Advertisement

ಸರ್ಕಾರಿ ಕಚೇರಿ ತಂಬಾಕು ಮುಕ್ತವಾಗಲಿ

02:51 PM Mar 13, 2021 | Team Udayavani |

ತುಮಕೂರು: ಜಿಲ್ಲೆಯಲ್ಲಿನ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತಮಾಡುವುದರ ಮೂಲಕ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

Advertisement

.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ (ಕೋಟ್ಪಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಠಿಣ ಕ್ರಮಕ್ಕೆ ಸೂಚನೆ: ಶಾಲಾ-ಕಾಲೇಜುಗಳ 100 ಗಜಗಳ ಅಂತರದಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಮಕ್ಕಳು ತಂಬಾಕು ಮುಕ್ತ ಸ್ವಸ್ಥ್ಯ ಜೀವನ ನಡೆಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಗಳು, ಪುರಸಭೆಗಳು ಹಾಗೂ ಮಹಾ ನಗರಪಾಲಿಕೆಗಳವತಿಯಿಂದ ಅಂತಹ ವರ್ತಕರ ಮೇಲೆ ಕ್ರಮತೆಗೆದುಕೊಂಡು, ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಮಾಡಬೇಕು ಎಂದರು.

ಶೈಕ್ಷಣಿಕ ಸಂಸ್ಥೆ ತಂಬಾಕು ಮುಕ್ತವಾಗಲಿ: ನಿಯಮಿತವಾಗಿ ಕೋಟ್ಪಾಕಾಯಿದೆಯ ಕಾರ್ಯಾಚರಣೆಯನ್ನು ನಡೆಸಬೇಕು. ಜಿಲ್ಲೆಯಲ್ಲಿನ ಪ್ರತಿ ಶೈಕ್ಷಣಿಕ ಸಂಸ್ಥೆಯನ್ನು ತಂಬಾಕುಮುಕ್ತ ಮಾಡಬೇಕಾಗಿದೆ ಎಂದು ತಿಳಿಸಿದರು.

ಪೊಲೀಸ್‌ ಇಲಾಖೆಗೆ ಸೂಚನೆ: ತಂಬಾಕು ಉತ್ಪನ್ನಗಳ ಕುರಿತಾದ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹಿ ರಾತುಗಳು ಹಾಗೂ ಎಚ್ಚರಿಕೆ ಸಂದೇಶವಿಲ್ಲದ, ವಿದೇಶಿ ಸಿಗರೆಟುಗಳ ಮಾರಾಟದ ಮೇಲೆ ನಿಗಾವಹಿಸಿ, ಉಲ್ಲಂಘನೆಗಳಿಗೆ ಎಫ್ಐಆರ್‌ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

Advertisement

ಕೋಟ್ಪಾ ಅನುಷ್ಠಾನ ಕಾರ್ಯಾಚರಣೆ: ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿರಾಘವೇಂದ್ರ ಶೆಟ್ಟಿಗಾರ್‌ ಮಾತನಾಡಿ, ಜಿಲ್ಲೆಯಲ್ಲಿನ ಬಸ್‌ ನಿಲ್ದಾಣಗಳಲ್ಲಿ ಕಂಡ ಕಂಡಲ್ಲಿ ಉಗುಳುತ್ತಿದ್ದು,ಇದು ಅನಾರೋಗ್ಯಕರ ಹಾಗೂ ಅಸಹ್ಯಕರ ಅಭ್ಯಾಸವಾಗಿದೆ. ತಾಲೂಕು ಮಟ್ಟದಲ್ಲಿ ತಿಂಗಳಿಗೆ ಒಂದು ಬಾರಿ ಕೋಟ್ಪಾ ಅನುಷ್ಠಾನ ಕಾರ್ಯಾಚರಣೆಯನ್ನು ನಡೆಸಬೇಕು ಹಾಗೂ ಅದರ ಪ್ರಗತಿ ಪರಿಶೀಲನೆಯನ್ನು ನಡೆಸಬೇಕು, ಇದರಿಂದ ತಂಬಾಕು ಕಾಯಿದೆ ಉಲ್ಲಂಘನೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.

ಆಪ್ತ ಸಮಾಲೋಚನೆ: ಜಿಲ್ಲಾ ಸರ್ವೇಲೆನ್ಸ್‌ ಅಧಿಕಾರಿಗಳು ಹಾಗೂ ರಾಷ್ಟ್ರೀಯ ತಂಬಾಕುನಿಯಂತ್ರಣ ಕಾರ್ಯ ಕ್ರಮಾಧಿಕಾರಿಗಳೂ ಆಗಿರುವ ಡಾ. ಮೋಹನ್‌ ದಾಸ್‌ ಮಾತನಾಡಿ, ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ಒಟ್ಟು 104 ಶಾಲೆಗಳಲ್ಲಿ ಒಟ್ಟು 18,222 ಮಕ್ಕಳಿಗೆ ತಂಬಾಕು ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯಿದೆಯ ಕುರಿತು ಅರಿವು ಮೂಡಿಸಲಾಗಿದೆ. ಪ್ರಸ್ತುತ 69 ಅನುಷ್ಠಾನ ಕಾರ್ಯಾಚರಣೆ ಗಳನ್ನು ನಡೆಸಿ ಒಟ್ಟು 1699 ಪ್ರಕರಣಗಳಲ್ಲಿ ರೂ.1,71,070 ದಂಡವನ್ನು ವಿಧಿಸಲಾಗಿದೆ. 1815 ತಂಬಾಕು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುರೇಶ್‌ ಬಾಬು, ಪೊಲೀಸ್‌, ಶಿಕ್ಷಣ, ಕೆಎಸ್‌ಆರ್‌ಟಿಸಿ, ಅಬಕಾರಿ, ಅಗ್ನಿಶಾಮಕ, ತೋಟಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಐಪಿಎಚ್‌, ಬೆಂಗಳೂರುಸಂಸ್ಥೆಯ ಸಿಬ್ಬಂದಿ, ವಿವಿಧ ತಾಲೂಕುಗಳ ವೈದ್ಯಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next