Advertisement
ಈ ಮಕ್ಕಳಲ್ಲಿ ಬಹುತೇಕ, ಮೂಲ ಸೌಲಭ್ಯಗಳೇ ಇಲ್ಲದ ತೀರಾ ಸಾಮಾನ್ಯ ಸಮುದಾಯದ ಕುಟುಂಬದ ಕುಡಿಗಳು ಇರುತ್ತವೆ. ನಮ್ಮ ಮಕ್ಕಳು ನಾಲ್ಕು ಅಕ್ಷರ ಕಲಿತು, ಉದ್ಧಾರ ಆಗಲಿ ಎನ್ನುವ ಸರಳ ಹಂಬಲ ಇವರ ಪೋಷಕರದ್ದು. ಅನೇಕ ಸರಕಾರಿ ಶಾಲೆಗಳೂ ಈಗ ಬಹಳಷ್ಟು ಸುಧಾರಿಸಿವೆ. ಖಾಸಗಿ ಶಾಲೆಗಳಿಗೆ ಪ್ರತಿಸ್ಪರ್ಧಿಯಾಗಿ ನಿಂತಿವೆ. ಇಲ್ಲೂ ಸಾಕಷ್ಟು ಮೂಲಭೂತ ಸೌಕರ್ಯಗಳಿವೆ. ನುರಿತ ಪ್ರತಿಭಾವಂತ ಶಿಕ್ಷಕರಿದ್ದಾರೆ. ಸೇವಾ ಪರತೆಯಿಂದ ದುಡಿಯುವ ಮನಸ್ಸುಗಳಿವೆ. ಇತ್ತೀಚೆಗೆ ಇಲಾಖೆಯು ಸಹ ಮಕ್ಕಳ ಸ್ನೇಹಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಆದರೂ, ಸರಕಾರಿ ಶಾಲೆಗಳ ದಾಖಲಾತಿ, ಫಲಿತಾಂಶ ಮಾತ್ರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದಕ್ಕೆ ಪೋಷಕರ ಮನಸ್ಥಿತಿ, ಸರ್ಕಾರದ ಧೊರಣೆ, ಹಮ್ಮು ಬಿಮ್ಮು, ಪ್ರತಿಷ್ಠೆ ಎಲ್ಲವೂ ಪ್ರಭಾವ ಬೀರಿವೆ. ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಪೋಷಕರು ಮೀನಾಮೇಷ ಎಣಿಸುತ್ತಿದ್ದಾರೆ. ಸರಕಾರಿ ಶಾಲೆಗಳೆಂದರೆ ಬರೀ “ಇಲ್ಲದವರ’ಮಕ್ಕಳಿಗಷ್ಟೇ ಸೀಮಿತ ಎನ್ನುವ ಮನಸ್ಥಿತಿ ಮೂಡಿಬಿಟ್ಟಿದೆ.
ಹೇಗೆ ಸಾಧ್ಯ?
Related Articles
Advertisement
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನೀಡುವ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೆಟ್ ನೋಡಿದರೆ ಆಶ್ಚರ್ಯ ಹಾಗೂ ಕುತೂಹಲ ಹುಟ್ಟುತ್ತದೆ. ಈ ಸರ್ಟಿಫಿಕೆಟ್‌ನಲ್ಲಿ ಎ ಮತ್ತು ಬಿ ವಿಭಾಗಗಳಿವೆ. ಸಾಂಪ್ರದಾಯಿಕವಾಗಿ ಬೋರ್ಡ್ ಎ ವಿಭಾಗದ ಆರು ವಿಷಯಗಳಿಗೆ ಮಾತ್ರ ಪಬ್ಲಿಕ್ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಪಾಸ್ ಆದರೆ ಮಾತ್ರ ಮುಂದಿನ ಅಧ್ಯಯನಕ್ಕೆ ಅವಕಾಶವಿದೆ. ಈ ಆರು ವಿಷಯ ಪಾಸು ಮಾಡಲು, ಹೆಚ್ಚು ಹೆಚ್ಚು ಅಂಕಗಳಿಸಲು, ರ್‍ಯಾಂಕ್ ಪಡೆಯಲು ಇಡೀ ವ್ಯವಸ್ಥೆ ಮಕ್ಕಳ ಬೆನ್ನ ಹಿಂದೆ ಬಿದ್ದಿದೆ.
