Advertisement

ಮನೆ ಆವರಣ ಹಸುರಾಗಿರಲಿ

03:32 AM May 04, 2019 | mahesh |

ಮನೆ ಆಸುಪಾಸಿನಲ್ಲಿ ಉದ್ಯಾನ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಚಿಕ್ಕದಾದರೂ ಮನೆಯಲ್ಲಿ ಒಂದಷ್ಟು ಹಸುರು ಪರಿಸರ ಇರಬೇಕು. ಇದು ತಂಪು ಮತ್ತು ಹಿತವಾದ ವಾತಾವರಣ ಸೃಷ್ಟಿಸುತ್ತದೆ. ಮಾತ್ರವಲ್ಲ ಹಸುರು ನೋಡುವುದು ಕಣ್ಣಿಗೂ ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು. ಗಿಡ ಮನೆಯ ಅಂದವನ್ನು ಹೆಚ್ಚಿಸುವ ಜತೆಗೆ ಆರೋಗ್ಯ ವೃದ್ಧಿಗೂ ಸಹಾಯ ಮಾಡುತ್ತದೆ ಎನ್ನುತ್ತದೆ ಸಂಶೋಧನೆ. ಒಂದು ವೇಳೆ ನಿಮ್ಮ ಮನೆ ಪಕ್ಕ ಉದ್ಯಾನ ನಿರ್ಮಿಸಲು ಜಾಗ ಇಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. ಈ ಸರಳ ಮಾರ್ಗ ಅನುಸರಿಸುವ ಮೂಲಕ ಮನೆಯ ಒಳಗೇ ಹಸುರು ಪರಿಸರ ನಿರ್ಮಿಸಬಹುದು.

Advertisement

ಸ್ಥಳ ನಿಗಧಿ
ನಿಮ್ಮ ಕನಸಿನ ಹಸುರು ವಾತಾವರಣ ನಿರ್ಮಾಣದ ಮೊದಲ ಹೆಜ್ಜೆ ಸ್ಥಳ ನಿಗಧಿ. ಮನೆಯ ಯಾವ ಮೂಲೆಯಲ್ಲಿ ಗಿಡಗಳನ್ನು ಇರಿಸಬಹುದು ಎನ್ನುವುದನ್ನು ಪರಿಶೀಲಿಸಿ ಸ್ಥಳ ಖಚಿತಪಡಿಸಿಕೊಳ್ಳಿ. ಅನಂತರ ಗಿಡ ಹಾಗೂ ನೆಡಲಿರುವ ಪಾಟ್ ಖರೀದಿಸಿ.

ಲಂಬ ರೀತಿಯ ಉದ್ಯಾನದಿಂದ ಸ್ಥಳ ಕೊರತೆಗೆ ಪರಿಹಾರ
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಈ ವಿಧಾನ ಉತ್ತಮ. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ. ನೀವು ಉದ್ದೇಶಿಸಿದ ಗೋಡೆಗಳಲ್ಲಿ ಗಿಡ ನೆಟ್ಟ ಪಾಟ್ ಅಳವಡಿಸಿದರಾಯಿತು. ಭಾರವಿಲ್ಲದ ಪಾಟ್‌ಗಳನ್ನು ಹಗ್ಗದ ಸಹಾಯದಿಂದ ತೂಗು ಹಾಕಬಹುದು. ಅಲ್ಲದೆ ನಿಮ್ಮ ಬಳಿ ಪುಸ್ತಕ ಇಡುವ ಹೆಚ್ಚುವರಿ ಕವಾಟು ಇದ್ದರೆ ಅದರಲ್ಲಿಯೂ ಪಾಟ್‌ಗಳನ್ನು ಜೋಡಿಸಬಹುದು.

ಸೂಕ್ತ ಗಿಡಗಳ ಆಯ್ಕೆ ಮುಖ್ಯ
ನೀವು ಗೋಡೆಯ ಶೆಲ್ಫ್ನಲ್ಲಿ ಪಾಟ್ ಇಡುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ತುಂಬಾ ಎತ್ತರಕ್ಕೆ ಬೆಳೆಯುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬಾರದು. ಬಣ್ಣ ಬಣ್ಣದ ಹೂ ಬಿಡುವ ಕಳ್ಳಿ ಜಾತಿಗೆ ಸೇರಿದ ಸಸ್ಯಗಳು ಉತ್ತಮ. ಒಂದು ವೇಳೆ ನೀವು ಗಿಡಗಳನ್ನು ಟೇಬಲ್ ಮೇಲೆ ಇಡುತ್ತೀರಿ ಎಂದಾದರೆ ಲೋಳೆಸರ(ಅಲೋವೆರಾ), ಮನಿ ಪ್ಲಾಂಟ್, ಬೋನ್ಸಾಯ್‌ ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳ ನಿರ್ವಹಣೆ ಸುಲಭ ಮತ್ತು ಕಡಿಮೆ ಖರ್ಚು ಸಾಕಾಗುತ್ತದೆ. ತುಂಬಾ ಗಿಡ ಬೇಡ ಎಂದಾದರೆ ಕೋಣೆಯ ಮೂಲೆಯಲ್ಲಿ ಒಂದು ದೊಡ್ಡ ಪಾಟ್ ಇರಿಸಬಹುದು.

ಔಷಧೀಯ ಸಸ್ಯ ಬೆಳೆಯಿರಿ
ಅಡುಗೆ ಕೋಣೆಯ ಮೂಲೆ ಅಥವಾ ಬಾಲ್ಕನಿಯಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಔಷಧೀಯ ಸಸ್ಯ ಹಾಗೂ ತರಕಾರಿಗಳನ್ನು ಬೆಳೆಯಲು ಸಾಧ್ಯ. ಆದರೆ ಗಿಡ ಆಯ್ಕೆಯ ಮುನ್ನ ಅವು ಕಡಿಮೆ ಸೂರ್ಯನ ಬೆಳಕಿನಲ್ಲಿ ಬೆಳೆಯುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ತುಳಸಿ, ಕೊತ್ತಂಬರಿ ಸೊಪ್ಪು, ಪುದೀನಾ, ಸಾಂಬ್ರಾಣಿ ಮುಂತಾದ ಮೂಲಿಕೆಗಳನ್ನು ಸುಲಭವಾಗಿ ನಿಭಾಯಿಸಬಹುದು. ಮಾತ್ರವಲ್ಲ ತರಕಾರಿಗಳಾದ ಟೊಮೇಟೋ, ಬೆಂಡೆ, ಬದನೆ, ಮೆಣಸು ಮುಂತಾದವುಗಳನ್ನೂ ಪಾಟ್‌ನಲ್ಲಿ ಬೆಳೆಯಬಹುದು. ಇವುಗಳೆಲ್ಲ ಸುಲಭವಾಗಿ, ಶೀಘ್ರವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ದೊಡ್ಡದಾಗುತ್ತವೆ ಎನ್ನುವುದೇ ಬಹುದೊಡ್ಡ ಅನುಕೂಲ.

Advertisement

••ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next