ಮೈಸೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕಾಶದಲ್ಲಿ ಹಾರಾಡುವುದನ್ನು ಬಿಟ್ಟು ಭೂಮಿ ಗಿಳಿದು ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ವರ್ಷಗಳ ನಂತರ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಬೆಳೆ ನಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ ಹಣವನ್ನು ತಾಂತ್ರಿಕ ಕಾರಣದ ನೆಪವೊಡ್ಡಿ ರೈತರ ಖಾತೆಗೆ ಜಮೆ ಮಾಡದೆ ಉಳಿಸಿಕೊಂಡಿದೆ ರಾಜ್ಯ ಸರ್ಕಾರ ಎಂದು ದೂರಿದರು.
ಜಾನುವಾರುಗಳು ಮೇವು-ನೀರಿಲ್ಲದೆ ಪರಿತಪಿಸುತ್ತಿದ್ದರೂ ಮೇ ಮೊದಲ ವಾರ ವಾದರೂ ಗೋಶಾಲೆಗಳನ್ನು ತೆರೆದಿಲ್ಲ. ಮುಖ್ಯ ಮಂತ್ರಿ ಯಾದವರು ಜನ-ಜಾನುವಾರುಗಳ ಈ ಸಂಕಷ್ಟ ಅರಿಯಲು ಭೂಮಿಗಿಳಿಯದೆ, ಆಕಾಶ ದಲ್ಲೇ ಹಾರಾಡುತ್ತಿದ್ದಾರೆ. ಸಿದ್ದರಾಮಯ್ಯ ಹೆಲಿ ಕಾಫ್ಟರ್ ಬಿಟ್ಟು ಹಳ್ಳಿಗಳಲ್ಲಿ ಓಡಾಡಲಿ ಎಂದರು.
ಬೆಳೆನಷ್ಟ ಪರಿಹಾರ ಸಂಬಂಧ ಯುಪಿ ಸರ್ಕಾರ ಎನ್‌ಡಿಆರ್ ಎಫ್ ಮಾರ್ಗಸೂಚಿ ಅನುಸಾರ ಕೊಟ್ಟ ಹಣವೆಷ್ಟು? ರಾಜ್ಯಸರ್ಕಾರ ಎಷ್ಟು ಹಣ ಖರ್ಚು ಮಾಡಿತ್ತು? ನರೇಂದ್ರ ಮೋದಿ ಅವರ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ರಾಜ್ಯದ ಜನರಲ್ಲಿ ಹೊಸ ಭರವಸೆ ಮೂಡಿತ್ತು. ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸುತ್ತಿರುವ ಸಿದ್ದರಾಮಯ್ಯ ರಾಜ್ಯಕ್ಕಿರಲಿ, ಮೈಸೂರು-ಚಾಮರಾಜ ನಗರ ಭಾಗಕ್ಕೆ ಅವರು ಕೊಟ್ಟಿದ್ದೇನು ಎಂದು ಪ್ರಶ್ನೆ ಮಾಡಬೇಕಾಗಿ ಬಂದಿದೆ. ಈ ಸರ್ಕಾರದ ಬಗ್ಗೆ ಜನ ಭರವಸೆ ಕಳೆದುಕೊಂಡಿದ್ದಾರೆ ಎಂದರು.
ಬಗೆಹರಿಯುತ್ತೆ: ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳು ಸಹಜವಾಗಿ ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ. ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸುತ್ತಾರೆ. ಬಾಲ್ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ ಎಂದು ರಾಷ್ಟ್ರೀಯ ನಾಯಕರತ್ತ ಬೊಟ್ಟು ಮಾಡಿದರು.