ರಾಜ್ಯಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿರುವ ಆನ್‌ಲೈನ್ ಜೂಜು ಮತ್ತು ಸಾಲದ ಆ್ಯಪ್‌ಗ್ಳ ಸುಳಿಗೆ ಸಿಲುಕಿ ಜನರು ವಂಚನೆ ಗೊಳಗಾಗುತ್ತಿದ್ದಾರೆ. ಒಂದಿಷ್ಟು ಮಂದಿ ಸಾಲದ ಆ್ಯಪ್‌ಗ್ಳ ಮೊರೆಹೋಗಿ ಸಾಲ ಪಡೆದು ಆ ಬಳಿಕ ಅವುಗಳ ಸೂತ್ರದಾರರು ನೀಡುತ್ತಿರುವ ಕಿರುಕುಳ, ಒಡ್ಡುತ್ತಿರುವ ಬೆದರಿಕೆಗೆ ಅಂಜಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರೆ, ಇನ್ನು ಈ ಆ್ಯಪ್‌ಗ್ಳ ವಂಚನೆಗೆ ಸಿಲುಕಿ ತಮ್ಮ ಬದುಕನ್ನೇ ಬರಡಾಗಿಸಿಕೊಂಡ ಕುಟುಂಬಗಳು ಸಾವಿರಾರು. ಆನ್‌ಲೈನ್ ವಂಚನೆಯ ಘಟನೆಗಳು ಪ್ರತಿ ದಿನ ನಡೆಯುತ್ತಲೇ ಇದ್ದರೂ ಇವುಗಳು ಒಡ್ಡುವ ಆಮಿಷಗಳಿಗೆ ಜನರು ನಿರಂತರವಾಗಿ ಬಲಿ ಬೀಳುತ್ತಲೇ ಇದ್ದಾರೆ.
ಇದರಿಂದಾಗಿ ಸಹಸ್ರಾರು ಜನರ, ಮತ್ತವರ ಕುಟುಂಬಗಳ ಬದುಕು ಅಸಹನೀಯ ಸ್ಥಿತಿಗೆ ಬಂದು ತಲುಪಿದೆ. ಈ ಸಾಲದ ಆ್ಯಪ್‌ಗ್ಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದರೂ ಇವು ಅಡ್ಡ ದಾರಿಯಲ್ಲಿ ಜನರನ್ನು ತಲುಪಿ ಅವರನ್ನು ಮರುಳು ಮಾಡುವಲ್ಲಿ ಸಫಲ ವಾಗುತ್ತಿವೆ. ರಾಜ್ಯದಲ್ಲೂ ಸಾಲದ ಆ್ಯಪ್ ಮತ್ತು ಆನ್‌ಲೈನ್ ಜೂಜು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದೆ. ಈ ಆ್ಯಪ್‌ಗ್ಳನ್ನು ನಿಷೇಧಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು ಈ ನಿಟ್ಟಿನಲ್ಲಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವಂತಾಗಲಿ.
ರಾಜ್ಯ ಸರಕಾರದ ಈ ಚಿಂತನೆ ಸ್ವಾಗತಾರ್ಹವಾಗಿದ್ದು ಸಾಲದ ಆ್ಯಪ್‌ಗ್ಳು ಮತ್ತು ಆನ್‌ಲೈನ್ ಜೂಜು ಆ್ಯಪ್‌ಗ್ಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಿದ್ದೇ ಆದರೆ ಸಹಸ್ರಾರು ಕುಟುಂಬಗಳು ನಿಟ್ಟುಸಿರು ಬಿಡಲಿವೆ. ಈ ವಂಚನಾ ಜಾಲಕ್ಕೆ ಬಹುತೇಕ ಯುವ ಸಮುದಾಯವೇ ಸಿಲುಕುತ್ತಿದ್ದು ಈ ಕುಟುಂಬಗಳ ಭವಿಷ್ಯವೇ ಕಮರಿ ಹೋಗುತ್ತಿದೆ. ಸಾಲ ಮತ್ತು ಆನ್‌ಲೈನ್ ಜೂಜುಗಳ ಆ್ಯಪ್‌ಗ್ಳು ಯುವಕರನ್ನೇ ಗುರಿಯಾಗಿಸಿ ಕಾರ್ಯ ನಿರ್ವ ಹಿಸುತ್ತಿರುವುದು ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಅಷ್ಟು ಮಾತ್ರ ವಲ್ಲದೆ ಈ ಗೀಳಿಗೆ ವಿದ್ಯಾವಂತ ಯುವಜನಾಂಗ ಬಲಿಯಾಗುತ್ತಿರುವುದು ಕೂಡ ಹೊಸ ವಿಚಾರವೇನಲ್ಲ. ಮಾನ, ಮರ್ಯಾದೆಗೆ ಅಂಜಿ ವಂಚನೆಗೊಳಗಾಗಿರುವ ವಿಷಯವನ್ನು ಬಹಿರಂಗಗೊಳಿಸದೇ ಅದೆಷ್ಟೋ ಕುಟುಂಬಗಳು ತಮ್ಮೊಳಗೇ ಬಚ್ಚಿಟ್ಟುಕೊಂಡು ನಲುಗಿಹೋಗುತ್ತಿವೆ.
ಇಂತಹ ಆ್ಯಪ್‌ಗ್ಳ ವಿರುದ್ಧ ಸೈಬರ್ ಪೊಲೀಸರು ಹದ್ದುಗಣ್ಣಿರಿಸಿದ್ದರೂ ದಂಧೆಕೋರರು ಮಾತ್ರ ಸದ್ದಿಲ್ಲದೆ ಜನರನ್ನು ತಲುಪಿ ಅವರನ್ನು ತಮ್ಮ ಬಲೆ ಯೊಳಗೆ ಕೆಡವಿಕೊಳ್ಳುತ್ತಿವೆ. ಈ ಆ್ಯಪ್‌ಗ್ಳಿಗೆ ಕಡಿವಾಣ ಹಾಕುವುದು ಅಷ್ಟೇನೂ ಸುಲಭಸಾಧ್ಯವಲ್ಲವಾದರೂ ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೇಂದ್ರ ಸರಕಾರ ಕಳೆದೆ ರಡು ವರ್ಷಗಳಿಂದೀಚೆಗೆ ಹಂತಹಂತವಾಗಿ ಇಂತಹ ಆ್ಯಪ್‌ಗ್ಳನ್ನು ನಿಷೇಧಿ ಸುತ್ತಲೇ ಬಂದಿದೆ. ಆದರೆ ಈ ಆ್ಯಪ್‌ಗ್ಳು ಹೊಸ ಅವತಾರಗಳಲ್ಲಿ ದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ತನಿಖಾ ಸಂಸ್ಥೆಗಳು ಬಯಲಿಗೆಳೆದಿವೆ. ಜನರು ಕೂಡ ಎಚ್ಚೆತ್ತುಕೊಂಡು ಇಂತಹ ಆ್ಯಪ್‌ಗ್ಳಿಂದ ದೂರ ಇರುವುದೇ ಉತ್ತಮ.
ಬಹುತೇಕ ಸಾಲದ ಆ್ಯಪ್ ಮತ್ತು ಆನ್‌ಲೈನ್ ಜೂಜಿನ ಆ್ಯಪ್‌ಗ್ಳು ವಿದೇಶಿ ಮೂಲದವುಗಳಾಗಿರುವುದರಿಂದ ಇವುಗಳಿಗೆ ಸಂಪೂರ್ಣ ನಿರ್ಬಂಧ ಹೇರುವುದು ರಾಜ್ಯ ಸರಕಾರದ ಮಟ್ಟಿಗೆ ಬಲುದೊಡ್ಡ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ತಂತ್ರಜ್ಞರ ನೆರವು ಪಡೆದು ರಾಜ್ಯ ಸರಕಾರ ಈ ದಂಧೆಗೆ ಕಡಿವಾಣ ಹಾಕಬೇಕು.