ಮಂಡ್ಯ: ಲಾಕ್‌ಡೌನ್‌ನಿಂದ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿಗಳು ಸಾಕಷ್ಟು ನಷ್ಟ ಹೊಂದಿರುವುದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಆಗ್ರಹಿಸಿದರು. ನಾಗಮಂಗಲ ತಾಲೂಕಿನ ಶಿವನಹಳ್ಳಿ, ಪಿ.ನೇರಳೆಕೆರೆ, ಸುಖಧರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಳೆ ಬೆಳೆದು ನಷ್ಟ ಹೊಂದಿರುವ ರೈತರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು. ರೈತರು ಬೆಳೆದಿರುವ ಹೂ, ತರಕಾರಿಗಳು ಕಟಾವಿಗೆ ಬಂದಿವೆ. ಕೋವಿಡ್-19 ಪರಿಣಾಮ ದಿಂದ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆಯಾಗಿದೆ. ಒಮ್ಮೆ ತರಕಾರಿಗಳನ್ನು ಮಾರುಕಟ್ಟೆಗೆ ತಂದರೂ ಕೇಳುವವರೇ ಇಲ್ಲದಂತಾಗಿದೆ. ಇದರಿಂದ ದೇಶದ ಬೆನ್ನೆಲುಬಾದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆದ ಬೆಳೆಯನ್ನು
ಹೊಲದಲ್ಲೇ ಬಿಡಬೇಕಾದ ಸನ್ನಿವೇಶ ಎದುರಾಗಿದೆ ಎಂದು ಹೇಳಿದರು.
ರೈತರ ಬದುಕು ಮುಖ್ಯ. ಎಲ್ಲರಿಗೂ ಅನ್ನ ಕೊಡುವ ರೈತನ ಪರಿಸ್ಥಿತಿ ಚಿಂತಾಜನಕವಾದರೆ ಎಲ್ಲರ ಬದುಕು ಕಷ್ಟಕರವಾಗುತ್ತದೆ. ಜಿಲ್ಲಾಡಳಿತ ಈ ಬಗ್ಗೆ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿ ರೈತರ ನೆರವಿಗೆ ಧಾವಿಸಬೇಕು. ರೈತರಿಗೆ ಆಗಿರುವ ನಷ್ಟವನ್ನು ತುಂಬಲು ಸರ್ಕಾರವೇ ನೇರವಾಗಿ ತರಕಾರಿಯನ್ನು
ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ನರೇಂದ್ರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಸಹಕಾರ ಮಹಾ ಮಂಡಳಿ ನಿರ್ದೇಶಕ ರಾಜೇಗೌಡ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುಖಧರೆ ನಾರಾಯಣಗೌಡ, ಮಾಜಿ ತಾಪಂ ಸದಸ್ಯ ಹನುಮಂತು ಮತ್ತಿತರರು ಹಾಜರಿದ್ದರು.