Advertisement

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

11:19 AM Mar 22, 2020 | mahesh |

“ಅರೇ ಇದೇನಿದು?’ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ. ಇರುವ ಜಾಗದಲ್ಲೇ ಗಿಡ ನೆಟ್ಟರೆ ಮನೆಯ ಅಂದವೂ ಹೆಚ್ಚುತ್ತದೆ. ಆರೋಗ್ಯವೂ ಉತ್ತಮವಾಗುತ್ತದೆ. ಜತೆಗೆ ಮೈಕ್ರೋ ಗ್ರೀನ್‌ ನಿಮಗೆ ಉತ್ತಮ ಆಯ್ಕೆಯಾಗಿರಲಿದೆ. ಹಾಗಾದರೆ ಇನ್ಯಾಕೆ ತಡ? ನಿಮ್ಮಿಂದಲೇ ಹಸಿರು ಕ್ರಾಂತಿ ಆರಂಭವಾಗಲಿ…

Advertisement

ದಿನ ಕಳೆದಂತೆ ಹೆಚ್ಚುವ ಅನಾರೋಗ್ಯ, ಕಾಡುವ ಸೋಂಕುಗಳಿಗೆ ನಾವೇ ಬೆಳೆಯುವ ತರಕಾರಿ ಪರಿಹಾರವಾಗಬಲ್ಲದು. ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ ಸೋಂಕಿನಿಂದ ಬೆಳೆಯುವ ತರಕಾರಿ, ಹಣ್ಣುಗಳು ಕ್ರಮೇಣ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಬಲ್ಲವು. ಜತೆಗೆ ಒಂದಷ್ಟು ಕಾಯಿಲೆಗಳಿಗೆ ಕಾರಣವಾಗಲ್ಲದು. ಆದ್ದರಿಂದ ನೀವು ಮನೆಯಲ್ಲೇ ಒಂದಷ್ಟು ತರಕಾರಿ, ಸೊಪ್ಪು ಬೆಳೆದು ತಾಜಾ ಉತ್ಪನ್ನ ಪಡೆಯಬಹುದು.ಅಂಗಳ, ಸಾಕಷ್ಟು ಸ್ಥಳವಕಾಶ ಇಲ್ಲ ಎಂದಾದರೆ ಕಿಟಕಿ ಬದಿ, ಬಾಲ್ಕನಿಗಳಲ್ಲಿ ಇವುಗಳನ್ನು ಜೋಡಿಸಬಹುದು.

ಹೊಸ ಟ್ರೆಂಡ್‌
ಸಾವಯವ ಮತ್ತು ಮನೆಯಲ್ಲೇ ಬೆಳೆಯುವ ತರಕಾರಿ ನಗರಗಳಲ್ಲಿ ಜನಪ್ರಿಯವಾಗುತ್ತಿದೆ. ಇದು ಉತ್ತಮ ರುಚಿ ಹೊಂದಿರುತ್ತದೆ ಅಲ್ಲದೆ ಆರೋಗ್ಯಕ್ಕೂ ಉತ್ತಮ. ಆದರೆ ಸಾವಯವ ತರಕಾರಿ ಬೇಕಾದಷ್ಟು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ ಎನ್ನುವುದು ಬಹು ದೊಡ್ಡ ಸಮಸ್ಯೆ. ಒಂದು ವೇಳೆ ದೊರೆತರೂ ದುಬಾರಿಯಾಗಿರುತ್ತದೆ. ಆದ್ದರಿಂದ ಮನೆಯಲ್ಲೇ ಬೆಳೆಯುವುದು ಜಾಣತನ. ಇದಕ್ಕೆ ಜಾಸ್ತಿ ಖರ್ಚಾಗುವುದಿಲ್ಲ. ಹೆಚ್ಚಿನ ಸಲಕರಣೆಗಳೂ ಬೇಕಾಗಿಲ್ಲ ಎನ್ನುತ್ತಾರೆ ಉದ್ಯಮದ ಮೂಲಕ ಸಮುದಾಯ ಕೃಷಿಯನ್ನು ಉತ್ತೇಜಿಸುವ ಅನಾಮಿಕಾ ಬಿಸ್ತ್.

