Advertisement

ಪತ್ರಕರ್ತರು ಸಮಾಜದ ಜ್ವಲಂತ ಸಮಸ್ಯೆ ಬಿಂಬಿಸಲಿ

02:41 PM Jul 24, 2017 | |

ಶಿವಮೊಗ್ಗ: ಸಮಾಜಕ್ಕೆ ವಿಶೇಷವಾದುದನ್ನು ಹೇಳುವ ಅವಸರದಲ್ಲಿ ವಾಸ್ತವ ಮರೆಯದೆ, ಪತ್ರಕರ್ತರಾದವರು ಸಾಮಾಜಿಕ ಜ್ವಲಂತ ಸಮಸ್ಯೆ ಹೊರತರುವ ಕೆಲಸ ಮಾಡಬೇಕು ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಗರದ ಸರ್ಕಾರಿ ನೌಕರರ ಸಂಘ ಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೈಜ್ಞಾನಿಕ ಯುಗದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕ್ಷೇತ್ರವಿರಲಿ ಪ್ರಾಮಾಣಿಕತೆ,
ಶ್ರದ್ದೆಯಿಂದ ಕೆಲಸ ನಿರ್ವಹಿಸಬೇಕು. ಅದರಲ್ಲೂ ಸಮಾಜದ ಅಂಕುಡೊಂಕುಗಳನ್ನು ತಿಳಿಸುವ ಪತ್ರಕರ್ತರ ವೃತ್ತಿ ಬಹುಮುಖ್ಯವಾದದು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವತ್ತ ಪತ್ರಕರ್ತರು ಗಮನ ಹರಿಸಬೇಕು ಎಂದರು.

ಪ್ರಸ್ತುತ ಸಮಾಜ ಅನೇಕ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಹುತೇಕ ಕ್ಷೇತ್ರಗಳು ಪಾವಿತ್ರತೆಯನ್ನು ಕಳೆದುಕೊಂಡಿವೆ. ಒಳ್ಳೆಯ ತನಕ್ಕೆ ಬೆಲೆ ಇಲ್ಲದಂತಾಗಿದೆ. ನಾವೆಲ್ಲೇ ಹೋದರೂ ದುರಂತದೆಡೆಗೆ ಮಾತ್ರ ಸಾಗಬಾರದು ಎಂದು ಹೇಳಿದರು. ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವವರು ಕನಿಷ್ಟ ಜ್ಞಾನ ಹೊಂದಿರಬೇಕು. ಸಾಮಾನ್ಯ ತಿಳವಳಿಕೆ ಇಲ್ಲದಿದ್ದರೆ ತಮ್ಮ ವೃತ್ತಿ ನಿಭಾಯಿಸುವುದು ಕಷ್ಟವಾಗುತ್ತದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಒಳ್ಳೆಯ ಮನೋಭಾವನೆಯಿಂದ ಕೆಲಸ ಮಾಡುವಂತಹ ವ್ಯಕ್ತಿಗಳು ಕಡಿಮೆಯಾಗುತ್ತಿದ್ದಾರೆ. ಹಿಂಜರಿಕೆಯ ಮನಸ್ಸುಗಳು ಜಾಸ್ತಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ಸಾಧನೆ ಮಾಡಿದ ಪತ್ರಕರ್ತರನ್ನು ಸಂಘ ಗುರುತಿಸಿ ಗೌರವಿಸುತ್ತಿರುವ ಕಾರ್ಯ ಸ್ವಾಗತಾರ್ಹ ಎಂದರು.

ಶ್ರೀ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಪತ್ರಕರ್ತರು ಆತಂರಿಕ ಪರಿಶುದ್ದತೆ ಕಾಯ್ದುಕೊಂಡು ಕ್ರಿಯಾಶೀಲ ಹಾಗೂರಚನಾತ್ಮಕ ಕೆಲಸಗಳನ್ನು ನಿರ್ವಹಿಸಬೇಕು. ಆರೋಗ್ಯಕರ ಚರ್ಚೆಗಳನ್ನು ಮಾಡಲು ವೇದಿಕೆ ನಿರ್ಮಾಣ ಮಾಡಬೇಕು ಎಂದರು.
ಮಾಧ್ಯಮ ಕ್ಷೇತ್ರವನ್ನು ರಾಷ್ಟ್ರದಲ್ಲಿ ಸಂವಿಧಾನದ 4ನೇ ಅಂಗ ಎಂದು ಕರೆಯಲಾಗುತ್ತದೆ. ಸಮಾಜದ ಅಂಕುಡೊಂಕು ತಿದ್ದುವ ಮಾಧ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯ ದೊರಕಬೇಕು ಎಂಬುದು ನಿಜವಾದರೂ ಈ ಸ್ವಾತಂತ್ರ್ಯದ ಎಲ್ಲೆ ಮೀರಬಾರದು ಎಂದರು.

Advertisement

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಶಿವಮೊಗ್ಗದ ಹಿರಿಯ ಪತ್ರಕರ್ತರಾದ ಎಂ. ನಾಗೇಂದ್ರರಾವ್‌, ಎಚ್‌.ಎಸ್‌. ರಂಗಸ್ವಾಮಿ, ಮಿಂಚು ಶ್ರೀನಿವಾಸ್‌ ಹೆಸರಲ್ಲಿ ರಾಜ್ಯ ಪ್ರಶಸ್ತಿ ನೀಡಲು 3 ಲಕ್ಷ ರೂ. ಗಳನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡುವುದಾಗಿ ಅವರು ಭರವಸೆ ನೀಡಿದರು.

ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌ ಮಾತನಾಡಿ, ಪತ್ರಕರ್ತರ ಪ್ರಾಮಾಣಿಕ ಪ್ರಯತ್ನದಿಂದ ಎಷ್ಟೋ ವಿಚಾರ ಬೆಳಕಿಗೆ ಬರುತ್ತದೆ. ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದದರು. ಸರ್ಕಾರ ಪತ್ರಕರ್ತರಿಗೆ ಈಗಾಗಲೇ ಕೆಲವೊಂದು
ಸೌಲಭ್ಯಗಳನ್ನು ನೀಡಿದೆ. ಇನ್ನೊಂದಿಷ್ಟು ಬೇಡಿಕೆಗಳು ಬಾಕಿ ಇದೆ ಎಂಬುದು ಗಮನಕ್ಕೆ ಬಂದಿದೆ. ಅವನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಎನ್‌.ರವಿಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಮಾಧ್ಯಮ ಸಮನ್ವಯಕಾರ ಕೆ.ವಿ. ಪ್ರಭಾಕರ್‌, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್‌. ರಾಜು, ಉಪಾಧ್ಯಕ್ಷ ಶಿವಾನಂದ ತಗಡೂರು, ವಿಧಾನ ಪರಿಷತ್‌ ಸದಸ್ಯ ಆರ್‌. ಪ್ರಸನ್ನ ಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರುದ್ರೇಗೌಡ, ಜೆಡಿಎಸ್‌ ಮುಖಂಡ ಎಂ.ಶ್ರೀಕಾಂತ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next