Advertisement

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

11:14 PM May 22, 2024 | Team Udayavani |

ಬಿರುಬೇಸಗೆ ಅನಂತರ ಮಳೆ ಬೀಳಲು ಪ್ರಾರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಕಲುಷಿತ ನೀರಿನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾ ಮಯ್ಯನವರ ತವರು ಜಿಲ್ಲೆ ಮೈಸೂರಿನ ಕೆ. ಸಾಲುಂಡಿ ಗ್ರಾಮದ 22 ವರ್ಷದ ಯುವಕನೊಬ್ಬ ಕಲುಷಿತ ನೀರು ಸೇವಿಸಿ ಮೃತಪಟ್ಟಿರುವುದು ತಾಜಾ ಉದಾ ಹರಣೆ. ಈ ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಈ ವರ್ಷ ರಾಜ್ಯದ ಹಲವೆಡೆ ಈ ಕಲುಷಿತ ನೀರಿನ ಪ್ರಕರಣಗಳು ವರದಿಯಾಗಿವೆ.

Advertisement

ಬರಗಾಲ ಮತ್ತು ಮಳೆ ಇವೆರಡಕ್ಕೂ ಕಲುಷಿತ ನೀರಿಗೂ ಪರಸ್ಪರ ಸಂಬಂಧ ಇದೆ. ಬರಗಾಲದಲ್ಲಿ ಅಂತರ್ಜಲ ಮಟ್ಟ ಕುಸಿದಾಗ ಮಾನವ ಜೀವಕ್ಕೆ ಅಪಾಯಕಾರಿ ರಾಸಾಯನಿಕಗಳು ನೀರಿಗೆ ಸೇರಿ ಅದು ಕಲುಷಿತಗೊಳ್ಳುತ್ತದೆ. ಅದೇ ರೀತಿ ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿಗಳು ತುಂಬಿ ಅಲ್ಲಿನ ಕಲ್ಮಶ ನೀರು ಕುಡಿಯುವ ನೀರಿಗೆ ಸೇರಿಕೊಂಡರೆ ಅದು ಸಹ ನೀರು ಕಲುಷಿತಗೊಳ್ಳಲು ಕಾರಣವಾಗುತ್ತದೆ. ಇದರ ಸೇವನೆ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿತ್ರದುರ್ಗ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಜನ ಪ್ರಾಣ ಕಳೆದುಕೊಂಡಿದ್ದರು. ಇಂತಹದ್ದೆ ಘಟನೆ ರಾಯಚೂರು ಜಿಲ್ಲೆಯಲ್ಲೂ ನಡೆದಿತ್ತು. ಆಗ ಎಚ್ಚೆತ್ತುಕೊಂಡಿದ್ದ ಸರಕಾರ “ನೈರ್ಮಲ್ಯ ಅಭಿಯಾನ’ ಘೋಷಣೆ ಮಾಡಿತ್ತು. ಆದರೆ ಮುಂದೆ ಆ ಅಭಿಯಾನ ಏನಾಯಿತು ಎಂದು ತಿಳಿದಿಲ್ಲ.

ಕಲುಷಿತ ನೀರು ಸೇವಿಸಿದ ಪ್ರಕರಣಗಳು ವರದಿಯಾದ ತತ್‌ಕ್ಷಣ ಆರಂಭ ಶೂರತ್ವ ತೋರಿಸುವ ಆಡಳಿತ ವರ್ಗ ಸತ್ತವರಿಗೆ ಪರಿಹಾರ, ಅಸ್ವಸ್ಥರ ಚಿಕಿತ್ಸಾ ವೆಚ್ಚ ಭರಿಸುವುದು, ಒಂದಿಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುವ ಅಲ್ಪಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ದೀರ್ಘ‌ಕಾಲಿಕ ಕ್ರಮಗಳ ಬಗ್ಗೆ ಅಷ್ಟೊಂದು ಗಂಭೀರತೆ ತೋರುವುದಿಲ್ಲ. ಇಂತಹ ಪ್ರಕರಣಗಳು ನಡೆದಾಗ ಅಲ್ಪಕಾಲಿಕ ಕ್ರಮಗಳು ಎಷ್ಟು ಆವಶ್ಯಕವೋ ದೀರ್ಘ‌ಕಾಲಿಕ ಕ್ರಮಗಳು, ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಷ್ಟೇ ಮುಖ್ಯ. ಬರ ಮತ್ತು ನೆರೆಯಿಂದಾಗಿ ನೀರು ಕಲ್ಮಷಗೊಳ್ಳಲು ಪ್ರಕೃತಿ ವಿಕೋಪ ಕಾರಣ ಎಂಬ ಸಿದ್ದ ಸಬೂಬುಗಳನ್ನು ಹೇಳುವುದನ್ನು ಬಿಟ್ಟು, ಆಡಳಿತ ವರ್ಗ ನಿರ್ಲಕ್ಷ್ಯಗಳತ್ತ ಗಮನ ಹರಿಸಬೇಕು.

