Advertisement

ಕೈಗಾರಿಕೆಗಳು ರಾಜ್ಯ ಬಿಟ್ಟು ಹೋಗದಂತೆ ಸರಕಾರ ತಡೆಯಲಿ

12:54 AM Mar 08, 2022 | Team Udayavani |

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ರಾಜ್ಯದ ಆರ್ಥಿಕ ಎಂಜಿನ್‌ ಮಾತ್ರವಲ್ಲ; ಅವಕಾಶಗಳ ಹೆಬ್ಟಾಗಿಲು ಕೂಡ ಆಗಿದೆ. ಕೇವಲ ಎರಡು ವರ್ಷಗಳ ಹಿಂದಿನ ಮಾತು. ಹೂಡಿಕೆದಾರರಿಗೆ ಸಿಲಿಕಾನ್‌ ಸಿಟಿ “ಅಚ್ಚುಮೆಚ್ಚು’ ಆಗಿತ್ತು. ಆದರೆ, ಈಗ ಹೂಡಿಕೆದಾರರು ನೆರೆಯ ರಾಜ್ಯಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಜತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಕೂಡ ರಾಷ್ಟ್ರೀಯ ಬೆಳವಣಿಗೆಗೆ ಹೋಲಿಸಿದರೆ, ಅತ್ಯಂತ ಕಳಪೆಯಾಗಿದೆ. ಇದು ಆರ್ಥಿಕ ಸಮೀಕ್ಷೆ ವರದಿಯಲ್ಲೇ ಬಹಿರಂಗಗೊಂಡಿದ್ದು, ಈ ಬೆಳವಣಿಗೆ ಬಗ್ಗೆ ವರದಿಯಲ್ಲಿ ತೀವ್ರ ಆತಂಕವೂ ವ್ಯಕ್ತವಾಗಿದೆ.

Advertisement

ಸಾಮಾನ್ಯವಾಗಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಬೆಂಗಳೂರಿನಲ್ಲಿ ಮನೆ ಮಾಡುವುದು ದುಬಾರಿಯಾಗಿತ್ತು. ಆದರೆ, ಹೂಡಿಕೆದಾರರಿಗೂ ಇದರ ಬಿಸಿ ತಟ್ಟುತ್ತಿರುವುದು ಭೂಮಿಯ ಬೆಲೆ ಎಷ್ಟರಮಟ್ಟಿಗೆ ಏರಿಕೆಯಾಗುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಸಾಮಾನ್ಯವಾಗಿ ಕೈಗಾರಿಕೆಯೊಂದರ ಮೂಲ ಹೂಡಿಕೆಯಲ್ಲಿ ಭೂಮಿಗೆ ಶೇ. 20ರಷ್ಟು ವೆಚ್ಚ ತಗುಲುತ್ತದೆ. ಆದರೆ ಉದ್ಯಾನ ನಗರಿಯಲ್ಲಿ ಈ ವೆಚ್ಚ ದುಪ್ಪಟ್ಟು ಆಗುತ್ತದೆ. ಇದರ ಜತೆಗೆ ಮೂಲಸೌಕರ್ಯಗಳ ಕೊರತೆ ಕೂಡ ಕಾಡುತ್ತಿದೆ.

ಹಾಗೆ ನೋಡಿದರೆ ಪ್ರತಿ ವರ್ಷ ಬೆಂಗಳೂರು ಅಭಿವೃದ್ಧಿಗಾಗಿ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಹಣದ ಹೊಳೆಯನ್ನೇ ಹರಿಸುತ್ತವೆ. ಈಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕೂಡ ಸುಮಾರು 8,409 ಕೋಟಿ ರೂ.
ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ, ಮೇಲ್ಸೇತುವೆ, ಗ್ರೇಡ್‌ ಸಪರೇಟರ್‌ ಮತ್ತಿತರ ಯೋಜನೆಗಳಿಗೇ ಗರಿಷ್ಠ ಪ್ರಮಾಣದಲ್ಲಿ ನೀಡಲಾಗಿದೆ. ಆದರೂ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ತನ್ನ “ಅಭಿವೃದ್ಧಿ ಪಥ’ದ ಅವಲೋಕನ ಮಾಡಿಕೊಳ್ಳುವ ಆವಶ್ಯಕತೆ ಇದೆ.

