ಶಹಾಪುರ: ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಆದರೆ ಇಲ್ಲಿನ ರಾಜ್ಯ ಸರ್ಕಾರ ಈ ಮಾರಕ ಕಾಯ್ದೆಗಳನ್ನು ಹಿಂಪಡೆಯದಿರುವುದು ಖಂಡನೀಯವಾಗಿದೆ. ಇದನ್ನು ವಿರೋಧಿಸಿ ಕರ್ನಾಟಕದಾದ್ಯಂತ ಐತಿಹಾಸಿಕ ಜಾಥಾ ಆಯೋಜಿಸಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಪ್ರಮುಖ ಎಸ್.ಆರ್. ಹಿರೇಮಠ ತಿಳಿಸಿದರು.
ನಗರದ ಮಾರುತಿ ಮಂದಿರ ಮುಂದುಗಡೆ ಬುಧವಾರ ಜನಾಂದೋಲನ ಮಹಾಮೈತ್ರಿಯ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋರ್ಟ್‌ನಿಂದ ಸಮಾಜ ಸುಧಾರಣೆ ಮಾಡಲು ಸಾಧ್ಯವಿಲ್ಲ. ಆದರೆ ಸಮಾಜದ ಪರಿವರ್ತನೆಗೆ ಊರುಗೋಲು ಆಗಬಲ್ಲದು. ಹೀಗಾಗಿ ಜನ ಜಾಗೃತಿ ಅಗತ್ಯವಿದೆ. ಕರಾಳ ಕಾಯ್ದೆಗಳ ಕುರಿತು ಪ್ರತಿ ರೈತನಲ್ಲಿ ಅರಿವು ಮೂಡಿಸಬೇಕಿದೆ. ಹಿಂದೆ ಊಳುವವನೇ ಭೂಮಿಯ ಒಡೆಯ ಎಂದು ಹೇಳಲಾಗುತಿತ್ತು. ಆದರೆ ಈಗಿನ ಸರ್ಕಾರ ಉಳ್ಳವನಿಗೆ ಭೂಮಿ ಇಲ್ಲದವನಿಗೆ ಯಾಕೆ ಭೂಮಿ ಎಂಬ ನೀತಿಯಡಿ ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಅಲ್ಪ ಭೂಮಿಯನ್ನು ಕಳೆದುಕೊಂಡು ಕೃಷಿಯಿಂದ ವಂಚಿತರಾಗಲಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 2020 ಹಿಂಪಡೆಯಬೇಕು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ಧಿ) ಕಾಯ್ದೆ 2020 ಹಿಂಪಡೆಯಬೇಕು, ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ ಹಿಂಪಡೆಯಬೇಕು ಎಂಬುದು ಜಾಥಾದ ಪ್ರಮುಖ ಉದ್ದೇಶವಾಗಿದೆ ಎಂದರು.
ರೈತ ಮುಖಂಡ ಭಾಸ್ಕರರಾವ್ ಮುಡಬೂಳ ಮಾತನಾಡಿ, ಯಾವುದೇ ಸರ್ಕಾರ ಜನ ಹಿತ ಕಾಯ್ದೆಗಳನ್ನು ಜಾರಿಗೆ ತರುವುದನ್ನು ಬಿಟ್ಟು ರೈತ ವಿರೋಧಿ ಶಾಸನಗಳನ್ನು ಜಾರಿಗೊಳಿಸಿದರೆ ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ರೈತರ ಪಾಲಿನ ಮೂರು ಕಾಯ್ದೆ ಹಿಂಪಡೆದರೆ ಮಾತ್ರ ರೈತರು ನೆಮ್ಮದಿ ಜೀವನ ನಡೆಸಲು ಸಾಧ್ಯ. ರೈತ ವಿರೋಧಿ ಕಾಯ್ದೆಯಿಂದ ಅದರ ಶಾಪ ತಟ್ಟುವುದರಲ್ಲಿ ಅನುಮಾನವಿಲ್ಲ ಎಂದರು.
ಚನ್ನಪ್ಪ ಆನೇಗುಂದಿ, ಖಾಜಾ ಅಸ್ಲಂ ಅಹ್ಮದ್, ಶರಣಪ್ಪ, ಎಸ್.ಎಂ. ಸಾಗರ, ವಿಶ್ವರಾಧ್ಯ ಸತ್ಯಂಪೇಟೆ, ಹಣಮಂತ ಭಂಗಿ ಇದ್ದರು.