ಬರಗಾಲ ಮತ್ತು ಮಳೆ ಜತೆಗೆ ಕಲುಷಿತ ನೀರು ಸಮಸ್ಯೆಗೆ ಮುಖ್ಯವಾಗಿ ಶುದ್ಧ ನೀರು ಪೂರೈಕೆ ವ್ಯವಸ್ಥೆಯ ಕೊರತೆ ಒಂದು ಕಡೆಯಾದರೆ; ನದಿ-ಹಳ್ಳ- ಕೆರೆಗಳಿಗೆ ವಿವಿಧ ತ್ಯಾಜ್ಯಗಳ ಯಥೇತ್ಛ ಸೇರುವಿಕೆ, ಮಿತಿ ಮೀರಿದ ರಸ ಗೊಬ್ಬರ-ಕ್ರಿಮಿನಾಶಕ ಬಳಕೆ, ಬಯಲು ಬಹಿರ್ದೆಸೆ ಹಾಗೂ ಆರ್ಸೆನಿಕ್‌ ಅಂಶ ಸೇರ್ಪಡೆಯೂ ಕಾರಣವಾಗುತ್ತಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ-2030ರಕ್ಕೆ ಪೂರಕವಾಗಿ 2020ರಲ್ಲಿ ಪ್ರಕಟಿಸಲಾದ “ಕರ್ನಾಟಕದ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆ’ ಯಲ್ಲಿ 2030ರ ವೇಳೆಗೆ ಎಲ್ಲರಿಗೂ ಶುದ್ಧವಾದ ಕುಡಿಯುವ ನೀರನ್ನು ಸಮರ್ಪಕ ಪ್ರಮಾಣದಲ್ಲಿ ಒದಗಿಸುವುದನ್ನು ಗುರಿಯನ್ನಾಗಿಟ್ಟುಕೊಳ್ಳಲಾಗಿದೆ. ಹಿಂದಿನ ವರ್ಷಗಳಲ್ಲಿ ಈ ಗುರಿ ಸಾಧನೆಯಲ್ಲಿನ ಪ್ರಗತಿ ಅಷ್ಟೊಂದು ಸಮಾ ಧಾನಕರವಾಗಿಲ್ಲ. ಮನೆಯ ಆವರಣದಲ್ಲಿ ಸುರಕ್ಷಿತ ಮತ್ತು ಸಾಕಷ್ಟು ಪ್ರಮಾಣದ ನೀರು ಹೊಂದುವ ಮನೆಗಳ ಸಂಖ್ಯೆಯನ್ನು 2030ರ ವೇಳೆಗೆ ಗ್ರಾಮೀಣ ಭಾಗದಲ್ಲಿ ಶೇ.96 ಹಾಗೂ ನಗರ ಪ್ರದೇಶದಲ್ಲಿ ಶೇ.98 ಆಗಬೇಕು ಎಂದು ಗುರಿ ಹಾಕಿಕೊಳ್ಳಲಾಗಿದೆ. ಆದರೆ ಸದ್ಯ ಗ್ರಾಮೀಣ ಭಾಗದಲ್ಲಿ ಇದರ ಪ್ರಗತಿ ತುಂಬಾ ಕಡಿಮೆ (ಶೇ. 60) ಇದೆ. ಇತ್ತೀಚಿಗೆ ನಡೆದ ಘಟನೆಗಳು ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಸಕ್ರಿಯಗೊಳ್ಳಬೇಕು. ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂದೆ ಸಂಭವಿಸಬಹುದಾದ ಅವಘಡಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಸ್ಥಳೀಯ ಆಡಳಿತ ಕಾರ್ಯೋನ್ಮುಖವಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next