ಮುಖ್ಯವಾಗಿ ಅಭಿವೃದ್ಧಿಯ ವೇಗ ಮಂದಗತಿಯಲ್ಲಿ ಸಾಗುತ್ತಿದ್ದರೆ, ಮತ್ತೂಂದೆಡೆ ಸುಸ್ಥಿರ ಮತ್ತು ದೂರದೃಷ್ಟಿಯ ಕೊರತೆ ಕಾಡುತ್ತಿದೆ. ಉದಾಹರಣೆಗೆ, ಹೊರವರ್ತುಲ ರಸ್ತೆ ಮತ್ತು ಪೆರಿಫ‌ರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ಯೋಜನೆ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಕಳೆದ ಒಂದು ದಶಕದಲ್ಲಿ ಹತ್ತಾರು ಫ್ಲೈಓವರ್‌ಗಳು ತಲೆಯೆತ್ತಿವೆ. ಇದರ ನಡುವೆಯೂ ವಿಶ್ವದಲ್ಲಿ ಅತಿಹೆಚ್ಚು ಸಂಚಾರದಟ್ಟಣೆಯುಳ್ಳ ನಗರ ಎಂಬ ಹಣೆಪಟ್ಟಿ ಕೂಡ ಇದೆ. ಇನ್ನು ಶಾಶ್ವತ ಪರಿಹಾರ ನೀಡಬೇಕಾದ “ನಮ್ಮ ಮೆಟ್ರೋ’ ಒಂದು ದಶಕದಲ್ಲಿ ಕೇವಲ 53 ಕಿ.ಮೀ. ನಿರ್ಮಾಣವಾಗಿದೆ. ಉಪನಗರ ರೈಲು ಯೋಜನೆ ಇನ್ನೂ ಅನುಷ್ಠಾನ ಕೂಡ ಆಗಿಲ್ಲ.

ಕೇವಲ ಮೂಲಸೌಕರ್ಯ ಅಲ್ಲ; ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಪರವಾನಿಗೆಗಳಿಗಾಗಿ ಅಲೆದಾಟ ತಪ್ಪಿಸಲು ರೂಪಿಸಿದ್ದ ಏಕಗವಾಕ್ಷಿ ವ್ಯವಸ್ಥೆ ಕೂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೇರವಾಗಿ ಹೇಳಲಾಗಿದೆ. ಈ ಮಧ್ಯೆ ಪ್ರತೀ ವರ್ಷ ವಿದ್ಯುತ್‌ ದರ ಏರಿಕೆ ಶಾಕ್‌ ಪ್ರತಿ ವರ್ಷ ತಟ್ಟುತ್ತಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ವಿದ್ಯುತ್‌ ದರ ಹೆಚ್ಚಿದೆ. ನಮ್ಮಲ್ಲಿನ ಈ ಲೋಪಗಳು ನೆರೆಯವರಿಗೆ “ವರ’ವಾಗಿ ಪರಿಣಮಿಸುತ್ತಿವೆ. ಹೀಗೆ ಕೈಗಾರಿಕೆಗಳ ವಲಸೆಯು ಭವಿಷ್ಯದಲ್ಲಿ ಉದ್ಯೋಗಗಳ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ರಾಜ್ಯದ ಉತ್ಪಾದಕತೆ ಹಾಗೂ ಆಂತರಿಕ ಉತ್ಪನ್ನದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ.

Advertisement

ಹೀಗಾಗಿ ಯಾವುದೇ ಕಾರಣಕ್ಕೂ ಕೈಗಾರಿಕೆಗಳು ರಾಜ್ಯ ಬಿಟ್ಟು ಹೋಗದಂತೆ ನೋಡಿಕೊಳ್ಳ ಬೇಕು, ಕೈಗೆಟಕುವದರದಲ್ಲಿ ಭೂಮಿ ಸಿಗುವಂತೆ ಮಾಡುವ ಜವಾಬ್ದಾರಿ ರಾಜ್ಯ ಸರಕಾರದ ಕೈಯ ಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next