Advertisement

ಕೆರೆಗಳ ಒತ್ತುವರಿ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ: ಕೆ.ಬಿ.ಕೋಳಿವಾಡ

10:12 AM Mar 17, 2020 | Sriram |

ಬೆಂಗಳೂರು: ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 1547 ಕೆರೆಗಳ ಒತ್ತುವರಿ ಕುರಿತು ವರದಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಸರ್ಕಾರ, ಮತ್ತೆ ವರದಿಗಾಗಿ ಮತ್ತೂಂದು ಕಮಿಟಿ ರಚಿಸಿದೆ ಎಂದು ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಆರೋಪಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 1985 ರಿಂದ ಈವರೆಗೆ ಕೆರೆ ಒತ್ತುವರಿ ಅಧ್ಯಯನಕ್ಕಾಗಿ ಅನೇಕ ಸದನ ಸಮಿತಿಗಳನ್ನು ರಚಿಸಿದೆ. ಆದರೆ, ಆ ಸಮಿತಿಯವರು ನೀಡಿರುವ ವರದಿಗಳನ್ನು ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಸ್ವೀಕರಿಸಿ ಕ್ರಮ ಕೈಗೊಂಡಿಲ್ಲ. ಈಗ ಪುನಃ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 3 ತಹಶೀಲ್ದಾರ್‌ ಒಳಗೊಂಡ ಸಮಿತಿಯನ್ನು ರಚಿಸಿ ಒತ್ತುವರಿ ಆಗಿರುವ ಕೆರೆಗಳ ಸರ್ವೇ ಮಾಡಿ ವರದಿಯನ್ನು ನೀಡುವಂತೆ ಆದೇಶ ಮಾಡಿದೆ. ಇದು ಸರಿಯಾದ ನಿರ್ಧಾರವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆ ಒತ್ತುವರಿಯಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಶಾಮೀಲಾಗಿ ಬಹುತೇಕ ಕೆರೆಗಳನ್ನು ನಾಶ ಮಾಡಿದ್ದಾರೆ. ಬಿಡಿಎ ವತಿಯಿಂದ 23 ಕೆರೆಗಳನ್ನು ಸಂಪೂರ್ಣ ನಾಶ ಮಾಡಲಾಗಿದೆ. ಜತೆಗೆ 14 ಕೆರೆಗಳಲ್ಲಿ ನಿವೇಶನ ಹಾಗೂ ಬಹುಮಹಡಿ ಕಟ್ಟಡಗಳನ್ನು ಕಟ್ಟಿ ಮಾರಾಟ ಮಾಡಿದ್ದಾರೆ ಎಂದು ದೂರಿದರು.

ಕೆರೆ ಒತ್ತುವರಿಯಲ್ಲಿ ಶಾಮಿಲಾಗಿರುವ ಅಧಿಕಾರಿಗಳು, ಬಿಲ್ಡರ್ಸ್‌ಗಳನ್ನು ಜೈಲಿಗೆ ಕಳುಹಿಸಬೇಕು. ಜತೆಗೆ ಅವರ ಆಸ್ತಿಯನ್ನು ಮಟ್ಟುಗೋಲು ಹಾಕಿಕೊಂಡು ಅದನ್ನು ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ಕೆರೆಗಳ ಅಭಿವೃದ್ಧಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next