Advertisement

ವನ್ಯಜೀವಿ ಸಂರಕ್ಷಣ ಮಸೂದೆ ಅನುಷ್ಠಾನ ಸಮರ್ಪಕವಾಗಲಿ

12:33 AM Dec 10, 2022 | Team Udayavani |

ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳ ರಕ್ಷಣೆ ಹಾಗೂ ಅಕ್ರಮವಾಗಿ ವನ್ಯಜೀವಿಗಳ ಸಾಗಾಟಕ್ಕೆ ನಿರ್ಬಂಧ ಹೇರುವ ಸಲುವಾಗಿ ಕೇಂದ್ರ ಸರಕಾರ ರೂಪಿಸಿರುವ ವನ್ಯಜೀವಿ ಸಂರಕ್ಷಣೆ ತಿದ್ದುಪಡಿ (2022) ಮಸೂ ದೆ ಗೆ ರಾಜ್ಯಸಭೆ ಅಂಗೀಕಾರ ನೀಡಿದೆ. ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ಈ ಮಸೂದೆ ಇನ್ನು ಕಾಯ್ದೆಯಾಗಿ ರೂಪುಗೊಳ್ಳುವದಷ್ಟೇ ಬಾಕಿ ಇದೆ.

Advertisement

ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ 1972ರ ಮಸೂದೆಗೆ ಕೆಲವು ತಿದ್ದುಪಡಿ ತರುವುದು ಅನಿವಾರ್ಯವಾಗಿತ್ತು. ಅಂತಾರಾಷ್ಟ್ರೀಯ ಒಪ್ಪಂದದ ಅಡಿಯಲ್ಲಿ ಈ ತಿದ್ದುಪಡಿ ಅಗತ್ಯವಾಗಿತ್ತು ಕೂಡ. ಈ ಮಸೂದೆಯಲ್ಲಿ, 1972ರ ಕಾಯ್ದೆಯಲ್ಲಿ ಉಲ್ಲೇಖೀಸಲಾಗಿದ್ದ ಅಳಿವಿ ನಂಚಿನಲ್ಲಿರುವ ವನ್ಯಜೀವಿಗಳ ಸಂಖ್ಯೆಗಿಂತ ಈ ತಿದ್ದುಪಡಿ ಮಸೂದೆಯಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿರುವುದರ ಜತೆಗೆ ಅವುಗಳ ರಕ್ಷಣೆಗೆ ಕಠಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾವವಿದೆ.

ವನ್ಯಜೀವಿಗಳ ಸಂರಕ್ಷಣ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಈವರೆಗೆ ಕನಿಷ್ಠ ದಂಡವನ್ನು 10,000 ರೂ.ಗಳಿಂದ 25,000ರೂ.ವರೆಗೆ ಹಾಗೂ ಗರಿಷ್ಠ ದಂಡವನ್ನು 25,000 ರೂಗಳಿಂದ 1 ಲಕ್ಷ ದವರೆಗೂ ಹೆಚ್ಚಿಸಲಾಗಿದೆ. ಇಂಥ ಕ್ರಮಗಳು ಸಮರ್ಪಕವಾಗಿ ಜಾರಿಯಾದಾಗ ಸಂಸತ್ತಿಗೆ ಗೌರವ ಸಿಗುತ್ತದೆ.

ಈ ಮಸೂದೆಯಲ್ಲಿ ಮುಖ್ಯವಾಗಿ ಚರ್ಚೆಗೆ ಒಳಪಟ್ಟಿರುವುದು ಪಳಗಿಸಿರುವ ಆನೆಗಳ ಸಾಗಾಟ ಮತ್ತು ಸಾಕಾಣಿಕೆ ನಿಯಂತ್ರಣದ ಬಗ್ಗೆ. ಆನೆಗಳನ್ನು ಧಾರ್ಮಿಕ ಹಾಗೂ ಇತರ ಬಳಕೆಗಾಗಿ ಸಾಗಣೆ ಮಾಡಲು ಅವಕಾಶ ಇದ್ದು, ಕಡ್ಡಾಯವಾಗಿ ಮಾಲಕತ್ವದ ಪ್ರಮಾಣಪತ್ರ ಬೇಕು ಎಂದು ಮಸೂದೆಯಲ್ಲಿ ಉಲ್ಲೇಖೀಸಲಾಗಿದೆ. ಈ ಮೂಲಕ ಆನೆಗಳ ಅಕ್ರಮ ಸಾಗಾಟ ಮತ್ತು ಮಾರಾಟವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲು ಸರಕಾರ‌ ಮುಂದಾಗಿದೆ.

