Advertisement

Supreme Court: ಸುಪ್ರೀಂ ಎಚ್ಚರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ

12:01 AM Sep 27, 2023 | Team Udayavani |

ದೇಶದ ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕದ ಕುರಿತಂತೆ ಕೇಂದ್ರ ಸರಕಾರ ಮತ್ತು ಕೊಲಿಜಿಯಂ ನಡುವಣ ಸಂಘರ್ಷ ಮತ್ತೆ ಉಲ್ಬಣಗೊಳ್ಳುವ ಲಕ್ಷಣಗಳು ಕಾಣಿಸಿವೆ. ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂ ರ್ತಿ ಗಳ ಹುದ್ದೆಗಳಿಗೆ ನೇಮಕ, ವರ್ಗಾವಣೆ ಕುರಿತಂತೆ ಕೊಲಿಜಿಯಂ ಮಾಡಿರುವ ಶಿಫಾರಸುಗಳನ್ನು ಸರಕಾರ ಬಾಕಿ ಉಳಿಸಿಕೊಂಡಿರುವ ಬಗೆಗೆ ಸುಪ್ರೀಂ ಕೋರ್ಟ್‌ ಪೀಠ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂ ರ್ತಿ ಗಳ ನೇಮಕಕ್ಕೆ ಸಂಬಂಧಿಸಿದಂತೆ ಹಾಲಿ ಜಾರಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸಿ ಪ್ರತ್ಯೇಕ ವ್ಯವಸ್ಥೆಯ ಜಾರಿಗಾಗಿ ಕೇಂದ್ರ ಸರಕಾರ ಕಳೆದ ಕೆಲವು ವರ್ಷಗಳಿಂದೀಚೆಗೆ ಪ್ರಯತ್ನಿಸುತ್ತಲೇ ಬಂದಿದ್ದು ಇದು ಕೇಂದ್ರ ಮತ್ತು ಸುಪ್ರೀಂ ನಡುವೆ ತೀವ್ರ ಸಂಘರ್ಷವನ್ನು ಸೃಷ್ಟಿಸಿದೆ. ಕೇಂದ್ರ ಸರಕಾರದ ಆಕ್ಷೇಪದ ಹೊರತಾಗಿಯೂ ಸುಪ್ರೀಂ ಕೋರ್ಟ್‌ ಕೊಲಿಜಿಯಂ ವ್ಯವಸ್ಥೆಯಡಿಯಲ್ಲಿಯೇ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ನಡೆಯಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿದ್ದು ಈ ವಿಷಯದಲ್ಲಿ ತನ್ನ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ. ನೇಮಕದಲ್ಲಾ ಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಸರಕಾರದ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದೆ.

ಕೊಲಿಜಿಯಂ ಮಾಡಿರುವ ಶಿಫಾರಸುಗಳ ಅಂಕಿಅಂಶಗಳ ಸಹಿತವಾಗಿ ಅಟಾರ್ನಿ ಜನರಲ್‌ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ ಇಂಥ ಗಂಭೀರ ವಿಷಯದಲ್ಲೂ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಸತತ ಆದೇಶ, ಸೂಚನೆಗಳ ಹೊರತಾಗಿಯೂ ಕೇಂದ್ರ ಸರಕಾರ ನ್ಯಾಯಮೂ ರ್ತಿ ಗಳ ನೇಮಕಕ್ಕೆ ಹೆಚ್ಚಿನ ಆಸಕ್ತಿ ತೋರ ದಿರುವ ಬಗೆಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಕಳೆದ ವರ್ಷದ ನವೆಂಬರ್‌ನಿಂದ ಕೊಲಿಜಿಯಂನ ಶಿಫಾರಸುಗಳು ಸರಕಾರದಲ್ಲಿ ಬಾಕಿ ಉಳಿದಿವೆ ಎಂದು ಬೆಟ್ಟು ಮಾಡಿತು. ಅಟಾರ್ನಿ ಜನರಲ್‌ ಅವರ ಮನವಿಯಂತೆ ಈ ಬಗ್ಗೆ ಸರಕಾರದ ನಿಲುವನ್ನು ತಿಳಿಸಲು ಒಂದು ವಾರದ ಕಾಲಾವಕಾಶ ನೀಡಿದ ನ್ಯಾಯಪೀಠ ಈ ಅವಧಿಯಲ್ಲಿ ನ್ಯಾಯ ಮೂ ರ್ತಿ ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಗತಿ ಕಂಡುಬಾರದಿದ್ದಲ್ಲಿ ಕಠಿನ ನಿರ್ಧಾರಕ್ಕೆ ಬರಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಕೊಲಿಜಿಯಂ ವಿಷಯವಾಗಿ ಪದೇಪದೆ ಸರಕಾರ ಮತ್ತು ಸುಪ್ರೀಂ ಕೋರ್ಟ್‌ ನಡುವೆ ಸಂಘರ್ಷ ನಡೆಯುತ್ತಲೇ ಬಂದಿದೆ. ಹೀಗೆ ನಿರಂತ ರವಾಗಿ ಶಾಸಕಾಂಗ ಮತ್ತು ನ್ಯಾಯಾಂಗ ನಡುವೆ ತಿಕ್ಕಾಟ ನಡೆ ಯುತ್ತಿದ್ದರೆ ಇಡೀ ವ್ಯವಸ್ಥೆಯ ಬಗೆಗೆ ಜನರಲ್ಲಿ ಸಹಜವಾಗಿಯೇ ಅನು ಮಾನ, ಗೊಂದಲಗಳು ಸೃಷ್ಟಿಯಾಗುತ್ತವೆ. ಇನ್ನಾದರೂ ಕೇಂದ್ರ ಸರಕಾರ ಮತ್ತು ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳು ಒಂದೆಡೆ ಕುಳಿತು ದೇಶದ ನ್ಯಾಯಾಂಗ ವ್ಯವಸ್ಥೆಯ ಹಿತದೃಷ್ಟಿಯಿಂದ ಈ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಇತ್ತಂಡಗಳೂ ಈ ವಿಷಯದಲ್ಲಿ ತಮ್ಮತಮ್ಮ ಹಠಮಾರಿ ಧೋರಣೆಯನ್ನು ಕೈಬಿಟ್ಟು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವದ ಎರಡು ಆಧಾರ ಸ್ತಂಭಗಳ ಘನತೆ, ಗೌರವವನ್ನು ಎತ್ತಿ ಹಿಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next