ಕಳೆದ ಡಿಸೆಂಬರ್ 10ರಿಂದಲೇ ರಾಜ್ಯಾದ್ಯಂತ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ. ಇವರ ಪ್ರಮುಖ ಬೇಡಿಕೆಯೇ ವೇತನ ಪರಿಷ್ಕರಣೆ ಮಾಡಿ ಎಂಬುದಾಗಿದೆ. ಸದ್ಯ ನೆಟ್ ಮತ್ತು ಸ್ಲೆಟ್ ಮಾಡಿರುವವರಿಗೆ 11 ಸಾವಿರ ರೂ. ವೇತನ ಹಾಗೂ ಪಿಎಚ್‌ಡಿ ಪೂರೈಸಿರುವವರಿಗೆ 13 ಸಾವಿರ ರೂ. ವೇತನ ನೀಡಲಾಗುತ್ತಿದೆ. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಂತದ ಅತಿಥಿ ಶಿಕ್ಷಕರಲ್ಲಿಯೂ ಇದೇ ರೀತಿಯ ಸಮಸ್ಯೆ ಇದ್ದು, ಕೇವಲ 7,500 ರೂ. ವೇತನ ಪಡೆಯುತ್ತಿದ್ದಾರೆ.
ಈ ವೇತನದಿಂದ ಜೀವನ ಸಾಗಿಸುವುದು ತೀರಾ ಕಷ್ಟ. ಹೀಗಾಗಿ, ಕಡೇ ಪಕ್ಷ ಪಿಎಚ್‌ಡಿ ಪೂರೈಸಿರುವವರಿಗೆ 35,000 ಸಾವಿರ ರೂ., ನೆಟ್, ಸ್ಲೆಟ್ ಮುಗಿಸಿರುವವರಿಗೆ ಕನಿಷ್ಠ 30 ಸಾವಿರ ರೂ. ವೇತನ ಕೊಡಿ ಹಾಗೂ ಸೇವಾಭದ್ರತೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಸರಕಾರ ಡಿ.15ರಂದು ಜಿ.ಕುಮಾರನಾಯಕ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಗೆ ವರದಿ ನೀಡಲು ಜ.15ರ ಗಡುವು ನೀಡಿದೆ. ಸಮಿತಿಯ ವರದಿ ಬರಲಿ, ಆಮೇಲೆ ವೇತನ ಹೆಚ್ಚಳ ಮತ್ತು ಸೇವಾಭದ್ರತೆ ಬಗ್ಗೆ ಚಿಂತನೆ ನಡೆಸುವುದಾಗಿ ಸರಕಾರ ಹೇಳುತ್ತಿದೆ.
ಇದೇನೇ ಆಗಲಿ, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ಬೇಡಿಕೆ ಒಪ್ಪುವಂಥದ್ದೇ. ಇಂದಿನ ಹಣದುಬ್ಬರದ ಕಾಲದಲ್ಲಿ ಮಾಸಿಕವಾಗಿ ಕೇವಲ 11 ರಿಂದ 13 ಸಾವಿರ ರೂ. ವೇತನ ಪಡೆದುಕೊಂಡು ಬದುಕುವುದು ತೀರಾ ಕಷ್ಟಕರ. ಅಲ್ಲದೆ ಅವೆಷ್ಟೋ ಕಾಲೇಜುಗಳಲ್ಲಿ ಪಾಠ-ಪ್ರವಚನ ಘಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ. ಹೀಗಾಗಿ ಇವರ ಬೇಡಿಕೆಗೆ ಸರಕಾರ ಮನ್ನಿಸಿ ವಿವಾದ ಬಗೆಹರಿಸುವುದು ಸೂಕ್ತ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪೈಲಟ್ ತರಬೇತಿ ಕೇಂದ್ರ: ಪ್ರಹ್ಲಾದ್ ಜೋಷಿ
