ಆಫ್ರಿಕಾ ಖಂಡದ ದೇಶವಾಗಿರುವ ಸುಡಾನ್‌ನಲ್ಲಿ ಆಂತರಿಕ ಕ್ಷೋಭೆ ಹೆಚ್ಚಾಗಿದ್ದು, ಅಲ್ಲಿನ ಸೇನೆ ಮತ್ತು ಅರೆಮಿಲಿಟರಿ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸಸ್(ಆರ್‌ಎಸ್‌ಎಫ್) ನಡುವೆ ಸಮರವೇ ಏರ್ಪಟ್ಟಿದೆ. ಸುಡಾನ್‌ನ ರಾಜಧಾನಿ ಖಾರ್ಟಮ್ ಸೇರಿದಂತೆ ದೇಶದ ಇತರ ನಗರಗಳಲ್ಲಿಯೂ ಆಂತರಿಕ ಸಮರ ನಡೆಯುತ್ತಿದೆ. ದೊಡ್ಡ ಮಟ್ಟದ ಗುಂಡಿನ ಕಾಳಗವೇ ನಡೆಯುತ್ತಿದ್ದು, ಜನ ಸಾವಿನ ಭಯದಿಂದ ಬದುಕುತ್ತಿದ್ದಾರೆ.
ಅಷ್ಟೇ ಅಲ್ಲ, ಜನರಿಗೆ ಊಟ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳೂ ಸಿಗುತ್ತಿಲ್ಲ. ಉಪವಾಸದಲ್ಲೇ ದಿನ ಕಳೆಯುವ ಸ್ಥಿತಿ ತಲೆದೋರಿದ್ದು, ಮುಂದೆ ಹೇಗೆ ಎಂಬುದು ಗೊತ್ತಾಗದಂಥ ಪರಿಸ್ಥಿತಿ ಉದ್ಭವವಾಗಿದೆ. ಇದರ ನಡುವೆಯೇ, ಸುಡಾನ್‌ನಲ್ಲಿ ಭಾರತದ 4,000 ಮಂದಿ ವಾಸ ಮಾಡುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ. ಅಲ್ಲದೆ, ಕರ್ನಾಟಕ ಸಾಕಷ್ಟು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ದಾವಣಗೆರೆ, ಮೈಸೂರು, ಶಿವಮೊಗ್ಗ ಮೂಲದ ಹಕ್ಕಿಪಿಕ್ಕಿ ಜನಾಂಗದ 31 ಮಂದಿಯೂ ಸಿಲುಕಿಕೊಂಡಿದ್ದಾರೆ. ಇವರು ಈಗಾಗಲೇ ಕರ್ನಾಟಕದಲ್ಲಿನ ನೈಸರ್ಗಿಕ ವಿಪತ್ತು ನಿರ್ವಹಣ ಪಡೆಯನ್ನು ಸಂಪರ್ಕಿಸಿದ್ದು, ವಾಪಸ್ ಕರೆದೊಯ್ಯಲು ಬೇಕಾದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಎಲ್-ಫೆಷರ್ ಎಂಬ ನಗರದಲ್ಲಿ ಈ ಕನ್ನಡಿಗರು ವಾಸ ಮಾಡುತ್ತಿದ್ದು, ಎರಡು ದಿನಗಳ ಹಿಂದಷ್ಟೇ ಇಲ್ಲಿ ಗುಂಡಿನ ಸಮರ ನಡೆದ ಶಬ್ಧವೂ ಕಾಣಸಿದೆ. ಜತೆಗೆ, ಇವರಿರುವ ಕಟ್ಟಡದ ಮೇಲೂ ಬುಲೆಟ್ ತಗುಲಿರುವ ಗುರುತುಗಳು ಪತ್ತೆಯಾಗಿದ್ದು, ದಿನವೂ ಸಾವಿನ ಭಯದಲ್ಲೇ ಬದುಕುವಂತಾಗಿದೆ. ಸದ್ಯ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳುವ ಪ್ರಕಾರ, ಈಗ ನಮಗೆ ಅಲ್ಲಿ 31 ಮಂದಿ ಸಿಲುಕಿದ್ದಾರೆ ಎಂಬುದು ಗೊತ್ತಾಗಿದೆ. ಇನ್ನೊಂದು ಮೂಲಗಳ ಪ್ರಕಾರ ನೂರಾರು ಮಂದಿ ಇರಬಹುದು ಎಂದು ಶಂಕಿಸಲಾಗಿದೆ. ಇವರನ್ನು ವಾಪಸ್ ಕರೆತರಲು ಬೇಕಾದ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೆ, ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜತೆಗೂ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ.
