ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಸಾವಿರಾರು ಭಾರತೀಯರು ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಈಗಾಗಲೇ ಭಾರತೀಯರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಿದೆ. ಗುರುವಾರವೇ ಉಕ್ರೇನ್‌ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ
ಕೆಲವು ಶಾಲೆಗಳಲ್ಲಿ ಮತ್ತು ಮೆಟ್ರೋ ಸ್ಟೇಶನ್‌ಗಳಲ್ಲಿ, ಬಾಂಬ್ ನಿರೋಧಕ ಬಂಕರ್‌ಗಳಲ್ಲಿ ಆಶ್ರಯ ನೀಡುವಲ್ಲಿ ಎಲ್ಲ ರೀತಿಯಸಹಕಾರವನ್ನು ನೀಡಿದೆ.
ಸದ್ಯಕ್ಕೆ ಉಕ್ರೇನ್ ಪರಿಸ್ಥಿತಿಯಂತೂ ಉತ್ತಮವಾಗಿಲ್ಲ. ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್‌ಗೆ ಪ್ರವೇಶ ಮಾಡಿವೆ. ಒಂದೊಮ್ಮೆ ಕೀವ್ ರಷ್ಯನ್ನರ ವಶವಾದರೆ, ಪರಿಸ್ಥಿತಿ ಇನ್ನೂ ಕೈಮೀರಿ ಹೋಗುತ್ತದೆ. ಹೀಗಾಗಿ ತ್ವರಿತಗತಿಯಲ್ಲಿ ಭಾರತೀಯರನ್ನು ವಾಪಸ್ ಕಳುಹಿಸಲು ಅಲ್ಲಿನ ರಾಯಭಾರ ಕಚೇರಿ ಶಕ್ತಿ ಮೀರಿ ಕೆಲಸ ಮಾಡಬೇಕಿದೆ.
ಈಗಾಗಲೇ ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್‌ಸ್ಕಿ ಸುರಕ್ಷಿತ ಬಂಕರ್‌ಗೆ ತೆರಳಿ ಆಶ್ರಯ ಪಡೆದು ಕೊಂಡಿರುವ ಸುದ್ದಿಗಳು ಹೊರಬಿದ್ದಿವೆ. ಇದರ ಜತೆಗೆ ರಷ್ಯಾ ಜತೆಗೆ ಸಂಧಾನಕ್ಕೂ ಸಿದ್ಧವಿರುವುದಾಗಿಯೂ ಹೇಳಿಕೊಂಡಿದ್ದಾರೆ. ಇದಕ್ಕೆ ರಷ್ಯಾ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತ್ರ ಸಂಧಾನ ಎಂದು ಉಕ್ರೇನ್‌ಗೆ ಹೇಳಿದೆ. ಹೀಗಾಗಿ ಸದ್ಯಕ್ಕೆ ಯುದ್ಧ ನಿಲ್ಲುವ ಸಾಧ್ಯತೆಗಳು ತೀರಾ ಕಡಿಮೆಯೇ ಇವೆ.
ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಕರ್ನಾಟಕ ಸುಮಾರು 340 ವಿದ್ಯಾರ್ಥಿಗಳು ಸೇರಿ, ಭಾರತದ 20 ಸಾವಿರ ಮಂದಿ ವಾಸಿಸುತ್ತಿದ್ದಾರೆ. ಯುದ್ಧ ಆರಂಭವಾಗುವ ಮುನ್ನವೇ ಕೇಂದ್ರ ಸರಕಾರ ಮತ್ತು ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿಯ ಸಲಹೆ ಮೇರೆಗೆ ಭಾರತಕ್ಕೆ ವಾಪಸ್ ಬಂದಿದ್ದಾರೆ. ಆದರೆ, ಇನ್ನೂ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಮತ್ತು ವಿದ್ಯಾರ್ಥಿಗಳು ಅಲ್ಲಿಯೇ ಉಳಿದಿದ್ದಾರೆ. ಇವರನ್ನು ಕರೆತರಲು ಸರ್ವಪ್ರಯತ್ನವನ್ನೂ ಮಾಡಬೇಕಾಗಿದೆ.
ಈಗ ಬರುತ್ತಿರುವ ಸುದ್ದಿಗಳ ಪ್ರಕಾರ, ನಾಗರಿಕರು ಮತ್ತು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ಉಕ್ರೇನ್ ಗಡಿಗೆ ಬಂದು, ನೆರೆಯ ದೇಶಗಳನ್ನು ಸೇರುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಯಭಾರ ಕಚೇರಿಯೂ, ಗಡಿಯ ಹತ್ತಿರದಲ್ಲಿರುವ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಿಗೆ ಗಡಿ ಸನಿಹಕ್ಕೆ ಬರುವಂತೆ ಸೂಚಿಸಿದೆ. ಇವರು ಬಂದ ತತ್‌ಕ್ಷಣವೇ ಭಾರತಕ್ಕೆ ಕರೆತರಲು ನಿರ್ಧರಿಸಿದೆ.
ಇದರ ಜತೆಗೆ ಉಕ್ರೇನ್ ನೆರಹೊರೆಯಲ್ಲಿರುವ ರೊಮೇನಿಯಾ, ಹಂಗೇರಿ, ಪೋಲೆಂಡ್ ದೇಶಗಳ ಜತೆಯೂ ಕೇಂದ್ರ ಸರಕಾರ ಮಾತುಕತೆ ನಡೆಸಿದ್ದು, ಅಲ್ಲಿಗೆ ಬರುವ ಭಾರತೀಯರನ್ನು ಇಲ್ಲಿಗೆ ಕರೆತರಲು ಶ್ರಮ ವಹಿಸಿದೆ. ಒಟ್ಟಾರೆ ಯಾಗಿ ಯಾವುದಾದರೂ ಮಾರ್ಗದ ಮೂಲಕ ಕರೆತರುವುದಾಗಿ ದೃಢವಾಗಿ ಹೇಳಿದೆ.
ಈ ಎಲ್ಲ ಬೆಳವಣಿಗೆಗಳು ಆಗುತ್ತಿರುವ ಮಧ್ಯೆ, ಭಾರತದಲ್ಲಿರುವ ವಿದ್ಯಾರ್ಥಿಗಳ ಹೆತ್ತವರು ಯಾವುದೇ ಕಾರಣಕ್ಕೂ ಆಘಾತಕ್ಕೆ ಒಳಗಾಗುವುದು ಬೇಡ. ಕೇಂದ್ರ ಸರಕಾರ ಮತ್ತು ಉಕ್ರೇನ್‌ನಲ್ಲಿರುವ
ರಾಯಭಾರ ಕಚೇರಿ ಭಾರತೀಯರ ಸುರಕ್ಷತೆಗೆ ಎಲ್ಲ ಕ್ರಮ ತೆಗೆದುಕೊಂಡಿದೆ. ಸದ್ಯದಲ್ಲೇ ಎಲ್ಲರನ್ನೂ ವಾಪಸ್ ಕರೆತರುವ ಬಗ್ಗೆಯೂ ಭರವಸೆ ನೀಡಿದೆ.