ಸಮೃದ್ಧ ಪೋಷಕಾಂಶ
ಸಾವಯವ ಮಾದರಿಯಲ್ಲಿ ನಾವು ಬೆಳೆಯುವ ತರಕಾರಿ, ಸೊಪ್ಪುಗಳಲ್ಲಿ ಹೇರಳ ಪೋಷಕಾಂಶಗಳಿರುತ್ತವೆ.

ಏನೆಲ್ಲ ಬೆಳೆಯಬಹುದು?
ಮೈಕ್ರೋ ಗ್ರೀನ್‌ನಲ್ಲಿ ಬೆಳೆಯಬಹುದಾದ ಗಿಡಗಳು: ತುಳಸಿ, ಸೂರ್ಯ ಕಾಂತಿ, ಕೆಂಪು ಸಾಸಿವೆ, ಜೋಳ, ಬ್ರೋಕಲಿ, ಪುದಿನಾ, ಕೊತ್ತಂಬರಿ ಸೊಪ್ಪು, ಹರಿವೆ, ವಿವಿಧ ಬೇಳೆಗಳ ಗಿಡಗಳನ್ನು ಮುಂತಾದವುಗಳನ್ನು ಬೆಳೆಯಬಹುದು.

Advertisement

ಬೆಳೆಯುವ ವಿಧಾನ?
ಚೆನ್ನಾಗಿ ಬೆಳಕು ಬೀಳುವ, ಗಾಳಿಯಾಡುವ, ನೀರು ಕಟ್ಟಿ ನಿಲ್ಲದ ಸ್ಥಳಗಳಲ್ಲಿ ಮೈಕ್ರೋ ಗ್ರೀನ್‌ ಬೆಳೆಯಬಹುದು. ತೂತು ಇರುವ ಪ್ಲಾಸ್ಟಿಕ್‌ ತೊಟ್ಟಿ ತೆಗೆದುಕೊಂಡು ಮಣ್ಣು ಮತ್ತು ಕಾಂಪೋಸ್ಟ್‌ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಹರಡಬೇಕು. ಅನಂತರ 8 ಗಂಟೆ ನೆನೆಸಿದ ಬಿತ್ತನೆ ಬೀಜಗಳನ್ನು ಬಿತ್ತಬೇಕು. ತೊಟ್ಟಿಯಲ್ಲಿ ಗಿಡಗಳು ಚೆನ್ನಾಗಿ ಬೆಳೆಯುವಷ್ಟು ಮಾತ್ರ ಬೀಜಗಳನ್ನು ಬಿತ್ತಬೇಕು. ಅನಂತರ ತೆಳುವಾಗಿ ಮಣ್ಣು ಹರಡಬೇಕು. ಬಳಿಕ ನಿಯಮಿತವಾಗಿ ನೀರು ಚಿಮುಕಿಸಿದರಾಯಿತು. ಬೇರು ಬಿಟ್ಟು ಉಳಿದ ಭಾಗಗಳನ್ನು ಸಲಾಡ್‌ನ‌ಲ್ಲಿ ಬಳಸಬಹುದು. ಇದನ್ನು ಹಸಿಯಾಗಿಯೂ ಸೇವಿಸಬಹದಾಗಿದೆ.