ಜತೆಗೆ ಮಂಗಳವಾರ ವಿದೇಶಾಂಗ ಇಲಾಖೆಯೂ ಸುಡಾನ್‌ನಲ್ಲಿರುವ ಭಾರತೀಯರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ. ಆದಷ್ಟು ಮನೆಯೊಳಗೇ ಸುರಕ್ಷಿತವಾಗಿ ಇರಿ ಎಂದಿದೆ. ಖಂಡಿತವಾಗಿಯೂ ಅಲ್ಲಿ ಸಿಲುಕಿರುವ ಭಾರತೀಯರು ಈ ಮುನ್ನೆಚ್ಚರಿಕೆ ಪಾಲಿಸಬೇಕು. ಸುಖಾಸುಮ್ಮನೆ ಮನೆಯಿಂದ ಹೊರಗೆ ಬಂದು ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಬೇಡ. ಆಫ್ರಿಕಾದ ದೇಶಗಳಲ್ಲಿ ಒಮ್ಮೆ ಆಂತರಿಕ ಕಲಹ ಆರಂಭವಾದರೆ ಅದು ಬೇಗನೇ ಅಂತ್ಯವಾಗುವ ಲಕ್ಷಣಗಳು ಕಾಣಿಸುವುದಿಲ್ಲ. ಇಲ್ಲಿ ಹೊರಗಿನಿಂದ ದಾಳಿ ಮಾಡುವವರಿಗಿಂತ ಆಂತರಿಕವಾಗಿ ನಡೆಯುವ ಸಮರಗಳೇ ಹೆಚ್ಚು ಅಪಾಯಕಾರಿಯಾಗಿರುತ್ತವೆ. ಇಂಥ ಘಟನೆಗಳನ್ನು ನಾವು ಆಗಾಗ್ಗೆ ನೋಡುತ್ತಲೇ ಇರುತ್ತೇವೆ. ಹೀಗಾಗಿ, ವಿದೇಶಾಂಗ ಇಲಾಖೆಯು, ಆದಷ್ಟು ಬೇಗನೇ ಸುಡಾನ್‌ನಲ್ಲಿ ಸಂಬಂಧಪಟ್ಟವರೊಂದಿಗೆ ಮಾತನಾಡಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರುವ ಕೆಲಸ ಮಾಡಬೇಕು.
ಹಾಗೆಯೇ, ಇದು ರಾಜಕಾರಣ ಮಾಡುವ ವಿಚಾರವೂ ಅಲ್ಲ, ಸುಡಾನ್ ಒಂದು ಭಯಂಕರ ದೇಶವಾಗಿದ್ದು, ಸಂಧಾನಕ್ಕೆಂದು ತೆರಳಿದ್ದ ಅಮೆರಿಕದ ಪ್ರತಿನಿಧಿಯ ಬೆಂಬಲಿಗರ ಕಾರಿನ ಮೇಲೆಯೇ ದಾಳಿ ನಡೆಸಲಾಗಿದೆ. ಸದ್ಯಕ್ಕೆ ಈ ದೇಶ ತೀರಾ ಅಸುರಕ್ಷತೆ ಹೊಂದಿದೆ. ಅಲ್ಲದೆ, ಉಕ್ರೇನ್, ಅಫ್ಘಾನಿಸ್ಥಾನ ಸೇರಿದಂತೆ ಭಾರತವು ಗಲಭೆಗ್ರಸ್ತ ಅಥವಾ ಯುದ್ಧಗ್ರಸ್ತ ದೇಶಗಳಿಂದ ಭಾರತೀಯರನ್ನು ಯಶಸ್ವಿಯಾಗಿ ವಾಪಸ್ ಕರೆತಂದಿದೆ. ಜತೆಗೆ, ಅಲ್ಲಿನ ಸ್ಥಿತಿ ತಿಳಿದುಕೊಂಡೇ ಕಾಲಿಡಬೇಕಾಗುತ್ತದೆ. ಹೀಗಾಗಿ, ಅಲ್ಲೇ ಸುರಕ್ಷಿತವಾಗಿದ್ದು, ವಿದೇಶಾಂಗ ಇಲಾಖೆ ಮತ್ತು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬಂದಿಯ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇತ್ತ ರಾಜ್ಯ ಸರಕಾರವೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು, ಕೇಂದ್ರ ಸರಕಾರವೂ ಆದ್ಯತೆ ಮೇರೆಗೆ ಭಾರತೀಯರನ್ನು ಅಲ್ಲಿಂದ ವಾಪಸ್ ಕರೆದುಕೊಂಡು ಬರುವ ಕೆಲಸ ಮಾಡಬೇಕು. ಸದ್ಯಕ್ಕೆ ಅಲ್ಲಿ ಊಟ ಮತ್ತು ಕುಡಿಯುವ ನೀರಿಗೂ ಸಮಸ್ಯೆ ತಲೆದೋರಿದ್ದು, ಸ್ಥಳೀಯಾಡಳಿತದ ಮೂಲಕ ಅವರಿಗೆ ಮೂಲಸೌಕರ್ಯದ ವ್ಯವಸ್ಥೆಯನ್ನೂ ಮಾಡಬೇಕು.