ಒಂದು ಅಂಕಿಅಂಶದ ಪ್ರಕಾರ ದೇಶದಲ್ಲಿ 2,675 ಸೆರೆ ಹಿಡಿದ ಆನೆಗಳಿದ್ದು, 1251 ಆನೆಗಳಿಗೆ ಮಾತ್ರ ಮಾಲಕತ್ವ ಪ್ರಮಾಣ ಪತ್ರ ಇದೆ. ಇನ್ನು ಮುಂದೆ ಎಲ್ಲ ಸೆರೆಹಿಡಿದ ಆನೆಗಳಿಗೂ ಮಾಲಕತ್ವದ ಪ್ರಮಾಣಪತ್ರವನ್ನು ಕಡ್ಡಾಯ ಗೊಳಿಸುವುದು ಉತ್ತಮವಾದ ಕ್ರಮವೇ. ಆದರೆ ಆನೆಗಳ ಸಾಗಾಟದ ಸಂದರ್ಭದಲ್ಲಿ “ಇತರ ಬಳಕೆಗೆ’ ಎಂಬ ಅಸ್ಪಷ್ಟವಾದ ಪದಗುತ್ಛವನ್ನು ಸೇರಿಸಿರುವುದು ಮುಂದಿನ ದಿನಗಳಲ್ಲಿ ಸಮಸ್ಯೆ ತಂದೊಡ್ಡಬಹುದು. ಇದರಿಂದ ಆನೆಗಳನ್ನು ಯಾವುದೇ ಉದ್ದೇಶಕ್ಕೆ ಬಳಸಲು ಪರೋಕ್ಷವಾಗಿ ಅವಕಾಶ ಮಾಡಿ ಕೊಟ್ಟಂತಾಗಬಹುದು.

Advertisement

ಕೇಂದ್ರದ ಮಟ್ಟದಲ್ಲಿ ವನ್ಯಜೀವಿಗಳ ಮಂಡಳಿಯೊಂದನ್ನು ಸ್ಥಾಪಿಸಲು ಮಸೂದೆಯಲ್ಲಿ ಉಲ್ಲೇಖವಿದ್ದು, ಅರಣ್ಯ ಸಚಿವರ ಅಧ್ಯ ಕ್ಷತೆಯಲ್ಲಿ 10 ಸದಸ್ಯರು ಇರುತ್ತಾರೆ. ಇದರೊಂದಿಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿರುವ ವನ್ಯಜೀವಿ ಮಂಡಳಿ ನಿಷ್ಕ್ರಿಯಗೊಳ್ಳಲಿದೆ. ಹೀಗಾಗಿ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ ಇನ್ನೊಂದು ತಂತ್ರ ಇದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜತೆಗೆ ಈಗ ತುರ್ತಾಗಿ ಬೇಕಿರುವುದು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕಾಣಿಸುತ್ತಿರುವ‌ ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಇತಿಶ್ರೀ ಹಾಡಲು ಸೂಕ್ತ ಕಾಯಿದೆಯ ಅಗತ್ಯ ಇದೆ. ಈ ಮಸೂದೆಯಲ್ಲಿ ಈ ಬಗ್ಗೆ ಪ್ರಸ್ತಾವವೇ ಇಲ್ಲದಿರುವುದು ವಿಷಾದನೀಯ. ಈ ಬಗ್ಗೆ ತಜ್ಞರ ಸಮಿತಿ ರಚಿಸಿ ದರೆ ಸೂಕ್ತ.

Advertisement

Udayavani is now on Telegram. Click here to join our channel and stay updated with the latest news.

Next