ಎಸ್ಸೆಸ್ಸೆಲ್ಸಿ ಪ್ರಗತಿ ಪತ್ರದ ಬಿ ವಿಭಾಗದಲ್ಲಿನ ನಾಲ್ಕು ಪ್ರಧಾನ ವಿಷಯಗಳನ್ನು ವಿದ್ಯಾರ್ಥಿಗಳು ವರ್ಷ ಪೂರ್ತಿ ಕಲಿಯುತ್ತಾರೆ. (ದೈಹಿಕ ಮತ್ತು ಆರೋಗ್ಯ ಶಿಕ್ಷಣ, ಮನೋಭಾವ ಮತ್ತು ಮೌಲ್ಯಗಳು, ಕಲಾಶಿಕ್ಷಣ, ಕಾರ್ಯಾನುಭವ). ಆದರೆ, ಈ ಕಲಿಕೆ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಈ ವಿಷಯಗಳತ್ತ ಇಲಾಖೆಯ ಯಾವ ಅಧಿಕಾರಿಗಳೂ ತಲೆ ಕೆಡಿಸಿಕೊಳ್ಳುವುದಿಲ್ಲ. ಶಿಕ್ಷಕರು ಬಹುತೇಕ ಮಕ್ಕಳ ಮುಖ ನೋಡಿ ಗ್ರೇಡ್ ನೀಡುತ್ತಾರೆ. ವಿಭಿನ್ನ ಆಯಾಮಗಳಲ್ಲಿ ಮಕ್ಕಳ ದೈಹಿಕ, ಮಾನಸಿಕ ಬೌದ್ಧಿಕ ಜ್ಞಾನ ಪ್ರಾಯೋಗಿಕ ಕಲಿಕೆಯನ್ನು ಅಳೆದು ತೂಗಿ ಗ್ರೇಡ್ ನೀಡಬೇಕು. ಈಗಿರುವ ಆರು ವಿಷಯಗಳ ಅಂಕ ಗಳಿಕೆಯ ಒತ್ತಡದ ಕಲಿಕೆಯಲ್ಲಿ ಈ ವಿಷಯಗಳಿಗೆ ಯಾರೂ ಪ್ರಾಧಾನ್ಯತೆ ನೀಡುವುದಿಲ್ಲ. ಶಾಲಾ ಹಂತದಲ್ಲಿಯೇ ಮಕ್ಕಳ ಮೌಲ್ಯ ಮಾಪನವಾಗುವುದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯೂ ಇಲ್ಲ. ಬಿ ವಿಭಾಗದಲ್ಲಿ ದೈಹಿಕ ಶಿಕ್ಷಣ ವಿಷಯವೂ ಇದೆ. ಬಹುತೇಕ ಶಾಲೆಗಳಲ್ಲಿ ಈ ವಿಷಯದ ಶಿಕ್ಷಕರ ಹು¨ªೆ ಸೃಜಿಸಲಾಗಿರುತ್ತದೆ. ಈ ವಿಷಯವನ್ನು ಕೂಡ ಕಡ್ಡಾಯವಾಗಿ ಬೋರ್ಡ್, ಪಬ್ಲಿಕ್ ಪರೀಕ್ಷೆ ನಡೆಸುವ ಮೂಲಕ ಶಿಕ್ಷಕರು ಹಾಗೂ ಮಕ್ಕಳಲ್ಲಿ ಜವಾಬ್ದಾರಿ ಹೆಚ್ಚಿಸಬೇಕಿದೆ.