ನೀವೂ ಮಾಡಿ ನೋಡಿ
ನೀವು ಗಿಡಗಳನ್ನು ಪಾಟ್‌ಗಳಲ್ಲಿ ಬೆಳೆಸುವುದಾದರೆ ಪ್ಲಾಸ್ಟಿಕ್‌ ಮತ್ತು ಸಿಮೆಂಟ್‌ ಕುಂಡಗಳನ್ನು ಬಿಟ್ಟು ಬಿಡಿ. ಮಣ್ಣಿನ ಪಾಟ್‌ಗಳಲ್ಲೇ ಬೆಳೆಯಿರಿ. ಇನ್ನೊಂದು ಮುಖ್ಯ ವಿಚಾರ ಎಂದರೆ ಪ್ಲಾಸ್ಟಿಕ್‌ ಬಾಟಲ್‌ ಮನೆಯಲ್ಲಿದ್ದರೆ ಅವುಗಳನ್ನು ಬಳಸಿ ಮನೆಯ ಅಂದವನ್ನು ಹೆಚ್ಚಿಸಬಹುದು. ಇದು ಸರಳ ಮಾರ್ಗ. ಬಾಟಲ್‌ನ್ನು ಅಡ್ಡಕ್ಕೆ ಕತ್ತರಿಸಿ. ಅನಂತರ ಅದರಲ್ಲಿ ಮಣ್ಣನ್ನು ತುಂಬಿ ಹಗ್ಗದ ಸಹಾಯದಿಂದ ನೇತಾಡಿಸಿ. ಚಿಕ್ಕ ಆಲಂಕಾರಿಕ ಗಿಡಗಳನ್ನು ಮನೆಗೆ ಮೆರಗು ನೀಡುತ್ತವೆ.

ಮೈಕ್ರೋ ಗ್ರೀನ್‌
ಇತ್ತೀಚೆಗೆ ಮುನ್ನೆಲೆಗೆ ಬರುತ್ತಿರುವ ವಿಧಾನವೇ ಮೈಕ್ರೋ ಗ್ರೀನ್‌. ಮೊಳಕೆ ಬಂದ 10-15 ದಿನಗಳ ಗಿಡಗಳನ್ನು ಮೈಕ್ರೋ ಗ್ರೀನ್‌ ಎಂದು ಕರೆಯಲಾಗುತ್ತದೆ. ಇದು ಮ್ಯಾಗ್ನೇಶಿಯಂ, ಮ್ಯಾಂಗನೀಸ್‌, ಕಬ್ಬಿಣ, ಮಿಟಮಿನ್‌ ಸಿ, ಎ, ಕೆ, ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಸಲಾಡ್‌ಗಳಲ್ಲಿ ಬಳಸಬಹುದು. ಸಾಮಾನ್ಯ ತರಕಾರಿಗಳಿಗೆ ಹೋಲಿಸಿದರೆ ಮೈಕ್ರೋ ಗ್ರೀನ್‌ಗಳಲ್ಲಿ ಸುಮಾರು ನಾಲ್ಕು ಪಟ್ಟು ಅಧಿಕ ಜೀವಸತ್ವಗಳಿರುತ್ತವೆ.

ಶುದ್ಧ ಗಾಳಿ
ಇಂದು ಬಹುತೇಕ ತರಕಾರಿ, ಹಣ್ಣುಗಳನ್ನು ರಾಸಾಯನಿಕ ಗೊಬ್ಬರ, ಕೀಟ ನಾಶಕ ಬಳಸಿ ಬೆಳೆಸಲಾಗುತ್ತದೆ. ಇವುಗಳ ಮಿತಿ ಮೀರಿದ ಬಳಕೆ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಮನೆ ಅಂಗಳದಲ್ಲೇ ಸಣ್ಣ ಪುಟ್ಟ ತರಕಾರಿ, ಸೊಪ್ಪು ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಉಸಿರಾಟಕ್ಕೆ ಶುದ್ಧ ಗಾಳಿಯೂ ಸಿಗುತ್ತದೆ. ಅಂಗಳ ಇಲ್ಲ ಎಂದಾದರೆ ಬಾಲ್ಕನಿಯಲ್ಲೂ ಬೆಳೆಸಬಹುದು.
– ವೈಭೋಗ್‌ ಕಶ್ಯಪ್‌ ಆಹಾರ ತಜ್ಞ

 ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next