ್ಬಳಕೆಗೆ ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು.
ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ನ್ಯಾಯಾಧಿಕರಣ 6 ತಿಂಗಳು ಅವಕಾಶ ನೀಡಿ 10 ತಿಂಗಳಾದರೂ ಮಹದಾಯಿ ನೀರು ಬಳಸಿಕೊಳ್ಳುವ ಕಾಮಗಾರಿಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುತ್ತಿಲ್ಲ. ಮತ್ತೂಂದೆಡೆ ರಾಜ್ಯ ಸರ್ಕಾರ ಕೂಡ ಕೈಚೆಲ್ಲಿ ಕುಳಿತಿದೆ. ಇನ್ನಾದರೂ ನಾಡಿನ ಸಂಸದರು ಮುತುವರ್ಜಿ ವಹಿಸಲಿ ಎಂದು ಒತ್ತಾಯಿಸಿದರು.
ಹೋರಾಟ ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ ಮಾತನಾಡಿ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ನಾಲ್ಕು ವರ್ಷದಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಯಾವ ಸರ್ಕಾರಗಳಿಗೂ ಇದರ ಕಾಳಜಿಯಿಲ್ಲ. ಇನ್ನಾದರೂ ರೈತರ ಮೊರೆ ಆಲಿಸಿ ಈ ಭಾಗದಲ್ಲಿ ಹಸಿರು ಕ್ರಾಂತಿಗೆ ಸರ್ಕಾರಗಳು ಸಹಕಾರ ನೀಡಲಿ ಎಂದು ಆಗ್ರಹಿಸಿದರು.
ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಹನಮಂತ ಕೋರಿ, ವೆಂಕಪ್ಪ ಹುಜರತ್ತಿ, ವಿರುಪಾಕ್ಷಿ ಪಾರಣ್ಣವರ, ವಾಸು ಚವ್ಹಾಣ, ಲಕ್ಷ್ಮಣ ಮನೇನಕೊಪ್ಪ, ಮಲ್ಲಪ್ಪ ಐನಾಪುರ, ಕಲ್ಲಪ್ಪ ಮೊರಬದ, ಸುರೇಶ ಸಾತಣ್ಣವರ, ಚನ್ನಪ್ಪಗೌಡ ಪಾಟೀಲ, ದೇವಕ್ಕ ತಾಳಿ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾವಿ ಮುಂತಾದವರಿದ್ದರು.