Advertisement

ಕೆಡಿಪಿ ಸಭೆ ನಿರ್ಣಯ ಕಾರ್ಯಗತವಾಗಲಿ

04:13 PM May 19, 2020 | Suhan S |

ಕೊಪ್ಪಳ: ನಾನು ಸಚಿವನಾದ ಮೇಲೆ ಇದು ಮೊದಲನೇ ತ್ತೈಮಾಸಿಕ ಸಭೆಯಾಗಿದ್ದು, ಇದು ಔಪಚಾರಿಕ ಸಭೆ ಆಗದೆ, ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬರಬೇಕು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯತಿಯ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ 4ನೇ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದಿನ ಸಭೆಯಲ್ಲಿ ಇದುವರೆಗೂ ಏನೇನು ಕೊಟ್ಟಿದ್ದಿರಿ, ಯಾವ ಯಾವ ಕಾಮಗಾರಿ ಪೂರ್ಣಗೊಂಡಿವೆ ಎಂಬ ಮಾಹಿತಿ ನಿಖರವಾಗಿ ತಿಳಿಸಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು. ಯಲಬುರ್ಗಾ ತಾಲೂಕಿನ ಮಂಗಳೂರು ಹಾಸ್ಟೇಲ್‌ ಕಟ್ಟಡ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ಹಣದ ದುರುಪಯೋಗ, ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಈ ಕುರಿತು ಸಮಗ್ರ ತನಿಖೆಗೆ ಕ್ರಮ ಕೈಗೊಂಡು ವರದಿ ಸಲ್ಲಿಸಿ. ಕಳೆದ ಮೂರನೇ ಕೆಡಿಪಿ ಸಭೆಯಲ್ಲಿ ಮಂಗಳೂರು ಹಾಸ್ಟೇಲ್‌ನಲ್ಲಿನ ಅವ್ಯವಸ್ಥೆ ಕುರಿತು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರು ಪ್ರಸ್ತಾಪ ಮಾಡಿ, ಅವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದ್ದರೂ ಕೂಡ ಇದುವರೆಗೂ ಅಲ್ಲಿನ ಪರಿಸ್ಥಿತಿ ಬದಲಾಗಿಲ್ಲ. ಆದ್ದರಿಂದ ಈ ಕುರಿತು ಸಮಗ್ರ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮೂರು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿ. ಲ್ಯಾಬ್‌ನ್ನು ಶೀಘ್ರ ಸಿದ್ಧಗೊಳಿಸಿ. ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಘೋಷಣೆ ಮಾಡಿದ್ದರಿಂದ ಸಾಮಾನ್ಯ ರೋಗಿಗಳು ಜಿಲ್ಲಾಡಳಿತ ಗುರುತಿಸಿರುವ ಪರ್ಯಾಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಕೋವಿಡ್‌ ಆಸ್ಪತ್ರೆಯಲ್ಲಿ ಅರ್ಧ ಭಾಗವನ್ನು ಸಾಮಾನ್ಯ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಮೀಸಲಿಡಿ ಎಂದರು.

ಜಂಟಿ ಕೃಷಿ ನಿರ್ದೇಶಕಿ ಶಬಾನಾ ಶೇಖ್‌ ಮಾತನಾಡಿ, ಕೃಷಿ ಇಲಾಖೆಯಲ್ಲಿ ಬೆಳೆ ವಿಮೆಯ ಮಾಹಿತಿ ನೀಡಲು ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಅಧಿಕಾರಿ ನೇಮಕ ಮಾಡಲಾಗಿದೆ. ನರೇಗಾ ಕಾಮಗಾರಿ ಸುಗಮವಾಗಿ ನಡೆಸುವಂತೆ ಹಾಗೂ ಪ್ರತಿಯೊಬ್ಬ ಅಧಿಕಾರಿ ನಿಗದಿತ ಅವಧಿಯಲ್ಲಿ ಕೆಲಸ ನಿರ್ವಹಿಸುವಂತೆ ಗುರಿ ನಿಗದಿಪಡಿಸಲಾಗಿದೆ ಎಂದರು.

ಜಿಪಂ ಅಧ್ಯಕ್ಷ ಎಚ್‌. ವಿಶ್ವನಾಥ ರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಡಿಸಿ ಸುನೀಲ್‌ ಕುಮಾರ್‌, ಜಿಪಂ ಸಿಇಒ ಇತರರು ಇದ್ದರು.

Advertisement

ಪಡಿತರ ಅಕ್ರಮ ತಡೆಯಿರಿ :  ಬಿಪಿಎಲ್‌, ಎಪಿಎಲ್‌ ಕಾರ್ಡ್‌ದಾರರಿಗೆ ನೀಡುವ ಪಡಿತರ ಅಕ್ಕಿಯನ್ನು ಕೆಲವರು ಹೆಚ್ಚಿನ ದರಕ್ಕೆ ಮಿಲ್‌ಗ‌ಳಿಗೆ ಮಾರಾಟ ಮಾಡುತ್ತಿದ್ದಾರೆ. ಮಿಲ್‌ ಅವುಗಳನ್ನು ಪಾಲಿಶ್‌ ಮಾಡಿ ಕೆಜಿಗೆ 25 ರೂ.ಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದೊಂದು ಮಾಫಿಯಾ ಸೃಷ್ಟಿಯಾಗಿದೆ. ಆದ್ದರಿಂದ ಪಡಿತರ ವಿತರಣೆ ವೇಳೆ ಇಂತಹ ಅಕ್ರಮಗಳು ನಡೆಯದಂತೆ ಆಹಾರ ಇಲಾಖೆ ಎಚ್ಚರ ವಹಿಸಬೇಕು. ಇತ್ತೀಚೆಗೆ ಅಪಾರ ಪ್ರಮಾಣದ ಅಕ್ರಮ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಅಷ್ಟು ದೊಡ್ಡ ಪ್ರಮಾಣದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲು ಕಾರಣವಾದ ಸಂಗತಿಗಳ ಮೂಲವನ್ನು ಹುಡುಕಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next