ತಾಳಿಕೋಟೆ: ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣ ದೊರೆತರೆ ಅಪೇಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಕಲಬುರಗಿ ಭಾರತೀಯ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಉಮ್ರಾನ್ ಸೌದಾಗರ ಹೇಳಿದರು.
ಭಾರತೀಯ ವಿದ್ಯಾರ್ಥಿ ಒಕ್ಕೂಟ ಸಂಗಮೇಶ್ವರ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಅತ್ಯುತ್ತಮ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ದೇಶದಲ್ಲಿ ಅನಕ್ಷರಸ್ಥರು ಬಹಳೆ ಜನರಿದ್ದಾರೆ ಎಂದು ವಿದೇಶಿಗರು ಅರ್ಥೈಸಿಕೊಂಡಿದ್ದಾರೆ. 134 ಕೋಟಿ ಜನಸಂಖ್ಯೆ ಹೊಂದಿದ್ದರೂ ಅದರಲ್ಲಿ ಶೇ. 60ರಷ್ಟು ಯುವಜನತೆಗೆ ವ್ಯವಸ್ಥಿತ ಶಿಕ್ಷಣ ದೊರೆಯಬೇಕಾಗಿದೆ ಎಂದರು.
ಸಂಗಮೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್. ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಾಲಕ, ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಇಂದಿನ ದಿನಮಾನದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಬುನಾದಿ ಕುಸಿಯುತ್ತಿದ್ದರಿಂದ ಮುಂದಿನ ಜೀವನದಲ್ಲಿ ತೊಂದರೆ ಅನುಭವಿಸುವ ಸ್ಥಿತಿ ಮುಂದುವರಿದಿದೆ ಎಂದರು.
ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಫಿಕ್ ಸಿಂದಗಿ ಮಾತನಾಡಿ, ವಿದ್ಯಾರ್ಥಿಗಳು ಈ ದೇಶದ ಸಂಪತ್ತು. ಇಂದಿನ ದಿನಮಾನದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮುಂದಾಗಬೇಕು. ಚುನಾವಣೆ ಸಂದರ್ಭದಲ್ಲಿ ಯಾರು ಹಿತವರು ಎಂಬುದನ್ನು ಗುರುತಿಸಿ ಯೋಚಿಸಿ ಮತ ಚಲಾಯಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹ್ಮದ್‌ಹುಸೇನ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಾರತೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ತಾಳಿಕೋಟೆ ತಾಲೂಕಾಧ್ಯಕ್ಷ ಫಯಾಜ್ ಬಾಗವಾನ, ಬಿ.ಎಸ್. ಗಬಸಾವಳಗಿ, ಸಿದ್ದನಗೌಡ ಪಾಟೀಲ, ಫಯಾಜ್ ಉತ್ನಾಳ, ಅಮೀರ ಬಾಗೇವಾಡಿ, ಸಂಗನಗೌಡ ಅಸ್ಕಿ (ಹಿರೂರ) ಇದ್ದರು.
ಐಶ್ವರ್ಯ ಹಿರೇಮಠ ಪ್ರಾರ್ಥಿಸಿದರು. ಸೋಮಶೇಖರಯ್ಯ ಹಿರೇಮಠ ಸ್ವಾಗತಿಸಿ ವಂದಿಸಿದರು.