ಹೊಸ ಬಾಟಲ್‌ನಲ್ಲಿ ಹಳೆ ಮದ್ಯ ಹಾಕಿದಂತೆ ಮೇಲ್ ಹಂತದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಬದಲಾದರೆ ಸಾಲದು, ಶಾಲೆಯ ಬೇರು ಹಂತದಲ್ಲಿ ಸಮಗ್ರವಾಗಿ ವ್ಯವಸ್ಥೆ ಬದಲಾಗಬೇಕಿದೆ. ಕಲಿಸುವ ವಿಷಯಗಳು ಎಷ್ಟು ಇವೆ ಎನ್ನುವುದಕ್ಕಿಂತ ಮಗು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ವಿಷಯಗಳು ಎಷ್ಟು ಪೂರಕ-ಪ್ರೇರಕ ಎನ್ನುವುದು ಬಹು ಮುಖ್ಯ. ವಿಷಯದಲ್ಲಿ ಪರಿಣತರಲ್ಲದ, ಆಸಕ್ತಿ ಇಲ್ಲದ ಶಿಕ್ಷಕರಿಗೆ “ಬಿ’ ವಿಭಾಗದ ಪರ್ಯಾಯ ವಿಷಯ ಬೋಧಿಸಲು ಹೇಳಿದರೆ, ಆ ಶಿಕ್ಷಕರು ಏನು ತಾನೆ ಮಕ್ಕಳಿಗೆ ಕಲಿಸಲು ಸಾಧ್ಯವಿದೆ? ಕಂಪ್ಯೂಟರ್ ಜ್ಞಾನವೇ ಇಲ್ಲದ ಶಿಕ್ಷಕ ಐ.ಸಿ.ಟಿ ವಿಷಯ ಅನಿವಾರ್ಯವಾಗಿ ಮಕ್ಕಳಿಗೆ ಬೋಧಿಸಬೇಕು ಎಂದು ಒತ್ತಡ ಹಾಕಿದರೆ, ಶಿಕ್ಷಕ ಸಮರ್ಥವಾಗಿ ಬೋಧಿಸಲು ಹೇಗೆ ಸಾಧ್ಯ?
ಮಕ್ಕಳು ಆಧುನಿಕ ವ್ಯವಸ್ಥೆಯಲ್ಲಿ ಏನು ಹೇಗೆ ಎಷ್ಟು ಯಾವಾಗ ಎಲ್ಲಿ ಕಲಿಯಬೇಕು ಎಂದು ಎನ್‌ಸಿಎಫ್ 2015 ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-19 ಶಿಫಾರಸ್ಸು ಮಾಡಿದೆ. ಇದು ಕೇವಲ ಆಶಯವಾಗಿ ಪುಸ್ತಕದಲ್ಲಿ ಮಾತ್ರ ಉಳಿಯಿತೇ ವಿನಃ ಪ್ರಾಯೋಗಿಕ ರೂಪದಲ್ಲಿ ಅನುಷ್ಠಾನಕ್ಕೆ ಬರಲೇ ಇಲ್ಲ. ದೇಶದ ಭವಿಷ್ಯದ ಚುಕ್ಕಾಣಿ ಹಿಡಿಯುವ ಮಕ್ಕಳಿಗೆ ಏನು ಕಲಿಸಬೇಕು ಎಂದು ಈವರೆಗೂ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ನಡೆಯದಿರುವುದು ವಿಪರ್ಯಾಸದ ಸಂಗತಿ.
ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ, ಸ್ಪರ್ಧಾತ್ಮಕ ಜಗತ್ತಿನ ಜಾಗತಿಕ ಸವಾಲುಗಳಿಗೆ ಮೈ ಒಡ್ಡಿ ನಿಲ್ಲುವ ತಾಕತ್ತು ಮಕ್ಕಳ ಮನದಲ್ಲಿ ತುಂಬಬೇಕಿದೆ. ಬದುಕುವ ಕಲೆ, ಕೌಶಲ್ಯಯುಕ್ತ ಪ್ರಾಯೋಗಿಕ ಶಿಕ್ಷಣಕ್ಕೆ ವ್ಯವಸ್ಥೆ ತೆರೆದುಕೊಳ್ಳಬೇಕಿದೆ.
– ಪ್ರಹ್ಲಾದ್ ಪತ್ತಾರ