ಕೊರೊನಾ ಶುರುವಾದ ಮೇಲೆ ಶಾಲಾ-ಕಾಲೇಜುಗಳಲ್ಲಿ ಪಾಠ ಪ್ರವಚನ ಸರಿಯಾಗಿ ನಡೆದೇ ಇಲ್ಲ. ಆನ್‌ಲೈನ್ ಪಾಠದಲ್ಲಿ ಮಕ್ಕಳು ತಿಳಿದುಕೊಂಡದ್ದು ಅಷ್ಟೇ ಇದೆ. ಶಾಲಾ-ಕಾಲೇಜುಗಳು ಆರಂಭವಾಗಿ, ಸುಸ್ಥಿತಿಗೆ ಬರುತ್ತಿವೆ ಎಂದು ಅಂದುಕೊಳ್ಳುತ್ತಿರುವಾಗಲೇ ಈ ಪ್ರತಿಭಟನೆಯಿಂದಾಗಿ ತರಗತಿಗಳಲ್ಲಿ ಪಾಠ ಪ್ರವಚನ ಸರಿಯಾಗಿ ನಡೆದಿಲ್ಲ. ಹಾಗೆಯೇ ಈಗ ಒಮಿಕ್ರಾನ್ ಹಾವಳಿಯೂ ಹೆಚ್ಚಾಗಿದ್ದು, ರಾಜ್ಯ ಸರಕಾರ ಬೆಂಗಳೂರಿನಲ್ಲಿ 10, 11 ಮತ್ತು 12ನೇ ತರಗತಿ ಹಾಗೂ ವೈದ್ಯಕೀಯ, ಅರೆವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶಿಸಿದೆ.
ಈ ಎಲ್ಲ ಅಂಶಗಳನ್ನು ಇರಿಸಿಕೊಂಡು ರಾಜ್ಯ ಸರಕಾರ, ಬಹು ಕಾಲದಿಂದಲೂ ಹಾಗೆಯೇ ಇರುವ ಈ ಸಮಸ್ಯೆಗೆ ಮುಕ್ತಿ ನೀಡಬೇಕು. ಜಿ.ಕುಮಾರನಾಯಕ್ ಅವರ ಸಮಿತಿ ವರದಿ ನೀಡಲು ಇನ್ನೂ 10 ದಿನಗಳ ಕಾಲವಿದೆ. ಅದರೊಳಗೆ ಅತಿಥಿ ಉಪನ್ಯಾಸಕರ ಬೇಡಿಕೆಯಂತೆ ಒಂದು ಭರವಸೆಯನ್ನಾದರೂ ನೀಡಬೇಕು. ಈ ಮೂಲಕ ತತ್‌ಕ್ಷಣದಲ್ಲಿ ಪಾಠ-ಪ್ರವಚನ ಆರಂಭವಾಗುವಂತೆ ನೋಡಿಕೊಳ್ಳಬೇಕು.
ಇಲ್ಲದಿದ್ದರೆ ಭೌತಿಕ ತರಗತಿ ಬಂದ್ ಆಗಿ, ಆನ್‌ಲೈನ್‌ನಲ್ಲಿ ತರಗತಿ ಶುರುವಾದರೂ ಪಾಠ ಮಾಡಲು ಶಿಕ್ಷಕರಿಲ್ಲದೇ ಮಕ್ಕಳ ಮೇಲೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಈಗಾಗಲೇ ಕೊರೊನಾ ಕಾಲದಲ್ಲಿ ಮಕ್ಕಳ ಕಲಿಕೆಯ ಮಟ್ಟ ಕುಸಿತವಾಗಿದ್ದು,ಅತಿಥಿ ಉಪನ್ಯಾಸಕರ ಧರಣಿಯಿಂದ ಮತ್ತಷ್ಟು ಸಮಸ್ಯೆಗೆ ತುತ್ತಾಗುವಂತೆ ಮಾಡಬಾರದು.